ವಿಧಾನಸಭೆ ಕಲಾಪದಲ್ಲಿ ಶುಕ್ರವಾರ ಏನೇನಾಯ್ತು ಓದಿ
ಬೆಂಗಳೂರು, ಫೆ. 6: ರಾಜ್ಯದಲ್ಲಿ ತೀವ್ರ ವಿದ್ಯುತ್ ಕೊರತೆ ಇದೆ. ಆದರೂ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ಸಮರ್ಪಕ ವಿದ್ಯುತ್ ಪೂರೈಸಲಾಗುವುದು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ದಿನಕ್ಕೆ ಕನಿಷ್ಠ 22 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ಒದಗಿಸುವ ಭರವಸೆ ನೀಡಿದ್ದಾರೆ.
ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಒದಗಿಸಲು 6,000 ಕೋಟಿ ರು. ತೆಗೆದಿರಿಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದ್ದಾರೆ. ಅಲ್ಲದೆ, ಖಾಸಗಿ ಅನುದಾನಿತ ಶಾಲೆ ಸಿಬ್ಬಂದಿಗೂ ವೇತನ ಆಯೋಗದ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ವಿಧಾನಸಭೆ ಅಧಿವೇಶನದ ಶುಕ್ರವಾರದ ಕಲಾಪದಲ್ಲಿ ನಡೆದ ಚರ್ಚೆಯ ಮುಖ್ಯಾಂಶಗಳು ಇಲ್ಲಿವೆ.

ಪ್ರಸ್ತುತ ರಾಜ್ಯದಲ್ಲಿ ಪ್ರತಿದಿನ ಅಂದಾಜು 1,400 ಮೆಗಾ ವ್ಯಾಟ್ ನಿರ್ಬಂಧಿತ ವಿದ್ಯುತ್ ಕೊರತೆಯಿದೆ. ಇದೇ ವರ್ಷ ಏಪ್ರಿಲ್ ತಿಂಗಳಲ್ಲಿ 8೦೦ ಮೆಗಾ ವ್ಯಾಟ್ ವಿದ್ಯುತ್ ಕೊರತೆ ಉಂಟಾಗಬಹುದೆಂದು ರಾಜ್ಯ ಇಂಧನ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. [ಆರತಕ್ಷತೆ ಗುಂಗಿನಲ್ಲಿ ಈಶ್ವರಪ್ಪ]
ಶುಕ್ರವಾರ ವಿಧಾನಸಭೆ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಪ್ರಶ್ನೆಗಳಿಗೆ ಡಿ.ಕೆ. ಶಿವಕುಮಾರ್ ಉತ್ತರಿಸಿದರು. ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ಸಮರ್ಪಕ ವಿದ್ಯುತ್ ಪೂರೈಸಲಾಗುವುದು. ವಿದ್ಯುತ್ ಉತ್ಪಾದನೆ ಘಟಕಗಳ ಕಾರ್ಯಕ್ಷಮತೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಮಗಳಲ್ಲಿ ನೀರಾವರಿ ಪಂಪ್ ಸೆಟ್ ಅನ್ನು ಅಧಿಕ ಹೊರೆ ರಹಿತ ಸಮಯದಲ್ಲಿ ಉಪಯೋಗಿಸಲು ರೈತರನ್ನು ಕೋರಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಘೋಷಿತ ಅವಧಿಯಂತೆ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ದಿನಕ್ಕೆ 22ರಿಂದ 24 ಗಂಟೆಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 7 ಗಂಟೆಗಳ ಮೂರು ಫೇಸ್ ವಿದ್ಯುತ್ ಹಾಗೂ ಸಂಜೆ 6 ರಿಂದ ಬೆಳಗ್ಗೆ 6 ಗಂಟೆಯವರೆಗೆ ಸಿಂಗಲ್ ಫೇಸ್ ವಿದ್ಯುತ್ ಪೂರೈಸಲಾಗುವುದು. ಮಧ್ಯಮ ಅವಧಿ ಮತ್ತು ಅಲ್ಪಾವಧಿ ಆಧಾರದಲ್ಲಿ ವಿದ್ಯುತ್ ಖರೀದಿಸಲಾಗುತ್ತಿದೆ ಎಂದು ತಿಳಿಸಿದರು.
ಛಾವಣಿ ಮೇಲೆ ಸೌರ ವಿದ್ಯುತ್ ಫಲಕ : ರಾಜ್ಯದ ವಸತಿ ಗೃಹ, ವಾಣಿಜ್ಯ ಕೇಂದ್ರ, ಶಿಕ್ಷಣ ಸಂಸ್ಥೆ ಮತ್ತು ಕೈಗಾರಿಕೆಗಳಲ್ಲಿನ ಛಾವಣಿ ಮೇಲೆ ಸೌರ ವಿದ್ಯುತ್ ಉತ್ಪಾದನೆ ಫಲಕಗಳನ್ನು ಸ್ಥಾಪಿಸಲಾಗಿದೆ. ಉತ್ಪಾದಿತ ವಿದ್ಯುತ್ ಕಟ್ಟಡದ ಅಗತ್ಯಕ್ಕಿಂತ ಹೆಚ್ಚಾಗಿದ್ದರೆ ವಿದ್ಯುತ್ ಸರಬರಾಜು ಕಂಪನಿಗಳ ವಿದ್ಯುತ್ ಜಾಲಕ್ಕೆ ರವಾನೆಯಾಗುತ್ತದೆ. ನಿವ್ವಳ ಮಾಪನ ಆಧಾರದ ಮೇಲೆ ಗ್ರಾಹಕರಿಗೆ ಹಣ ಪಾವತಿಸಲಾಗುತ್ತದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಶಾಲೆ ಮೂಲ ಸೌಕರ್ಯಕ್ಕೆ 6,000 ಕೋಟಿ
ರಾಜ್ಯದ ಹಲವು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲು 6,000 ಕೋಟಿ ರು. ಅನುದಾನ ಕಾಯ್ದಿರಿಸಲಾಗಿದೆ. ಪ್ರತಿ ಜಿಲ್ಲೆಗೆ 8೦ ರಿಂದ 130 ಕೋಟಿ ರು. ಒದಗಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದ್ದಾರೆ. [ವಿಧಾನಸಭೆ ಕಲಾಪ : ಗುರುವಾರದ ಮುಖ್ಯಾಶ]
ಬೆಂಗಳೂರಿನ ಸುತ್ತ ಇರುವ ಮೂಲಸೌಕರ್ಯ ವಂಚಿತ ಶಾಲೆಗಳಿಗೆ ಒಂದು ತಿಂಗಳಲ್ಲಿ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಅನುದಾನಿತ ಶಾಲೆಯೂ ವೇತನ ಮಂಡಳಿಗೆ
6ನೇ ವೇತನ ಆಯೋಗದ ವರದಿಯಂತೆ ವೇತನ, ಬಡ್ತಿ ಹಾಗೂ ಮಹಿಳಾ ನೌಕರರಿಗೆ ಪ್ರಸೂತಿ ರಜೆ ಸೌಲಭ್ಯವನ್ನು ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಯ ನೌಕರರಿಗೂ ವಿಸ್ತರಿಸಲು ಆರ್ಥಿಕ ಇಲಾಖೆಯನ್ನು ಒಪ್ಪಿಸುವುದಾಗಿ ಕಿಮ್ಮನೆ ರತ್ನಾಕರ ಭರವಸೆ ನೀಡಿದ್ದಾರೆ. ಈ ಪ್ರಸ್ತಾಪಕ್ಕೆ ಆರ್ಥಿಕ ಇಲಾಖೆ ಒಪ್ಪಿಲ್ಲ. ಸರ್ಕಾರವು ಈ ಕುರಿತು ಸಮಾಲೋಚನೆ ನಡೆಸಲಿದೆ ಎಂದು ತಿಳಿಸಿದರು.
ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರ ನೇಮಕಾತಿ
ರಾಜ್ಯಾದ್ಯಂತ 9,511 ಪ್ರಾಥಮಿಕ ಶಾಲೆ ಹಾಗೂ 1,137 ಪ್ರೌಢ ಶಾಲೆ ಶಿಕ್ಷಕರ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯಿಂದ ಅನುಮೋದನೆ ದೊರಕಿದೆ. ಖಾಲಿ ಇರುವ ಪ್ರಾಥಮಿಕ ಶಾಲೆ ಶಿಕ್ಷಕರ ಹುದ್ದೆಗಳನ್ನು ಕಾಯಂ ಆಗಿ ಭರ್ತಿ ಮಾಡಲು ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಸಲಾಗಿದೆ. ಹೈದರಾಬಾದ್ ಕರ್ನಾಟಕ ಮೀಸಲಾತಿ ಹಾಗೂ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಎಸ್.ಸಿ.ಟಿ.ಇ. ನಿಯಮಗಳ ರೀತ್ಯಾ ತಿದ್ದುಪಡಿ ಮಾಡಲಾಗುತ್ತಿದೆ. ಶೀಘ್ರ ಹುದ್ದೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕಿಮ್ಮನೆ ರತ್ನಾಕರ ತಿಳಿಸಿದ್ದಾರೆ. [ಮತ್ತೆ ಲಾಟರಿ ಆರಂಭಿಸಲ್ಲ]
ಕೊಡಗಿನ ರಾಜಾ ಸೀಟ್ ಪ್ರವಾಸಿ ತಾಣ
ಕೊಡಗು ಜಿಲ್ಲೆಯ ರಾಜಾ ಸೀಟ್ ಅನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ವಿಧಾನ ಪರಿಷತ್ ಸಭಾನಾಯಕ ಎಸ್.ಆರ್. ಪಾಟೀಲ ತಿಳಿಸಿದರು. [ತೊಗಾಡಿಯಾ, ಮೀಟರ್ ಗದ್ದಲ]
ಪ್ರವಾಸೋದ್ಯಮ ಸಚಿವರ ಪರವಾಗಿ ಉತ್ತರಿಸಿದ ಪಾಟೀಲರು, ಆಯವ್ಯಯದಲ್ಲಿ ತಿಳಿಸಿದಂತೆ ರಾಜಾಸೀಟ್ ಅನ್ನು ಪ್ರವಾಸಿ ತಾಣವಾಗಿ ಮಾಡಲು 4.55 ಕೋಟಿ ರು. ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.












Click it and Unblock the Notifications