ಎಚ್.ಡಿ. ದೇವೇಗೌಡರನ್ನು ಭೇಟಿ ಮಾಡಿದ ವಿಪಕ್ಷ ನಾಯಕ ಆರ್. ಅಶೋಕ್, ಶಾಸಕ ಸತೀಶ್ ರೆಡ್ಡಿ & ಬಿಜೆಪಿ ನಾಯಕರು
ಕರ್ನಾಟಕ ಮೂಲದ ಮೊದಲ ಪ್ರಧಾನಿ & ದೇಶಾದ್ಯಂತ ಅನೇಕ ನೀರಾವರಿ ಯೋಜನೆ ಸೇರಿ ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆರೋಗ್ಯ ಈಗ ಸುಧಾರಿಸಿಕೊಂಡಿದೆ. ಕೆಲವು ದಿನಗಳ ಹಿಂದೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆರೋಗ್ಯದಲ್ಲಿ ಏರುಪೇರಾಗಿತ್ತು, ಈ ಹಿನ್ನೆಲೆಯಲ್ಲಿ ಎಚ್.ಡಿ. ದೇವೇಗೌಡರಿಗೆ ಚಿಕಿತ್ಸೆ ನೀಡಲಾಗಿತ್ತು. ಇದೀಗ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದಾರೆ. ಈ ಹಿನ್ನೆಲೆ ವಿಪಕ್ಷ ನಾಯಕ ಆರ್. ಅಶೋಕ್, ಶಾಸಕ ಸತೀಶ್ ರೆಡ್ಡಿ ಸೇರಿದಂತೆ ಬಿಜೆಪಿ ನಾಯಕರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಬಿಜೆಪಿ & ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು 2024 ಲೋಕಸಭಾ ಚುನಾವಣೆ ಎದುರಿಸಿದ್ದವು. ಈ ಮೈತ್ರಿ ಲಾಭವನ್ನೂ ನೀಡಿತ್ತು, ಇದೀಗ ಗ್ರೇಟರ್ ಬೆಂಗಳೂರು ಚುನಾವಣೆಗೆ ಕೌಂಟ್‌ಡೌನ್ ಶುರು ಆಗಿದೆ. ಹೀಗಿದ್ದಾಗ ಮತ್ತೊಮ್ಮೆ ಬಿಜೆಪಿ & ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಕಾರ್ಪೊರೇಷನ್ ಎಲೆಕ್ಷನ್ ಗೆಲ್ಲುವ ಲೆಕ್ಕಾಚಾರ ಹಾಕುತ್ತಿವೆ. ಬಿಜೆಪಿ ಕೇಂದ್ರ ನಾಯಕರು ಕೂಡ ಜೆಡಿಎಸ್ ಜೊತೆಯಲ್ಲಿ ಚುನಾವಣೆ ಎದುರಿಸಲು ಉತ್ಸುಕರಾಗಿದ್ದಾರೆ. ಇಂತಹ ಸಮಯದಲ್ಲಿ ಬೆಂಗಳೂರಿನ ಬಿಜೆಪಿ ನಾಯಕರು ದಿಢೀರ್ ದೇವೇಗೌಡರನ್ನು ಭೇಟಿ ಮಾಡಿರುವುದು ಕುತೂಹಲ ಹೆಚ್ಚಿಸಿದೆ.

ಬಿಜೆಪಿ ನಾಯಕರಿಂದ ಎಚ್‌ಡಿಡಿ ಜೊತೆ ಚರ್ಚೆ
ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ಸೇರಿದಂತೆ, ಬೊಮ್ಮನಹಳ್ಳಿ ಶಾಸಕರಾದ ಸತೀಶ್ ರೆಡ್ಡಿ ಅವರು, ಮಾಜಿ ಸಚಿವ ಮುನಿರತ್ನ ಅವರ ಜೊತೆಗೆ ಶಾಸಕರಾದ ಮುನಿರಾಜು, ರವಿ ಸುಬ್ರಹ್ಮಣ್ಯ & ವಿಧಾನ ಪರಿಷತ್ತು ಸದಸ್ಯ ಸಿ.ಟಿ. ರವಿ ಅವರು ಈ ಸಮಯದಲ್ಲಿ ಹಾಜರಿದ್ದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಿಜೆಪಿ ನಾಯಕರು ಕೆಲಹೊತ್ತು ಚರ್ಚೆ ನಡೆಸಿದ್ದಾರೆ. ಮತ್ತೊಂದು ಕಡೆ ಗ್ರೇಟರ್ ಬೆಂಗಳೂರು ಚುನಾವಣೆಗೆ ಮೊದಲೇ, ಕಾಂಗ್ರೆಸ್ ನಾಯಕರು ಬಿಜೆಪಿಗೆ ವಲಸೆ ಬರುತ್ತಿದ್ದಾರೆ. ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ಸಮೇತ ಹಲವು ನಾಯಕರು ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಚುನಾವಣೆ ನಡೆಯುವುದು ಯಾವಾಗ?
ಗ್ರೇಟರ್ ಬೆಂಗಳೂರು ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಗೆಲುವಿಗಾಗಿ ಕಾಂಗ್ರೆಸ್ ಎಲ್ಲಾ ರೀತಿಯ ತಂತ್ರ & ಪ್ರತಿತಂತ್ರ ಹೆಣೆಯುತ್ತಿದೆ. ಹಾಗೇ ಬಿಜೆಪಿ ನಾಯಕರು ಕೂಡ ಈ ವಿಚಾರದಲ್ಲಿ ಅಲರ್ಟ್ ಆಗಿ ಚುನಾವಣೆಗೆ ಸಿದ್ಧರಾಗುತ್ತಿದ್ದಾರೆ. ಡಿಸೆಂಬರ್ ಅಂತ್ಯಕ್ಕೆ ಅಥವ 2026 ಜನವರಿ ಆರಂಭದಲ್ಲೇ ನಮ್ಮ ಬೆಂಗಳೂರಿನ ಸ್ಥಳೀಯ ಆಡಳಿತಕ್ಕೆ ಚುನಾವಣೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಗ್ರೇಟರ್ ಬೆಂಗಳೂರು ರಚನೆ ಮಾಡಿ ಒಟ್ಟು 5 ವಿಭಾಗ ಮಾಡಲಾಗಿದೆ. ಇದೀಗ ಚುನಾವಣೆಗೆ ಬೆಂಗಳೂರು ಕೂಡ ಸಜ್ಜಾಗಿದ್ದು, ತೀವ್ರ ಕುತೂಹಲ ಕೆರಳಿಸಿದೆ.












Click it and Unblock the Notifications