ಲಂಚಕ್ಕೆ ಬೇಡಿಕೆ; 6 ಮಂದಿಯ ಪ್ರಕರಣ ರದ್ದುಗೊಳಿಸಲು ನಕಾರ
ಬೆಂಗಳೂರು, ಜೂನ್ 30: ಚನ್ನಗಿರಿ ಕ್ಷೇತ್ರದ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್‌ಗೆ ಲಂಚ ನೀಡಿದ ಆರೋಪಕ್ಕೆ ತುತ್ತಾಗಿರುವ 6 ಮಂದಿ ವಿರುದ್ಧದ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಅಲ್ಲದೇ, ಲಂಚ ಪಡೆಯುವವರನ್ನು ವಿಚಾರಣೆಗೆ ಒಳಪಡಿಸುವಂತೆ ನೀಡುವವರನ್ನೂ ವಿಚಾರಣೆಗೆ ಒಳಪಡುವಂತೆ ಮಾಡುವ ಮೂಲಕ ಭ್ರಷ್ಟಾಚಾರದ ಹಾವಳಿಗೆ ಕಡಿವಾಣ ಹಾಡಲು ಸಕಾಲ ಎಂದೂ ಸಹ ಅಭಿಪ್ರಾಯಪಟ್ಟಿದೆ. ಇದರಿಂದಾಗಿ ಆರೋಪಿಗಳು ವಿಚಾರಣೆಯನ್ನು ಎದುರಿಸಲೇಬೇಕಿದೆ.
ಪ್ರಕರಣದ 5ನೇ ಆರೋಪಿಗಳಾಗಿರುವ ಬೆಂಗಳೂರಿನ ಕರ್ನಾಟಕ ಆರೋಮಾ ಕಂಪನಿಯ ಮಾಲೀಕರಾದ ಕೈಲಾಶ್ ಎಸ್. ರಾಜ್, ವಿನಯ್ ಎಸ್. ರಾಜ್ ಮತ್ತು ಚೇತನ್ ಮರ್ಲೇಚಾ ಹಾಗೂ 2ನೇ ಆರೋಪಿ ಅಲ್ಬರ್ಟ್ ನಿಕೋಲಾಸ್,3ನೇ ಆರೋಪಿ ಗಂಗಾಧರ್, 4ನೇ ಆರೋಪಿ ದೀಪಕ್ ಜಾಧವ್ ಅವರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

'ಲಂಚ ಪಡೆಯುವವರು ಮತ್ತು ಸ್ವೀಕರಿಸುವವರನ್ನು ಪ್ರಾಸಿಕ್ಯೂಷನ್ ಒಂದೇ ನೆಲೆಯಲ್ಲಿ ನಿಲ್ಲುವಂತೆ ಮಾಡುವ ರೀತಿಯಲ್ಲಿ 2018ರ ಜುಲೈ 26ರಂದು ಭ್ರಷ್ಟಾಚಾರ ನಿಯಂತ್ರಣ ಕಾಯಿದೆಗೆ ತಿದ್ದುಪಡಿ ಮಾಡಲಾಗಿದೆ. ದೇಶದ ಸಾರ್ವಜನಿಕ ಬದುಕಿನ ಪ್ರತಿಯೊಂದು ಹಂತದಲ್ಲೂ ಭ್ರಷ್ಟಾಚಾರ ವ್ಯಾಪಿಸಿದ್ದು, ಎಲ್ಲಾ ಕಡೆಯಲ್ಲೂ ಸಮಸ್ಯೆಯಾಗಿದೆ. ಭ್ರಷ್ಟಾಚಾರ ಸಾಂವಿಧಾನಿಕ ಆಡಳಿತಕ್ಕೆ ಮಾರಕವಾಗಿ ಪರಿಣಮಿಸಿದೆ. ಭ್ರಷ್ಟಾಚಾರ ಹಲವು ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದನ್ನು ಅರ್ಥ ಮಾಡಿಕೊಳ್ಳಲಾಗುತ್ತಿಲ್ಲ' ಎಂದು ನ್ಯಾಯಾಲಯ ಹೇಳಿದೆ.
ಆದೇಶದಲ್ಲಿ ಏನಿದೆ?; ಅರ್ಜಿದಾರರ ವಾದ ಒಪ್ಪಿಕೊಂಡರೆ ತನಿಖೆ ನಡೆಸದೇ ಹೊಟ್ಟೆಪಾಡಿಗೆ ಬರೆದ ಚಿತ್ರಕತೆಯನ್ನು ಒಪ್ಪಿದಂತಾಗಲಿದೆ. ಕತೆಯೊಳಗೆ ಕತೆ ಸೇರಿಕೊಂಡಿರುವುದರಿಂದ ಒಂದು ರೀತಿಯಲ್ಲಿ ರೋಚಕವಾಗಿದ್ದು, ಇದೊಂದು ಕಥಾ ಸಂಗಮವಾಗಿದೆ. ಇಲ್ಲಿ ಅರ್ಜಿದಾರರ ಕತೆ ಆಧರಿಸಿ ಅವರನ್ನು ಪ್ರಕರಣದಿಂದ ಕೈಬಿಟ್ಟರೆ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಗೆ ತಿದ್ದುಪಡಿ ಮಾಡಿ ಸೆಕ್ಷನ್ 8, 9 ಮತ್ತು 9 ಸೇರ್ಪಡೆಯು ನಿರರ್ಥಕವಾಗಲಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.
'ಮಾಜಿ ಶಾಸಕ ಮಾಡಾಳ್ ಪುತ್ರ, ಸರ್ಕಾರಿ ಅಧಿಕಾರಿಯಾದ ಎಂ. ವಿ. ಪ್ರಶಾಂತ್ ಕುಮಾರ್ ಅವರ ಕಚೇರಿಯಲ್ಲಿ ನಿಕೋಲಾಸ್ ಮತ್ತು ಗಂಗಾಧರ್ ಅವರು ತಲಾ 45 ಲಕ್ಷ ರೂಪಾಯಿ ಮೌಲ್ಯದ ಬ್ಯಾಗ್‌ಗಳನ್ನು ಇಟ್ಟುಕೊಂಡು ಏಕೆ ಕುಳಿತಿದ್ದರು? ಇದು ತನಿಖೆಯಿಂದ ಹೊರಬರಬೇಕಿದೆ. ಅವರನ್ನು ವಶಕ್ಕೆ ಪಡೆದು ಪ್ರಶ್ನಿಸಿದ ಸಂದರ್ಭದಲ್ಲಿ ತಾವು ಆರೋಮಾ ಕಂಪನಿಯ ಉದ್ಯೋಗಿಗಳಾಗಿದ್ದು, ಪ್ರಶಾಂತ್ ಅವರನ್ನು ಭೇಟಿ ಮಾಡಬೇಕು ಎಂದು ಹೇಳಿದ್ದಾರೆ. ಈ ನಡುವೆ ದೀಪಕ್ ಜಾಧವ್ ಅವರು ಹಣ ತಮಗೆ ಸೇರಿದ್ದು ಎಂದು ಹೇಳಿಕೆ ನೀಡಿದ್ದಾರೆ. ಇದು ನ್ಯಾಯಾಲಯದಲ್ಲಿ ಸಾಬೀತಾಗಬೇಕಿದೆ. ದೀಪಕ್ ಅವರು ಹಣ ತಮಗೆ ಸೇರಿದೆ ಎಂದ ಮಾತ್ರಕ್ಕೆ ಇತರೆ ಆರೋಪಿಗಳ ವಿರುದ್ಧದ ಪ್ರಕರಣ ರದ್ದುಪಡಿಸಲಾಗದು. ಇದೆಲ್ಲವೂ ಸಾಕ್ಷಿಯಿಂದ ಸಾಬೀತಾಗಬೇಕಾದ ಪ್ರಕರಣ' ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ: ಕರ್ನಾಟಕ ಸಾನೂನು ಮತ್ತು ಮಾರ್ಜಕ ಕಾರ್ಖಾನೆಗೆ ರಾಸಾಯನಿಕ ತೈಲ ಪೂರೈಕೆ ಮಾಡುವ ಟೆಂಡರ್ ನೀಡುವ ಕುರಿತು ಕೆಎಸ್‌ಡಿಎಲ್ ಅಧ್ಯಕ್ಷರಾಗಿದ್ದ ಬಿಜೆಪಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ, ಸರ್ಕಾರಿ ಅಧಿಕಾರಿಯಾದ ಪ್ರಶಾಂತ್ ಕುಮಾರ್ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬುದು ಆರೋಪವಾಗಿದೆ.
ಈ ಸಂದರ್ಭದಲ್ಲಿ ಲಂಚ ನೀಡಲು ತಂದಿದ್ದ ಹಣವು ಲೋಕಾಯುಕ್ತ ಪೊಲೀಸರ ಶೋಧನೆಯ ವೇಳೆ ನಿಕೋಲಾಸ್, ಗಂಗಾಧರ್ ಅವರ ಬಳಿ ದೊರೆತಿತ್ತು. ವಾಣಿಜ್ಯ ಕಂಪನಿಯಾದ ಆರೋಮಾ ಸಂಸ್ಥೆಯ ಉದ್ಯೋಗಿಗಳಾದ ಈ ಇಬ್ಬರು ತಲಾ 45 ಲಕ್ಷ ರೂಪಾಯಿ ಮೊತ್ತದ ಎರಡು ಬ್ಯಾಗ್‌ಗಳನ್ನು ಮಾಡಾಳ್ ಪುತ್ರ ಪ್ರಶಾಂತ್ ಅವರ ವೈಯಕ್ತಿಕ ಕಚೇರಿಯಲ್ಲಿ ಇಟ್ಟುಕೊಂಡಿರುವುದನ್ನು ಒಪ್ಪಿಕೊಂಡಿದ್ದರು. ಈ ಸಂಬಂಧ ಕಂಪನಿಯ ಮಾಲೀಕರು ಮತ್ತು ಉದ್ಯೋಗಿಗಳ ವಿರುದ್ಧ ದಾಖಲಾಗಿರುವ ಪ್ರತ್ಯೇಕ ಎರಡು ಪ್ರಕರಣಗಳನ್ನು ವಜಾ ಮಾಡುವಂತೆ ಅರ್ಜಿದಾರರು ಕೋರಿದ್ದರು. ಆದರೆ, ಹೈಕೋರ್ಟ್ ಇದಕ್ಕೆ ನಿರಾಕರಿಸಿದೆ.












Click it and Unblock the Notifications