ಸಚಿವರಿಗೆ ಹೆಚ್ಚುವರಿ ಖಾತೆ ವಹಿಸಿದ ಯಡಿಯೂರಪ್ಪ: ಯಾರಿಗೆ ಯಾವ ಖಾತೆ?
ಬೆಂಗಳೂರು, ಸೆಪ್ಟೆಂಬರ್ 27: ರಾಜ್ಯದ 15 ಕ್ಷೇತ್ರಗಳ ಉಪ ಚುನಾವಣೆ ಮುಂದೂಡಿಕೆಯಾದ ಬೆನ್ನಲ್ಲೇ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಬಳಿಯೇ ಬಾಕಿ ಉಳಿದಿದ್ದ ಖಾತೆಗಳನ್ನು ಹಾಲಿ ಸಚಿವರಿಗೆ ವರ್ಗಾಯಿಸುವ ಮೂಲಕ ಅವರಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡಿದ್ದಾರೆ.
ಉಪ ಚುನಾವಣೆಯ ಬಳಿಕ ಸಂಪುಟ ವಿಸ್ತರಣೆ ಮಾಡಲು ಉದ್ದೇಶಿಸಿರುವ ಯಡಿಯೂರಪ್ಪ ಅವರು, ಚುನಾವಣೆ ಮುಗಿಯುವವರೆಗೂ ಈಗಿರುವ ಖಾತೆಗಳ ಜತೆಗೆ ಹೆಚ್ಚಯವರಿ ಖಾತೆಗಳನ್ನು ಸಚಿವರಿಗೆ ವಹಿಸಿದ್ದಾರೆ. ಈ ಬಗ್ಗೆ ರಾಜ್ಯಪತ್ರ ಹೊರಡಿಸಲಾಗಿದೆ. ಸರ್ಕಾರದಲ್ಲಿನ ಉಪ ಮುಖ್ಯಮಂತ್ರಿಗಳು ಮತ್ತು ಸಂಪುಟ ಸಚಿವರಿಗೆ ಹೆಚ್ಚುವರಿಯಾಗಿ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಲಹೆಯಂತೆ ಖಾತೆಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಈ ಆದೇಶವು ತಕ್ಷಣದಿಂದಲೇ ಜಾರಿಯಾಗುತ್ತಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಅವರು ಸೂಚನಾ ಪತ್ರದಲ್ಲಿ ತಿಳಿಸಿದ್ದಾರೆ. ಸಂಪುಟ ವಿಸ್ತರಣೆಯ ಒತ್ತಡ ಎದುರಿಸುತ್ತಿರುವ ಬಿಎಸ್ ಯಡಿಯೂರಪ್ಪ ಅವರು ಹೆಚ್ಚುವರಿ ಹೊಣೆಗಾರಿಕೆಗಳನ್ನು ವಹಿಸುವ ಮೂಲಕ ಉಪ ಚುನಾವಣೆ ಮುಗಿಯುವವರೆಗೂ ಸಂಪುಟ ವಿಸ್ತರಣೆ ನಡೆಯುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

ಡಿಸಿಎಂ ಅಶ್ವತ್ಥ ನಾರಾಯಣಗೆ ವೈದ್ಯಕೀಯ ಶಿಕ್ಷಣ
ಸಾರಿಗೆ ಖಾತೆ ಹೊಂದಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಸಾರಿಗೆ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೆಎಸ್ ಈಶ್ವರಪ್ಪ ಅವರಿಗೆ ಯುವಜನ ಸೇವೆ ಮತ್ತು ಕ್ರೀಡಾ ಖಾತೆ ನೀಡಲಾಗಿದೆ.
ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ಅವರಿಗೆ ಐಟಿ,ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯೊಂದಿಗೆ ವೈದ್ಯಕೀಯ ಶಿಕ್ಷಣ ಖಾತೆಯನ್ನು ಹೆಚ್ಚುವರಿಯಾಗಿ ಕೊಡಲಾಗಿದೆ.

ಶೆಟ್ಟರ್‌ಗೆ ಸಾರ್ವಜನಿಕ ಉದ್ದಿಮೆ
ಆರ್. ಅಶೋಕ್ ಅವರಿಗೆ ಕಂದಾಯ ಸಚಿವ ಸ್ಥಾನದ ಜತೆಗೆ ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ BBMP, BWSSB, BDA, BMRD, BMRCL ಸಂಸ್ಥೆಗಳ ಜವಾಬ್ದಾರಿಯನ್ನು ವರ್ಗಾಯಿಸಲಾಗಿದೆ.
ಕೈಗಾರಿಕಾ ಖಾತೆ ಸಚಿವ ಜಗದೀಶ್ ಶೆಟ್ಟರ್ ಹೆಚ್ಚುವರಿಯಾಗಿ ಸಾರ್ವಜನಿಕ ಉದ್ದಿಮೆ ಖಾತೆ ಪಡೆದಿದ್ದಾರೆ.
ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಹೊಣೆಗಾರಿಕೆ ನೀಡಲಾಗಿದೆ.
ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ಕಾರ್ಮಿಕ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.

ಸೋಮಣ್ಣಗೆ ತೋಟಗಾರಿಕೆ ಹೊಣೆ
ವಿ.ಸೋಮಣ್ಣ ಅವರಿಗೆ ವಸತಿ ಖಾತೆ ಜತೆ ತೋಟಗಾರಿಕೆ ಮತ್ತು ರೇಷ್ಮೆ ಖಾತೆ ಜವಾಬ್ದಾರಿ ವಹಿಸಲಾಗಿದೆ.
ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರಿಗೆ ಸಕ್ಕರೆ ಖಾತೆ ಕೊಡಲಾಗಿದೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಸಹಕಾರ ಇಲಾಖೆಯ ಹೊಣೆಗಾರಿಕೆ ಪಡೆದುಕೊಂಡಿದ್ದಾರೆ.
ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ. ಪಾಟೀಲ್ ಅವರಿಗೆ ಅರಣ್ಯ, ಪರಿಸರ ಖಾತೆಯನ್ನು ಹೆಚ್ಚುವರಿಯಾಗಿ ಪಡೆದಿದ್ದಾರೆ.

ನಾಗೇಶ್‌ಗೆ ಕೌಶಲ ಅಭಿವೃದ್ಧಿ
ಪಕ್ಷೇತರ ಶಾಸಕ ಎಚ್. ನಾಗೇಶ್ ಅವರಿಗೆ ಅಬಕಾರಿ ಇಲಾಖೆಯೊಂದಿಗೆ ಕೌಶಲ ಅಭಿವೃದ್ಧಿ, ಸಾಹಸೋದ್ಯಮ, ಜೀವನೋಪಾಯ ಹುದ್ದೆ ನೀಡಲಾಗಿದೆ.
ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರಿಗೆ ಅಲ್ಪಸಂಖ್ಯಾತ ಕಲ್ಯಾಣ, ಹಜ್ ಮತ್ತು ವಕ್ಫ್ ಖಾತೆಯನ್ನು ಹೆಚ್ಚುವರಿ ನೀಡಲಾಗಿದೆ.
ಶಶಿಕಲಾ ಜೊಲ್ಲೆ ಅಣ್ಣಾಸಾಹೇಬ್ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಜತೆಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಖಾತೆ ನೀಡಲಾಗಿದೆ.











Click it and Unblock the Notifications