ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಪತ್ರಕರ್ತರಿಗೆ 1 ಲಕ್ಷ ರೂ. ಲಂಚ ನೀಡಿತಾ ಸಿಎಂ ಕಚೇರಿ?: ದೂರಿನ ಪ್ರತಿಯಲ್ಲಿ ಏನಿದೆ?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 28: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಚೇರಿಯಿಂದಲೇ ಪತ್ರಕರ್ತರಿಗೆ ಲಂಚ ನೀಡಲಾಗಿದೆ ಎಂದು ಕೇಳಿ ಬಂದಿರುವ ಗಂಭೀರ ಆರೋಪದ ಕುರಿತು ತೀವ್ರ ಚರ್ಚೆಯಾಗುತ್ತಿದೆ.

ಇದರ ಬೆನ್ನಲ್ಲೇ ಭ್ರಷ್ಟಾಚಾರದ ವಿರುದ್ದ ಕಾನೂನಾತ್ಮಕ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಜನಾಧಿಕಾರ ಸಂಘರ್ಷ ಪರಿಷತ್‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಶಂಕರ್‌ ಪಾಗೋಜಿ ವಿರುದ್ಧ ಲೋಕಾಯುಕ್ತ ಮತ್ತು ಲೋಕಾಯುಕ್ತ ಪೊಲೀಸ್‌ ವಿಭಾಗದ ಎಡಿಜಿಪಿಗೆ ದೂರು ನೀಡಿದೆ.

ಡೆಕ್ಕನ್‌ ಹೆರಾಲ್ಡ್‌ ಮತ್ತು ಪ್ರಜಾವಾಣಿಯ ಪ್ರಧಾನ ಮತ್ತು ಮುಖ್ಯ ವರದಿಗಾರರಿಬ್ಬರಿಗೆ ದೀಪಾವಳಿ ಹಬ್ಬದ ನೆಪದಲ್ಲಿ ಸ್ವೀಟ್ ಬಾಕ್ಸ್‌ನೊಂದಿಗೆ 1 ಲಕ್ಷ ರೂಪಾಯಿ ನಗದು ಹಣವನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಶಂಕರ್‌ ಪಾಗೋಜಿ ಎಂಬುವರು ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜನಾಧಿಕಾರ ಸಂಘರ್ಷ ಪರಿಷತ್‌ ಮುಖ್ಯಮಂತ್ರಿ ಮತ್ತು ಮಾಧ್ಯಮ ಸಂಯೋಜಕರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ 2018ರ ತಿದ್ದುಪಡಿ ಅಧಿನಿಯಮದ ಅನ್ವಯ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದೆ. ಈ ದೂರಿನ ಪ್ರತಿಯು ಲಭ್ಯವಾಗಿದೆ.

ಪತ್ರಕರ್ತರಿಗೆ ಲಕ್ಷ ರೂಪಾಯಿ ಲಂಚ ನೀಡಿರುವ ಆರೋಪ

ಪತ್ರಕರ್ತರಿಗೆ ಲಕ್ಷ ರೂಪಾಯಿ ಲಂಚ ನೀಡಿರುವ ಆರೋಪ

ಕರ್ನಾಟಕದಲ್ಲಿ ಗುತ್ತಿಗೆದಾರರಿಂದ 40 ಪರ್ಸೆಂಟೇಜ್ ಕಮಿಷನ್‌ಗೆ ಬೇಡಿಕೆ ಇಟ್ಟಿದ್ದ ಪ್ರಕರಣವು ಇನ್ನೂ ಚರ್ಚೆಯಲ್ಲಿದೆ. ಪರ್ಸೆಂಟೇಜ್ ವಿಷಯವು ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವುದರ ಮಧ್ಯೆ ಮುಖ್ಯಮಂತ್ರಿ ಕಚೇರಿಯಿಂದ ಪತ್ರಕರ್ತರಿಗೆ ಲಕ್ಷಗಟ್ಟಲೇ ಲಂಚ ನೀಡಲಾಗಿದೆ ಎಂಬ ಆರೋಪವು ಬಿಜೆಪಿ ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.

ಮಾಧ್ಯಮ ಲೋಕದಲ್ಲಿ ಗುಲ್ ಎಬ್ಬಿಸಿದ ಲಂಚದ ವರದಿ

ಮಾಧ್ಯಮ ಲೋಕದಲ್ಲಿ ಗುಲ್ ಎಬ್ಬಿಸಿದ ಲಂಚದ ವರದಿ

ಮುಖ್ಯಮಂತ್ರಿ ಕಚೇರಿಯಿಂದ ಪತ್ರಕರ್ತರಿಗೆ ಲಂಚ ನೀಡಲಾಗಿದೆ ಎಂದು ಪೀಪಲ್ ಮೀಡಿಯಾ ಜಾಲತಾಣವು ಪ್ರಕಟಿಸಿದ ವರದಿಯು ಮಾಧ್ಯಮ ಸಂಸ್ಥೆಗಳಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಈ ವರದಿಯ ನಂತರ ಲೇಖಕ ರಾಜರಾಂ ತಲ್ಲೂರು, ಇದೊಂದು ಚುನಾವಣಾ ಪೂರ್ವ ಭ್ರಷ್ಟಾಚಾರ ಎಂದು ಪರಿಗಣಿಸಬೇಕಲ್ಲದೇ ಲೋಕಾಯುಕ್ತರು ತನಿಖೆ ನಡೆಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಜನಾಧಿಕಾರ ಸಂಘರ್ಷ ಪರಿಷತ್‌ ಕೂಡ ಲೋಕಾಯುಕ್ತರು ಮತ್ತು ಎಡಿಜಿಪಿಗೆ ಸಲ್ಲಿಸಿರುವ ದೂರು ಮಹತ್ವ ಪಡೆದುಕೊಂಡಿದೆ.

ಲೋಕಾಯುಕ್ತಕ್ಕೆ ನೀಡಿದ ದೂರಿನಲ್ಲೇನಿದೆ?

ಲೋಕಾಯುಕ್ತಕ್ಕೆ ನೀಡಿದ ದೂರಿನಲ್ಲೇನಿದೆ?

ರಾಜ್ಯದ ಹಲವಾರು ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವರದಿಗಾರರಿಗೆ ಮುಖ್ಯಮಂತ್ರಿ ಕಚೇರಿಯು ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಶಂಕರ ಪಾಗೋಜಿ ಮೂಲಕ ನಗದು ಹಣವನ್ನು ನೀಡಲಾಗಿದೆ. ವಿಶ್ವಾಸನೀಯ ಮೂಲಗಳ ಪ್ರಕಾರ ಡೆಕ್ಕನ್‌ ಹೆರಾಲ್ಡ್‌ನ ಮುಖ್ಯ ವರದಿಗಾರ ಭರತ್‌ ಜೋಷಿ ಅವರಿಗೆ ತಲುಪಿಸಿದ್ದ ಸ್ವೀಟ್ ಬಾಕ್ಸ್‌ನಲ್ಲಿಯೇ 1 ಲಕ್ಷ ರೂಪಾಯಿ ನಗದನ್ನು ತಲುಪಿಸಲಾಗಿತ್ತು. ಇದು ಅವರ ಗಮನಕ್ಕೆ ಬಂದ ನಂತರ ಡೆಕ್ಕನ್‌ ಹೆರಾಲ್ಡ್‌ನ ಸಂಪಾದಕರು ಮತ್ತು ಸಿಇಒ ಅವರ ಗಮನಕ್ಕೆ ತಂದು ಅವರ ಸೂಚನೆಯಂತೆ ಹಣವನ್ನು ಹಿಂದಿರುಗಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೇ 'ಪ್ರಜಾವಾಣಿಯ ಮುಖ್ಯ ವರದಿಗಾರ ವೈ. ಜಿ. ಜಗದೀಶ್ ಎಂಬುವರಿಗೂ ಹಣ ತಲುಪಿಸಲಾಗಿತ್ತು. ಈ ಬಗ್ಗೆ ಖುದ್ದು ವೈ. ಜಿ. ಜಗದೀಶ್ ಅವರೇ ಮಾಧ್ಯಮದ ವಾಟ್ಸಾಪ್ ಗ್ರೂಪ್‌ನಲ್ಲಿ ಹೇಳಿರುವ ಪ್ರಕಾರ ಮುಖ್ಯಮಂತ್ರಿ ಕಚೇರಿಯಿಂದ ಹಣ ಬಂದಿದೆ. ಇವರೂ ಸಹ ಸಂಸ್ಥೆಯ ಸಿಇಒ ಮತ್ತು ಸಂಪಾದಕರ ಗಮನಕ್ಕೆ ತಂದು ಹಣವನ್ನು ಹಿಂದಿರುಗಿಸಿದ್ದಾರೆ. ಅಲ್ಲದೇ ಜಗದೀಶ್ ಅವರೇ ಹೇಳಿಕೊಂಡಿರುವಂತೆ ಈ ಸಂಬಂಧ ಮುಖ್ಯಮಂತ್ರಿಗಳಿಗೆ ಸಂಸ್ಥೆಯಿಂದ ಖಂಡನಾ ಪತ್ರವನ್ನು ಬರೆಯಲಾಗಿದೆ. ಇದಕ್ಕೆ ಮುಖ್ಯಮಂತ್ರಿ ಅವರು ಕ್ಷಮೆಯನ್ನೂ ಯಾಚಿಸಿದ್ದಾರೆ,' ಎಂದು ದೂರಿನಲ್ಲಿ ಆದರ್ಶ ಐಯ್ಯರ್ ದೂರಿನಲ್ಲಿ ವಿವರಿಸಿದ್ದಾರೆ.

ಕೆಟ್ಟ ಆಡಳಿತದ ಕುರಿತು ಪತ್ರಿಕೆಯಲ್ಲಿ ಪ್ರಕಟಿಸದಂತೆ ಲಂಚ

ಕೆಟ್ಟ ಆಡಳಿತದ ಕುರಿತು ಪತ್ರಿಕೆಯಲ್ಲಿ ಪ್ರಕಟಿಸದಂತೆ ಲಂಚ

ಮುಖ್ಯಮಂತ್ರಿ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರದ ಆರೋಪ, ಕೆಟ್ಟ ಆಡಳಿತದ ಕುರಿತು ಪತ್ರಿಕೆಯಲ್ಲಿ ಪ್ರಕಟಿಸದಂತೆ ಹಣವನ್ನು ನೀಡಲಾಗಿದೆ ಎಂಬುದಕ್ಕೆ ಪುಷ್ಠಿ ನೀಡಿದಂತೆ ಆಗಿದೆ. ಮುಖ್ಯಮಂತ್ರಿ ಕಚೇರಿಯೇ ನೇರವಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಲಂಚ ನೀಡಿರುವುದು ಅನೈತಿಕವಾದದ್ದಾಗಿದೆ. ಅಲ್ಲದೇ ಮಾಧ್ಯಮ ಸಂಸ್ಥೆಗಳ ಮೇಲೆ ಪ್ರಭಾವ ಬೀರಿ ಸರ್ಕಾರದ ಪರವಾಗಿ ಇರುವಂತೆ ನೋಡಿಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ದೂರಿನಲ್ಲಿ ಜನಾಧಿಕಾರ ಸಂಘರ್ಷ ಪರಿಷತ್‌ ವಿವರಿಸಿದೆ.

ಸರ್ಕಾರದ ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ ಹಲವಾರು ದೂರುಗಳನ್ನು ನೀಡಿದ್ದರೂ ಮಾಧ್ಯಮಗಳು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಮಾಧ್ಯಮಗಳನ್ನು ಸರ್ಕಾರವು ಕೊಳ್ಳುತ್ತಿರುವ ಬಗ್ಗೆ ಬಹುತೇಕ ಜನರಿಗೆ ಅನುಮಾನವಿದೆ. ಈ ಪ್ರಕರಣವು ಆ ಅನುಮಾನವನ್ನು ಸಾಬೀತುಗೊಳಿಸಿದೆ. ಇದು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಮತ್ತು ಸಂವಿಧಾನವನ್ನು ಬುಡಮೇಲು ಮಾಡಲು ಬಿಜೆಪಿಯು ಹುನ್ನಾರ ನಡೆಸುತ್ತಿರುವ ಹಲವಾರು ಪ್ರಯತ್ನಗಳಲ್ಲಿ ಒಂದಾಗಿದೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದು ತಕ್ಷಣವೇ ಲೋಕಾಯುಕ್ತರು ಈ ದೂರನ್ನಾಧರಿಸಿ ತನಿಖೆ ನಡೆಸಿ ಆಪಾದಿತ ಮುಖ್ಯಮಂತ್ರಿ ಮತ್ತು ಅವರ ಮಾಧ್ಯಮ ಸಂಯೋಜಕರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ 2018ರ ತಿದ್ದುಪಡಿ ಅಧಿನಿಯಮ ಅನ್ವಯ ಕ್ರಮ ಕೈಗೊಳ್ಳಬೇಕು,' ಎಂದು ಜನಾಧಿಕಾರ ಸಂಘರ್ಷ ಪರಿಷತ್‌ನ ಸಹ ಅಧ್ಯಕ್ಷ ಆದರ್ಶ ಐಯ್ಯರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ವದಂತಿ ಹುಟ್ಟುಹಾಕಿದ ವಿಷಯ

ಕರ್ನಾಟಕದಲ್ಲಿ ವದಂತಿ ಹುಟ್ಟುಹಾಕಿದ ವಿಷಯ

'ಶುಕ್ರವಾರ ಬೆಳಗ್ಗೆಯಿಂದ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಕಚೇರಿಯಿಂದ, ಸಚಿವರ ಕಚೇರಿಗಳಿಂದ ದೀಪಾವಳಿ ಇನಾಮಿನ ಜೊತೆಯಲ್ಲಿ ನಗದು ಹಣವನ್ನು ನೀಡಲಾಗಿದೆ ಎಂಬ ವದಂತಿಗಳು ಹಬ್ಬಿದ್ದವು. ಇದು ಹೌದೆಂದಾಗಿದ್ದಲ್ಲಿ, ಚುನಾವಣಾ ಪೂರ್ವ ಭ್ರಷ್ಟಾಚಾರ ಎಂದು ಇದನ್ನು ಪರಿಗಣಿಸುವುದು ಕರ್ನಾಟಕದ ಸಾರ್ವಜನಿಕ ಸ್ವಾಸ್ಥ್ಯದ ದೃಷ್ಟಿಯಿಂದ ಅತ್ಯಗತ್ಯ. ತಾವು ತಕ್ಷಣ ಈ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು. ಭ್ರಷ್ಟಾಚಾರ ನಡೆದಿರುವುದು ಹೌದೆಂದಾದರೆ, ಆ ಬಗ್ಗೆ ಲೋಕಾಯುಕ್ತರು ತಕ್ಷಣ ಕಾನೂನು ಕ್ರಮ ತೆಗೆದುಕೊಳ್ಳಬೇಕು,' ಎಂದು ಲೇಖಕ ರಾಜರಾಂ ತಲ್ಲೂರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

English summary
Bribe to Journalist: Complaint filed against Karnataka CM Basavaraj Bommai office at Lokayukta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X