Madal Virupakshappa : ಮಾಡಾಳು ವಿರೂಪಾಕ್ಷಪ್ಪಗೆ ಮಧ್ಯಂತರ ಜಾಮೀನು ಮಂಜೂರು
ಚನ್ನಗಿರಿಯ ಬಿಜೆಪಿ ಶಾಸಕ ಕೆ. ಮಾಡಾಳು ವಿರೂಪಾಕ್ಷಪ್ಪಗೆ ಕರ್ನಾಟಕ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಬೆಂಗಳೂರು, ಮಾರ್ಚ್ 07; ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್‌ಡಿಎಲ್) ಲಂಚ ಪ್ರಕರಣದಲ್ಲಿ ಚನ್ನಗಿರಿಯ ಬಿಜೆಪಿ ಶಾಸಕ ಕೆ. ಮಾಡಾಳು ವಿರೂಪಾಕ್ಷಪ್ಪಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಅಲ್ಲದೇ 48 ಗಂಟೆಯಲ್ಲಿ ತನಿಖಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದೆ.
ಶಾಸಕ ಕೆ. ಮಾಡಾಳು ವಿರೂಪಾಕ್ಷಪ್ಪ ಸಲ್ಲಿಕೆ ಮಾಡಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ನ ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ನ್ಯಾಯಪೀಠ ಮಂಗಳವಾರ ನಡೆಸಿದರು.

ಕೆ. ಮಾಡಾಳು ವಿರೂಪಾಕ್ಷಪ್ಪ ಪರವಾಗಿ ಕೆ. ಸಮನ್ ವಾದ ಮಂಡನೆ ಮಾಡಿದರು. ವಯಸ್ಸು ಆರೋಗ್ಯದ ಕಾರಣದ ಮೇಲೆ ಮಧ್ಯಂತರ ಜಾಮೀನು ನೀಡಿ ಎಂದು ಮನವಿ ಮಾಡಿದರು. ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ತನಿಖಾಧಿಕಾರಿಗಳ ಮುಂದೆ ಶಾಸಕರು ಹಾಜರಾಗಬೇಕು ಎಂದು ಸೂಚನೆ ನೀಡಿದರು.
ಅರ್ಜಿಯ ವಿಚಾರಣೆ ಸಮಯದಲ್ಲಿ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಪೀಠದ ಮುಂದೆ ಆಕ್ಷೇಪಣೆ ಸಲ್ಲಿಕೆ ಮಾಡಲು ಕಾಲಾವಕಾಶ ನೀಡುವಂತೆ ಲೋಕಾಯುಕ್ತರ ಪರ ವಕೀಲರು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಲೋಕಾಯುಕ್ತದ ಪರ ವಕೀಲ ಬಿಬಿ ಪಾಟೀಲ್ ಗೈರು ಹಾಜರಿಗೆ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದರು.
ವಾದ ಆಲಿಸಿದ ನ್ಯಾಯಮೂರ್ತಿಗಳು 5 ಲಕ್ಷ ರೂ. ಬಾಂಡ್, ಇಬ್ಬರ ಶ್ಯೂರಿಟಿ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿದರು. ಅಲ್ಲದೇ 48 ಗಂಟೆಯಲ್ಲಿ ಶಾಸಕರು ಲೋಕಾಯುಕ್ತ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದರು.

ಮಾಡಾಳು ವಿರೂಪಾಕ್ಷಪ್ಪ ಪರ ವಕೀಲರ ವಾದ
* ಬಿಜೆಪಿ ಶಾಸಕ ಕೆ. ಮಾಡಾಳು ವಿರೂಪಾಕ್ಷಪ್ಪ ಪರವಾಗಿ ಕೆ. ಸಮನ್ ವಾದ ಮಂಡಿಸಿದರು. ಶಾಸಕರಿಗೆ ವಯಸ್ಸು ಮತ್ತು ಆರೋಗ್ಯದ ದೃಷ್ಟಿಯಿಂದ ಮಧ್ಯಂತರ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.
* ಪ್ರಶಾಂತ್ ಮಾಡಾಳ್ ಬೆಂಗಳೂರು ಜಲಮಂಡಳಿಯಲ್ಲಿ ಕೆಲಸ ಮಾಡುತ್ತಾರೆ. ಕೆಎಸ್‌ಡಿಎಲ್‌ಗೂ ಅವರಿಗೂ ಸಂಬಂಧದವೇ ಇಲ್ಲ. ಲೋಕಾಯುಕ್ತ ಪ್ರಕರಣವೇ ಸುಳ್ಳು ಎಂದು ವಾದಿಸಿದರು.
* ಲೋಕಾಯುಕ್ತ ಎಫ್‌ಐಆರ್‌ನಲ್ಲಿ ಕೆ. ಮಾಡಾಳು ವಿರೂಪಾಕ್ಷಪ್ಪ ಹೆಸರು ಉಲ್ಲೇಖಿಸಲಾಗಿದೆ. ಆದರೆ ಅವರ ವಿರುದ್ಧ ಯಾವುದೇ ಆರೋಪ ಮಾಡಲಾಗಿಲ್ಲ. ಶಾಸಕರು ಮಗನ ಜೊತೆ ಮಾತುಕತೆ ನಡೆಸಿದ್ದಾರೆ. ಆದರೆ ಲಂಚಕ್ಕೆ ಬೇಡಿಕೆ ಇಟ್ಟಿಲ್ಲ, ಲಂಚ ಸ್ವೀಕಾರ ಮಾಡಿಲ್ಲ. ಆರೋಪಿಗಳೇ ನ್ಯಾಯಾಂಗ ಬಂಧನದಲ್ಲಿದ್ದಾರೆ. ಲೋಕಾಯುಕ್ತರು ಅವರನ್ನೇ ವಶಕ್ಕೆ ಪಡೆದು ವಿಚಾರಣೆ ಮಾಡಿಲ್ಲ ಎಂದು ವಾದಿಸಿದರು.
ಲೋಕಾಯುಕ್ತದ ಪರವಾಗಿ ಹಿರಿಯ ವಕೀಲ ಬಿಬಿ ಪಾಟೀಲ್ ಅರ್ಜಿ ವಿಚಾರಣೆಗೆ ಗೈರು ಹಾಜರಾಗಿದ್ದರು. ಇದಕ್ಕೆ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದರು. ಮಹತ್ವದ ಅರ್ಜಿ ವಿಚಾರಣೆಗೆ ಏಕೆ ಗೈರಾಗಿದ್ದಾರೆ? ಎಂದು ಪ್ರಶ್ನಿಸಿದರು. ಲೋಕಾಯುಕ್ತ ಪರವಾಗಿ ಹಾಜರಿದ್ದ ವಕೀಲರು ಅರ್ಜಿದಾರರ ಅರ್ಜಿಗೆ ಆಕ್ಷೇಪಣೆ ಸಲ್ಲಿಕೆ ಮಾಡಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.
ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ಪೀಠ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತು. ಲೋಕಾಯುಕ್ತ ಪರ ವಕೀಲರಿಗೆ ದಾಖಲೆಗಳನ್ನು ಸಲ್ಲಿಕೆ ಮಾಡಲು ಮಾರ್ಚ್ 17ರ ತನಕ ಕಾಲಾವಕಾಶ ನೀಡಿತು. ಅಲ್ಲದೇ 48 ಗಂಟೆಗಳಲ್ಲಿ ಶಾಸಕರು ತನಿಖಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚನೆ ನೀಡಿತು. ಶಾಸಕರು ಕೋರ್ಟ್ ಅನುಮತಿ ಇಲ್ಲದೇ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್‌ಡಿಎಲ್) ಕಚೇರಿಗೆ ತೆರಳುವಂತಿಲ್ಲ ಎಂದು ಹೇಳಿತು.
ಮಾರ್ಚ್ 2ರ ಗುರುವಾರ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಕೆ. ಮಾಡಾಳು ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ 40 ಲಕ್ಷ ರೂ. ಲಂಚ ಸ್ವೀಕಾರ ಮಾಡುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಕೆ. ಮಾಡಾಳು ವಿರೂಪಾಕ್ಷಪ್ಪ ಅಧ್ಯಕ್ಷರಾಗಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್‌ಡಿಎಲ್) ಟೆಂಡರ್‌ಗೆ ಸಂಬಂಧಿಸಿದಂತೆ ಲಂಚ ಪಡೆಯುತ್ತಿದ್ದರು ಎಂಬುದು ಆರೋಪ. ಈ ದಾಳಿ ಬಳಿಕ ಲೋಕಾಯುಕ್ತ ಪೊಲೀಸರು ಪ್ರಶಾಂತ್ ಮಾಡಾಳ್ ಮನೆ ಮೇಲೆ ದಾಳಿ ಮಾಡಿದ್ದರು. ಆಗ ದಾಖಲೆ ಇಲ್ಲದ 6 ಕೋಟಿ ರೂ. ಹಣ ಪತ್ತೆಯಾಗಿತ್ತು.
ಈ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ. ಪ್ರಕರಣದಲ್ಲಿ ಕೆ. ಮಾಡಾಳು ವಿರೂಪಾಕ್ಷಪ್ಪ ಮೊದಲ ಆರೋಪಿ. ಲಂಚ ಪ್ರಕರಣ ಬೆಳಕಿಗೆ ಬಂದ ಬಳಿಕ ಕೆ. ಮಾಡಾಳು ವಿರೂಪಾಕ್ಷಪ್ಪ ಕೆಎಸ್‌ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಶಾಂತ್ ಮಾಡಾಳ್ ಮತ್ತು ಉಳಿದ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.












Click it and Unblock the Notifications