ಕರ್ನಾಟಕಕ್ಕೆ ಅಮುಲ್ ಎಂಟ್ರಿ ಮಧ್ಯೆ ಉತ್ತಮ ಬೆಳವಣಿಗೆ: ನಂದಿನಿ ಹಾಲು ಮಾತ್ರವೇ ಬಳಸಲು ಹೋಟೆಲ್‌ಗಳ ನಿರ್ಧಾರ
ಬೆಂಗಳೂರು, ಏಪ್ರಿಲ್ 09: ಕರ್ನಾಟಕದಲ್ಲಿ ನಂದಿನಿ ಮತ್ತು ಅಮೂಲ್ ಹಾಲಿನ ಸಂಸ್ಥೆಗಳ ವಿವಾದವು ಮುನ್ನೆಲೆಗೆ ಬಂದಿದ್ದು, ಈ ಬಗ್ಗೆ ಆಡಳಿತಾರೂಢ ಬಿಜೆಪಿಗೆ ವಿರೋಧ ಪಕ್ಷಗಳು ಮಾತ್ರವಲ್ಲದೇ ಕನ್ನಡಿಗರು, ರೈತರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಈ ನಡುವೆ ಬೃಹತ್ ಬೆಂಗಳೂರು ಹೋಟೆಲುಗಳ ಅಸೋಸಿಯೇಷನ್ (BBHA) ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದೆ.
ಬೆಂಗಳೂರಿನ ಹಾಲು (ಡೈರಿ) ಮಾರುಕಟ್ಟೆಗೆ ಅಮುಲ್ ಮುನ್ನುಗ್ಗುವ ಘೋಷಣೆಯ ಕುರಿತು ಆಡಳಿತಾರೂಢ ಬಿಜೆಪಿ ಸರ್ಕಾರ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ವಾಗ್ವಾದಗಳುನ್ನು ನಡೆಸಿವೆ. ಈ ಮಧ್ಯೆ ಕರ್ನಾಟಕ ರೈತರಿಗೆ ತುಸು ನೆಮ್ಮದಿ ಸಿಗುವ ಸುದ್ದಿಯೊಂದು ಹೊರ ಬಿದ್ದಿದೆ.

ಬೃಹತ್ ಬೆಂಗಳೂರು ಹೋಟೆಲುಗಳ ಅಸೋಸಿಯೇಷನ್ ನಿರ್ಧಾರದಿಂದ ಗುಜರಾತ್ ಮೂಲದ ಡೈರಿ ಉತ್ಪನ್ನಗಳ ದೈತ್ಯ ಎನ್ನಲಾಗುವ ಅಮುಲ್‌ಗೆ ಹಿನ್ನಡೆ ಆಗಿದೆ. ಈ ಹೋಟೆಲ್ ಸಂಘವು ಕರ್ನಾಟಕ ರಾಜ್ಯದ (ಡೈರಿ) ರೈತರನ್ನು ಬೆಂಬಲಿಸಲು ನಿರ್ಧರಿಸಿದೆ. ಸ್ಥಳಿಯ ರೈತರ ನಂದಿನಿ ಹಾಲನ್ನು ಮಾತ್ರವೇ ತಮ್ಮ ಹೋಟಲ್‌ಗಳಿಗೆ ಬಳಸುವುದಾಗಿ ಘೋಷಿಸಿದೆ.
ಬೃಹತ್ ಬೆಂಗಳೂರು ಹೊಟೇಲುಗಳ ಸಂಘವು, ಗುಜರಾತ್‌ನ ಅಮುಲ್ ಹಾಲಿನ ಕಂಪನಿಯನ್ನು ಹೆಸರಿಸದೆ, ಕನ್ನಡಿಗರು ನಂದಿನಿ ಹಾಲಿನ ಉತ್ಪನ್ನಗಳನ್ನು ಮಾತ್ರ ಪ್ರಚಾರ ಮಾಡಬೇಕು. ಇಲ್ಲಿನ ರೈತರ ನಂದಿನ ಹಾಲನ್ನು ಹೋಟೆಲ್‌ಗಳಿಗೆ ಬಳಕೆ ಮಾಡಬೇಕು ಎಂದು ತಿಳಿಸಿದೆ.
ನಮ್ಮ ಕರ್ನಾಟಕ ರಾಜ್ಯದ ರೈತರು ಉತ್ಪಾದಿಸುವ ನಂದಿನಿ ಹಾಲಿನ ಕುರಿತು ನಮಗೆಲ್ಲರಿಗೂ ಹೆಮ್ಮೆ ಇದ್ದು, ನಾವೆಲ್ಲರೂ ನಂದಿಯನ್ನೇ ಪ್ರೋತ್ಸಾಹಿಸಬೇಕು. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶುಚಿ-ರುಚಿಯಾದ ಕಾಫಿ ತಿಂಡಿಗಳ ಬೆನ್ನೆಲುಬಾಗಿ ನಂದಿನಿ ನಿಂತಿದೆ. ನಾವು ಅದನ್ನು ಬಹಳ ಹೆಮ್ಮೆಯಿಂದ ಪ್ರೋತ್ಸಾಹಿಸುತ್ತೇವೆ. ಹೀಗಿದ್ದು, ನಗರದಲ್ಲಿ ಇತರ ಕಂಪನಿಗಳ ಹಾಲು ಮಾರಾಟ ಎಂಬ ಮಾತು ಕೇಳಿಬರುತ್ತಿದೆ ಎಂದು ಸಂಘ ಕಳವಳ ವ್ಯಕ್ತಪಡಿಸಿದೆ.

ಡೈರಿ ಬ್ರ್ಯಾಂಡ್ 'ನಂದಿನಿ' ಕೊಲ್ಲಲು ಬಿಜೆಪಿ ಸಂಚು
ಈ ಹಿಂದೆ, ರಾಜ್ಯದ ಅಸಾಧಾರಣ ಡೈರಿ ಬ್ರ್ಯಾಂಡ್ ನಂದಿನಿಯನ್ನು ಕೊಲ್ಲಲು ಬಿಜೆಪಿ ಸಂಚು ರೂಪಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಎಲ್ಲ ಕನ್ನಡಿಗರು ಅಮುಲ್ ಉತ್ಪನ್ನಗಳನ್ನು ಖರೀದಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು ಎಂದು ಕರೆ ನೀಡಿದರು. ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಮತ್ತು ಗುಜರಾತ್‌ನ ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್ (ಅಮುಲ್) ಜೊತೆಗೆ ವಿಲೀನ ಮಾಡಲಾಗುವುದು ಎಂಬ ವಿಚಾರ ನಂತರ ಇಷ್ಟೇಲ್ಲ ಬೆಳವಣಿಗೆಗಳು ನಡೆದಿವೆ.
ಕನ್ನಡ ನಾಡಿನ ರೈತರ ಶ್ರೇಯೋಭಿವೃದ್ಧಿಗಾಗಿಯೇ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ (KMF) ನಿರ್ಮಿಸಲಾಗಿದೆ. ಇದೀಗ ಅದರ ಕಬಳಿಕೆ ನಡೆಯುತ್ತಿದ್ದು, ಅದನ್ನು ಕರ್ನಾಟಕದವರೆಲ್ಲರೂ ಒಕ್ಕೊರಲಿನಿಂದ ವಿರೋಧಿಸಬೇಕು. ಅಮುಲ್ ಉತ್ಪನ್ನಗಳನ್ನು ಖರೀದಿಸದಂತೆ ಎಲ್ಲ ಕನ್ನಡಿಗರು ಪ್ರತಿಜ್ಞೆ ಮಾಡಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.
ಬಿಜೆಪಿಯಿಂದ ಕರ್ನಾಟಕದವರಿಗೆ ದ್ರೋಹ: ಸಿದ್ದು
ರಾಜ್ಯದಲ್ಲಿ ಹೇರಿಕೆಯಿಂದ ಭಾಷಾ ದ್ರೋಹ, ರಾಜ್ಯದ ಗಡಿಯಲ್ಲಿ ಅತಿಕ್ರಮ ಪ್ರವೇಶ ಮಾಡುವ ಮೂಲಕ ಭೂ ದ್ರೋಹದ ಜತೆಗೆ ಲಕ್ಷಾಂತರ ಜನರ ಜೀವನಾಧಾರವಾಗಿರುವ ಕರ್ನಾಟಕ ಹಾಲು ಮಹಾಮಂಡಳವನ್ನು (ಕೆಎಂಎಫ್) ಸ್ಥಗಿತಗೊಳಿಸುವ ಮೂಲಕ ಬಿಜೆಪಿ ಸರ್ಕಾರ ರೈತರಿಗೆ ದ್ರೋಹ ಬಗೆಯಲು ಹೊರಟಿದೆ. ಇದರಿಂದ ರಾಜ್ಯದ ಹೈನುಗಾರಿಕೆ ಕುಟುಂಬಗಳಿಗೆ ಸಾಕಷ್ಟು ತೊಂದರೆ ಆಗಲಿದೆ ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಲೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಅಮುಲ್ ಹಿಂಬಾಗಿಲಿನಿಂದ (ರಾಜ್ಯದ ಡೈರಿ ಮಾರುಕಟ್ಟೆಗೆ) ಪ್ರವೇಶಿಸುವುದನ್ನು ತಡೆಯಬೇಕು ಎಂದು ಅವರು ಒತ್ತಾಯಿಸಿದರು. ಇದರೊಂದಿಗೆ ಕೇಂದ್ರ ಗೃಹ ಸಚಿವರೂ ಆಗಿರುವ ಸಹಕಾರ ಸಚಿವ ಅಮಿತ್ ಶಾ ಅವರು ಇದೇ ವಿಚಾರವಾಗಿ ಕರ್ನಾಟಕ ಜನರ ಅಭಿಪ್ರಾಯ ಸಂಗ್ರಹಿಸಬೇಕು ಎಂದರು.
ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ದುರ್ಬಲ ನಾಯಕತ್ವವೇ ಕೆಎಂಎಫ್ ವ್ಯವಹಾರದಲ್ಲಿ ಕುಸಿತಕ್ಕೆ ಕಾರಣ ಆಗಿದೆ. ಕಳೆದ ಬುಧವಾರ ಬೆಂಗಳೂರಿನ ಕೆಂಗೇರಿಯಿಂದ ವೈಟ್‌ಫೀಲ್ಡ್ ಬರುತ್ತಿರುವುದು ತಾಜಾತನದ ಅಲೆ ಎಂದು ಅಮುಲ್ ಟ್ವೀಟ್ ಮಾಡಿದೆ. ನಗರದ ಪಶ್ಚಿಮ ತುದಿಯಿಂದ ಪೂರ್ವಕ್ಕೆ "ಲಾಂಚ್‌ಅಲರ್ಟ್" ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ. ಹಾಲು ಮತ್ತು ಮೊಸರು ವಿತರಣೆ ಸುಲಭಗೊಳಿಸಲು ತ್ವರಿತ ವಾಣಿಜ್ಯ ವೇದಿಕೆ ಬಳಕೆ ಮಾಡಲಾಗುವುದು ಎಂದು ಹೇಳಿದೆ ಎಂದು ಸಿದ್ದರಾಮಯ್ಯ ಆಗಿದ್ದ ಬೆಳವಣಿಗೆ ಕುರಿತು ವಿವರಿಸಿದರು.












Click it and Unblock the Notifications