ಹುಟ್ಟು ಹಬ್ಬದ ಮುನ್ನಾ ದಿನ ಯಡಿಯೂರಪ್ಪ ಟ್ವೀಟ್
ಶಿವಮೊಗ್ಗ, ಫೆಬ್ರವರಿ 26 : ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಫೆಬ್ರವರಿ 27ರಂದು 78ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಹುಟ್ಟು ಹಬ್ಬದ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.
ಹುಟ್ಟು ಹಬ್ಬದ ಮುನ್ನಾ ದಿನ ಯಡಿಯೂರಪ್ಪ ಅಭಿಮಾನಿಗಳಿಗೆ, ಹಿತೈಪಿಗಳಿಗೆ, ಬಿಜೆಪಿ ಕಾರ್ಯಕರ್ತರಿಗೆ ಮನವಿಯೊಂದನ್ನು ಮಾಡಿದ್ದಾರೆ. "ನಾಡಿನ ಸಮಸ್ತ ಜನತೆ, ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ಬಂಧುಗಳಲ್ಲಿ ವಿನಯಪೂರ್ವಕ ಮನವಿ" ಎಂದು ಬುಧವಾರ ಟ್ವೀಟ್ ಮಾಡಿದ್ದಾರೆ.
ಗುರುವಾರ ಸಂಜೆ 5 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಯಡಿಯೂರಪ್ಪಗೆ ಅಭಿನಂದನಾ ಸಮಾರಂಭವನ್ನು ಆಯೋಜನೆ ಮಾಡಲಾಗಿದೆ. ವೈಟ್ ಪೆಟಲ್ಸ್, ಗೇಟ್ ನಂ 3ರಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಯಡಿಯೂರಪ್ಪ ಹುಟ್ಟು ಹಬ್ಬದ ಅಂಗವಾಗಿ ಗುರುವಾರ 'ಧಣಿವರಿಯದ ಧೀಮಂತ' ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಗುತ್ತದೆ. ಹುಟ್ಟು ಹಬ್ಬದ ಮುನ್ನಾ ದಿನ ಯಡಿಯೂರಪ್ಪ ಮಾಡಿರುವ ಟ್ವೀಟ್ ಏನು? ಚಿತ್ರಗಳಲ್ಲಿ ನೋಡಿ.

ನಿಮ್ಮೆಲ್ಲರ ಪ್ರೀತಿ
"ನಾಡಿನ ಸಮಸ್ತ ಜನತೆ, ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ಬಂಧುಗಳಲ್ಲಿ ವಿನಯಪೂರ್ವಕ ಮನವಿ.
ಎಲ್ಲರ ಹಾರೈಕೆ, ಹರಕೆ ಹಾಗೂ ಆಶಿರ್ವಾದಗಳಿಂದಲೇ ನಿಮ್ಮಲ್ಲರ ಸೇವೆ ಮಾಡುವ ಸ್ಥಾನದ ಸೌಭಾಗ್ಯವನ್ನು ಪಡೆದಿದ್ದೇನೆ. ನನ್ನ ಜೀವನದ ಎಲ್ಲ ಘಟ್ಟಗಳಲ್ಲೂ ನಿಮ್ಮೆಲ್ಲರ ಪ್ರೀತಿಯ ಮಹಾಪೂರದಲ್ಲಿ ಮಿಂದು ಪುನೀತನಾಗಿದ್ದೇನೆ, ವಿನೀತನಾಗಿದ್ದೇನೆ" ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಹಾರ, ಸಿಹಿತಿಂಡಿ ತರಬೇಡಿ
"ನಾಳಿನ ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಯಾರೂ ಕೂಡ ಫಲಪುಷ್ಪ, ಪೇಟ, ಶಾಲು, ಹಾರ, ತುರಾಯಿ, ಸಿಹಿತಿಂಡಿ ಹಾಗೂ ನೆನಪಿನ ಕಾಣಿಕೆಗಳನ್ನು ತರಬಾರದೆಂದು ವಿನಯಪೂರ್ವಕವಾಗಿ ಕೇಳಿಕೊಳ್ಳುತ್ತೇನೆ" ಎಂದು ಯಡಿಯೂರಪ್ಪ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಅಭಿನಂದನಾ ಸಮಾರಂಭ
ಯಡಿಯೂರಪ್ಪ ಹುಟ್ಟು ಹಬ್ಬದ ಅಂಗವಾಗಿ ಗುರುವಾರ ಅಭಿನಂದನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾಜಿ ರಾಜ್ಯಪಾಲ ಎಸ್. ಎಂ. ಕೃಷ್ಣ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ. ಎಲ್. ಸಂತೋಷ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಿದ್ದರಾಮಯ್ಯಗೆ ಆಹ್ವಾನ
ಅಭಿನಂದನಾ ಕಾರ್ಯಕ್ರಮಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಡಿ. ವಿ. ಸದಾನಂದ ಗೌಡ, ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿ ಅವರಿಗೆ ಆಹ್ವಾನ ನೀಡಲಾಗಿದೆ.












Click it and Unblock the Notifications