BY Vijayendra: ಬಿಜೆಪಿಯ 'ವಯಸ್ಸಿನ' ಮಾನದಂಡವನ್ನೇ ತುಳಿದು ಮತ್ತೆ ಪುಟಿದೆದ್ದ ಬಿಎಸ್ ಯಡಿಯೂರಪ್ಪ
ಬೆಂಗಳೂರು, ನವೆಂಬರ್ 10: ಬಿಜೆಪಿ ಹೈಕಮಾಂಡ್ ವಿರುದ್ಧ ಬಿಎಸ್ ಯಡಿಯೂರಪ್ಪ ಅವರು ಮತ್ತೆ ಸಾಮಾರ್ಥ್ಯ ಸಾಬೀತು ಮಾಡಿಕೊಂಡಿದ್ದಾರೆ. ವಯಸ್ಸಿನ ಕಾರಣ ನೀಡಿ ಬದಿಗೆ ಸರಿಸುವ ಹುನ್ನಾರಕ್ಕೆ ಅವರು ಬಗ್ಗುವುದಿಲ್ಲ ಎಂದು ತೋರಿಸಿದ್ದಾರೆ.
ಕೊನೆಗೂ ಬಿಜೆಪಿ ಹೈಕಮಾಂಡ್ ಬಿಎಸ್ ಯಡಿಯೂರಪ್ಪ ಅವರ ಮಗ ಬಿವೈ ವಿಜಯೇಂದ್ರ ಅವರನ್ನು ಕರ್ನಾಟಕದ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದೆ. ಬಿಜೆಪಿ ಹೈಕಮಾಂಡ್ 75 ವರ್ಷ ಮೀರಿದ ಹಿರಿಯ ನಾಯಕರನ್ನು ಎಲ್ಲ ರಾಜ್ಯಗಳಲ್ಲೂ ಮೂಲೆಗೆ ಸೇರಿಸುತ್ತಾ ಬಂದಿದ್ದು ದೇಶದುದ್ದಲಗಲಕ್ಕೂ ಗೊತ್ತಿರುವ ವಿಷಯವೇ. ಆದರೆ ಕರ್ನಾಟಕದ ಪಾಲಿಗೆ ಅದು ವರ್ಕ್ ಆಗಲಿಲ್ಲ.

ಬಿಎಸ್‌ವೈ ಅವರನ್ನು ಬದಿಗೆ ಸರಿಸಿದರ ಪರಿಣಾಮ ಮೇ ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ ಹೀನಾಯ ಸೋಲು ಉಂಟಾಯಿತು. ಇದಕ್ಕೆ ಕಾರಣ ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಚುನಾವಣೆ ನಡೆಯದೇ ಇದ್ದದ್ದು, ಇದಕ್ಕೆ ಕಾರಣ ಕೇಂದ್ರದಲ್ಲಿ ಅಧಿಕಾರಲ್ಲಿರುವ ರಾಜ್ಯದವರೇ ಆದ ನಾಯಕ ಹಲವಾರು ಮಂದಿ ಮಾತನಾಡಿಕೊಂಡದ್ದು ಉಂಟು.
ವಿಶ್ವಾಸಕ್ಕೆ ತೆಗೆದುಕೊಳ್ಳದ ಹೈಕಮಾಂಡ್:
ಆದರೆ ಬಿಎಸ್ ಯಡಿಯೂರಪ್ಪ ಅವರ ಸಾಮಾರ್ಥ್ಯ ತೋರಿಸಲು ಇದು ಬೇಕಾಗಿತ್ತು, ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಹೈಕಮಾಂಡ್‌ಗೆ ಅವರು ಮತ್ತೆ ರಾಜ್ಯದಲ್ಲಿ ಬಿಜೆಪಿ ಕಮರಿ ಹೋಗುವ ಮುನ್ಸೂಚನೆ ನೀಡಿದರು. ಹಿಂದೆ ಬಿಜೆಪಿ ತೊರೆದು ಕೆಜೆಪಿ ಕಟ್ಟಲು ಮುಂದಾಗಿದ್ದ ಅವರನ್ನು ಮತ್ತೆ ಕಳೆದುಕೊಳ್ಳುವ ತಪ್ಪನ್ನು ಹೈಕಮಾಂಡ್ ಮಾಡಬೇಡಿ ಎಂದು ಹಲವರು ಸೂಚನೆ ನೀಡಿದ್ದಂತಿದೆ.
ತಾಳ್ಮೆ ಪರೀಕ್ಷಿಸುವ ತಂತ್ರ:
ಬಿಜೆಪಿ ರಾಜ್ಯಾಧ್ಯಕ್ಷ ಅಧಿಕಾರವಧಿ ಮುಗಿದು ಹಲವಾರು ತಿಂಗಳುಗಳೇ ಆಗಿದ್ದರೂ ನಳಿನ್ ಕುಮಾರ್ ಕಟೀಲ್ ಅವರನ್ನೇ ಮುಂದುವರೆಸಿದ್ದು ಬಿಎಸ್ ಯಡಿಯೂರಪ್ಪ ಅವರ ತಾಳ್ಮೆ ಪರೀಕ್ಷಿಸುವ ತಂತ್ರವೇ ಆಗಿತ್ತು, ಆದರೆ ತುಳಿದಷ್ಟು ಮೇಲೇಳುವ ಯಡಿಯೂರಪ್ಪ ಅವರು ಕೊನೆಗೂ ತಮ್ಮ ಮಾತು ನಡೆಯಬೇಕು ಎಂದು ಅರ್ಥ ಮಾಡಿಸಿದರು.
ವಿಜಯೇಂದ್ರ ರಾಜ್ಯಾಧ್ಯಕ್ಷ:
ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಆಯ್ಕೆ ವಿಚಾರ ಬಂದಾಗ ಲಿಂಗಾಯತ ಸಮುದಾತ ರಾಜ್ಯದ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಅದೇ ಸಮುದಾಯಕ್ಕೆ ಸೇರಿದ ಬಿಎಸ್ ಯಡಿಯೂರಪ್ಪ ಅವರ ಮಗ ಶಾಸಕ ಬಿವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಮಾಡುವ ಮೂಲಕ ಯಡಿಯೂರಪ್ಪ ಅವರ ನೆರವನ್ನು ಹೈಕಮಾಂಡ್ ಕೇಳಲೇಬೇಕಿದೆ.

ವಿಜಯೇಂದ್ರಗೇ ದಾರಿ ಸುಗಮ:
ಹಲವಾರು ಬಾರಿ ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆಗೆ ಯಡಿಯೂರಪ್ಪ ಅವರು ತಮ್ಮ ಮಗ ಬಿವೈ ವಿಜಯೇಂದ್ರ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೆಸರನ್ನು ಸೂಚಿಸಿದ್ದರು ಎನ್ನಲಾಗಿತ್ತು. ಆದರೆ ಶೋಭಾ ಅವರು ರಾಜ್ಯಾಧ್ಯಕ್ಷರಾಗುವ ಇಚ್ಚೆ ಇಲ್ಲ ಎಂದಾಗ ಅದು ಬಿವೈ ವಿಜಯೇಂದ್ರಗೇ ದಾರಿ ಸುಗಮವಾಗುವಂತೆ ಮಾಡಿತು. ಮುಂಬುರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಹುದ್ದೆ ಲಿಂಗಾಯತ ಸಮುದಾಯಕ್ಕೆ ರಾಜ್ಯದಾದ್ಯಂತ ಪರಿಚಿತ ಮುಖಕ್ಕೆ ನೀಡದಿದ್ದರೆ ಕಾಂಗ್ರೆಸ್ ಇಲ್ಲೂ 20 ಸ್ಥಾನ ಗೆಲ್ಲುವ ಸಾಧ್ಯತೆ ಇರುವುದರಿಂದ ಈಗ ಹೈಕಮಾಂಡ್ ಬುದ್ದಿ ಉಪಯೋಗಿಸಿದಂತೆ ಕಾಣುತ್ತಿದೆ.
ರಾಜ್ಯಾಧ್ಯಕ್ಷ ಹುದ್ದೆಗೆ ಟವಲ್:
ಬಿಜೆಪಿ ಹಿರಿಯ ನಾಯಕರೂ ಸೇರಿದಂತೆ ಹಲವಾರು ಮಂದಿ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಟವಲ್ ಹಾಕಿದ್ದು ಗುಟ್ಟೇನಲ್ಲ. ಆದರೆ ಲೋಕಸಭಾ ಚುನಾವಣೆ ದೃಷ್ಟಿ ಹಾಗೂ ರಾಜ್ಯದಲ್ಲಿ ಮತ್ತೆ ಪಕ್ಷ ಸಂಘಟಿಸುವ ಉದ್ದೇಶದಿಂದ ಈಗ ಬಿವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಮತ್ತೆ ಬಿಜೆಪಿ ಸಂಘಟಿಸುವ ಕೆಲಸ:
ಬಿವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಸೂಚನೆ ಸಿಕ್ಕಿದ್ದರಿಂದಲೇ ಯಡಿಯೂರಪ್ಪ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬರ ಅಧ್ಯಯನದ ಮೂಲಕ ಮತ್ತೆ ಬಿಜೆಪಿ ಸಂಘಟಿಸುವ ಕೆಲಸಕ್ಕೆ ಕೈಹಾಕಿದಂತಿದೆ. ಹೀಗಾಗಿ ಬಿಎಸ್ ವೈ ಅವರ ನಾಯಕತ್ವ ಹಾಗೂ ಮಾತು ರಾಜ್ಯದಲ್ಲಿ ಮತ್ತೆ ಕೆಲಸ ಮಾಡಿದೆ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸೋತಾಗ ಬಿಎಸ್ ಯಡಿಯೂರಪ್ಪನವರ ದುಃಖ ಸಮುದಾಯಕ್ಕೆ ಅರ್ಥವಾದಂತಿತ್ತು. ಆಗ ಸಮುದಾಯದ ಸ್ವಾಮೀಜಿಗಳ ಅಸಮಾಧಾನ, ಆಕ್ರೋಶದ ಮಾತುಗಳು ಹೈಕಮಾಂಡ್ ಕಣ್ಣು ತೆರೆಸಲಿಲ್ಲ. ಕಾದು ನೋಡುವ ತಂತ್ರವೂ ಫಲಿಸಲಿಲ್ಲ. ಈಗ ಕೇಂದ್ರ ಯಡಿಯೂರಪ್ಪ ಅವರ ಕಾಲು ಹಿಡಿಯಬೇಕಾಗಿದೆ.











Click it and Unblock the Notifications