ಸಂಕ್ರಾಂತಿಗೂ ಮುನ್ನ ಸಚಿವಾಕಾಂಕ್ಷಿಗಳಿಗೆ 'ಎಳ್ಳು-ಬೆಲ್ಲ': ಸಂಪುಟ ವಿಸ್ತರಣೆಗೆ ಕೊನೆಗೂ ಒಪ್ಪಿಗೆ
ಬೆಂಗಳೂರು, ಜನವರಿ 11: ಬಹುಕಾಲದಿಂದ ಚರ್ಚೆಯಾಗುತ್ತಿರುವ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಕೊನೆಗೂ ಅನುಮತಿ ನೀಡಿದೆ. ಇದರಿಂದ ಸಚಿವಾಕಾಂಕ್ಷಿಗಳಲ್ಲಿ ಉತ್ಸಾಹ ಮತ್ತೆ ಗರಿಗೆದರಿದೆ. ವಿವಿಧ ಕಾರಣಗಳಿಂದ ಪದೇ ಪದೇ ಮುಂದಕ್ಕೆ ಹೋಗುತ್ತಿದ್ದ ಸಂಪುಟ ವಿಸ್ತರಣೆ ಇನ್ನು ಎರಡು ದಿನಗಳಲ್ಲಿ ನಡೆಯಲಿದ್ದು, ಸಂಕ್ರಾಂತಿಗೂ ಮುನ್ನ ಕೆಲವು ಶಾಸಕರಿಗೆ ಎಳ್ಳು-ಬೆಲ್ಲ ಸಿಗುವುದು ಖಾತರಿಯಾಗಿದೆ.
ಭಾನುವಾರ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬೆಂಗಳೂರಿಗೆ ಮರಳಿದ್ದಾರೆ. ಹಿಂದಿರುಗುವಾಗ ಕೊನೆಗೂ ಸಂಪುಟ ವಿಸ್ತರಣೆಯ ಸುದ್ದಿ ತಂದಿದ್ದಾರೆ. ಸಂಪುಟ ವಿಸ್ತರಣೆ ಸಂಬಂಧ ಯಡಿಯೂರಪ್ಪ ಅವರನ್ನು ದೆಹಲಿಗೆ ಬರುವಂತೆ ಪಕ್ಷದ ವರಿಷ್ಠರು ಸೂಚನೆ ನೀಡಿದ್ದರು. ಭಾನುವಾರ ಬೆಳಿಗ್ಗೆ ದೆಹಲಿಗೆ ತೆರಳಿದ್ದ ಅವರು, ಗೃಹ ಸಚಿವ ಅಮಿತ್ ಶಾ ನಿವಾಸದಲ್ಲಿ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಸುಮಾರು ಒಂದು ಗಂಟೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕೂಡ ಉಪಸ್ಥಿತರಿದ್ದರು.
ಏಳು ಮಂದಿ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಹೈಕಮಾಂಡ್ ಅನುಮತಿ ನೀಡಿದ್ದಾರೆ. ಜನವರಿ 13ರ ಮಧ್ಯಾಹ್ನ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ನಡೆಯಲಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಸಂಪುಟಕ್ಕೆ ಸೇರ್ಪಡೆಯಾಗಲಿರುವ ಶಾಸಕರ ಹೆಸರನ್ನು ಇಂದು ಬಹಿರಂಗಪಡಿಸುವ ಸಾಧ್ಯತೆ ಇದೆ. ಮುಂದೆ ಓದಿ.

13ರ ಮಧ್ಯಾಹ್ನ ಪ್ರಮಾಣವಚನ
'ಏಳು ಶಾಸಕರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಸಮ್ಮತಿಸಿದೆ. 14ರಂದು ಸಂಕ್ರಾಂತಿ ಹಬ್ಬ ಇರುವ ಕಾರಣ ಇದೇ 13ನೇ ತಾರೀಕಿನಂದೇ ಮಧ್ಯಾಹ್ನ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ' ಎಂದು ಭಾನುವಾರ ರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಡಿಯೂರಪ್ಪ ತಿಳಿಸಿದರು.

ವಲಸಿಗರು-ಹಿರಿಯ ನಾಯಕರು
ಯಾರಿಗೆಲ್ಲ ಮಂತ್ರಿ ಸ್ಥಾನ ಸಿಗಬಹುದು ಎನ್ನುವುದು ಕುತೂಹಲ ಮೂಡಿದೆ. ಇತ್ತೀಚೆಗೆ ವಲಸೆ ಬಂದವರು ಹಾಗೂ ಹಳಬರ ನಡುವೆ ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿ ಇದೆ. ಸರ್ಕಾರ ರಚನೆಗೆ ನೆರವಾದ ವಲಸಿಗರಿಗೆ ಆದ್ಯತೆ ನೀಡುವುದು ಅನಿವಾರ್ಯವಾಗಿದೆ. ಜತೆಗೆ ಪಕ್ಷದ ಹಿರಿಯ ಮುಖಂಡರಲ್ಲಿನ ಅಸಮಾಧಾನವನ್ನು ತಣ್ಣಗಾಗಿಸುವ ಸಂಕಷ್ಟವೂ ಇದೆ.

ಸಂಪುಟಕ್ಕೆ ಸೇರುವವರು ಯಾರು?
ಆರ್. ಶಂಕರ್ ಮತ್ತು ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ನೀಡುವುದು ಖಚಿತ ಎನ್ನಲಾಗಿದೆ. ಮತ್ತೊಬ್ಬ ವಲಸಿಗ ಮುನಿರತ್ನ ನಾಯ್ಡು ಅವರ ಸಚಿವ ಸ್ಥಾನ ಇನ್ನೂ ಖಾತರಿಯಾಗಿಲ್ಲ. ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಸಿ.ಪಿ. ಯೋಗೇಶ್ವರ್, ಹಾಲಪ್ಪ ಆಚಾರ್, ಸುನಿಲ್ ಕುಮಾರ್, ರಾಜೂಗೌಡ ಮುಂತಾದವರ ಹೆಸರು ಕೂಡ ಪಟ್ಟಿಯಲ್ಲಿದೆ.

ಎಚ್ ನಾಗೇಶ್‌ಗೆ ಕೊಕ್?
ಸಂಪುಟ ವಿಸ್ತರಣೆಗೆ ಏಳು ಶಾಸಕರನ್ನು ಸೇರಿಸಿಕೊಳ್ಳುವುದಾದರೆ ಸಂಪುಟದಿಂದ ಒಬ್ಬರನ್ನು ಕೈಬಿಡಬೇಕಾಗಲಿದೆ. ಅಬಕಾರಿ ಸಚಿವ ಎಚ್. ನಾಗೇಶ್ ಅವರನ್ನು ಸಂಪುಟದಿಂದ ಕೈಬಿಡುವಂತೆ ಹೈಕಮಾಂಡ್ ಸೂಚಿಸಿದೆ ಎಂದು ಹೇಳಲಾಗಿದೆ. ಅಮಿತ್ ಶಾ ಅವರು ಬೆಂಗಳೂರಿಗೆ ಪ್ರವಾಸ ಕೈಗೊಳ್ಳಲಿದ್ದು, ಅದರ ನಂತರ ಜ. 18 ಅಥವಾ 19ರಂದು ಸಂಪುಟ ವಿಸ್ತರಣೆ ಸಾಧ್ಯತೆಯೂ ಇದೆ ಎನ್ನಲಾಗುತ್ತದೆ.

ವಿಜಯೇಂದ್ರ ದೆಹಲಿಗೆ
ಅಮಿತ್ ಶಾ ಅವರ ಒಪ್ಪಿಗೆ ಮೇರೆಗೆ ಯಡಿಯೂರಪ್ಪ ತಮ್ಮೊಂದಿಗೆ ಮಗ ವಿಜಯೇಂದ್ರ ಅವರನ್ನು ಕೂಡ ದೆಹಲಿಗೆ ಕರೆದೊಯ್ದಿದ್ದರು. ಆದರೆ ವಿಜಯೇಂದ್ರ ವಾಪಸ್ ಬಂದಿಲ್ಲ. ಅವರು ದೆಹಲಿಯಲ್ಲಿಯೇ ಉಳಿದುಕೊಂಡಿದ್ದಾರೆ ಎನ್ನಲಾಗಿದೆ.












Click it and Unblock the Notifications