ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಸತೀಶ್ ರೆಡ್ಡಿ
ಬೆಂಗಳೂರು: ನಗರದಲ್ಲಿ ರಸ್ತೆಗಳ ವಿಚಾರವಾಗಿ ದೊಡ್ಡ ಚರ್ಚೆ ನಡೆಯುತ್ತಿದ್ದು, ರಸ್ತೆಗಳಲ್ಲಿ ಭಾರಿ ಸಮಸ್ಯೆ ಇದ್ದು ಗುಂಡಿಗಳಿಂದ ಸವಾರರಿಗೆ ಸಮಸ್ಯೆ ಆಗುತ್ತಿದೆ ಎಂಬ ಆರೋಪ ಇದೆ. ಹೀಗಾಗಿ ತಕ್ಷಣ ರಸ್ತೆಗಳನ್ನ ಸರಿ ಮಾಡಬೇಕು ಎಂಬ ಒತ್ತಾಯ ಸೋಷಿಯಲ್ ಮೀಡಿಯಾದಲ್ಲಿ ಸೇರಿದಂತೆ ಎಲ್ಲೆಲ್ಲೂ ಈಗ ಕೇಳಿಬರುತ್ತಿದೆ. ಆದರೆ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಇದೀಗ ಹೊಸ ರಸ್ತೆಗಳ ನಿರ್ಮಾಣಕ್ಕೆ & ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ.
ಬೆಂಗಳೂರಿನ ಪ್ರಮುಖ ಕ್ರೇತ್ರಗಳ ಪೈಕಿ ಒಂದಾಗಿರುವ ಬೊಮ್ಮನಹಳ್ಳಿಯಲ್ಲಿ ಇದೀಗ ಹೊಸ ರಸ್ತೆಗಳ ನಿರ್ಮಾಣಕ್ಕೆ, ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರು ಚಾಲನೆ ನೀಡಿದ್ದಾರೆ. ಪ್ರತಿಷ್ಠಿತ ಬಡಾವಣೆ ಎಚ್‌ಎಸ್‌ಆರ್ ಲೇಔಟ್ ಸೇರಿದಂತೆ ಮಂಗಮ್ಮನಪಾಳ್ಯ, ಹೊಂಗಸಂದ್ರ, ಕೋಡ್ಲು ಸುತ್ತಮುತ್ತಲಿನ ರಸ್ತೆಗಳ ಅಭಿವೃದ್ಧಿಗೆ ಈಗ ರೂಪುರೇಷೆ ಸಿದ್ಧವಾಗಿದ್ದು, ಒಂದೊಂದೇ ಕಾಮಗಾರಿಗಳಿಗೆ ಚಾಲನೆಯನ್ನ ನೀಡಲಾಗುತ್ತಿದೆ.

ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ
ಅತ್ಯಂತ ದೊಡ್ಡ ಕ್ಷೇತ್ರಗಳ ಪೈಕಿ ಒಂದಾದ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಲಕ್ಷಾಂತರ ಐಟಿ ಉದ್ಯೋಗಿಗಳು, ಗಾರ್ಮೆಂಟ್ಸ್ & ಇತರ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು ಹೆಚ್ಚಾಗಿದ್ದಾರೆ. ಅದರಲ್ಲೂ ಪ್ರಮುಖವಾಗಿ ಎಚ್‌ಎಸ್‌ಆರ್ ಬಡವಾಣೆ ಬೆಂಗಳೂರಿನಲ್ಲೇ ಸ್ಟಾರ್ಟ್‌ಅಪ್ ಹಬ್ ಆಗಿದೆ. ಹೀಗಾಗಿ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿ ಇದೀಗ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಸತೀಶ್ ರೆಡ್ಡಿ ಅವರು ಮಾಹಿತಿ ನೀಡಿದರು.
ಸಾವಿರಾರು ಸ್ಟಾರ್ಟ್‌ಅಪ್ ಕಂಪನಿಗಳು ಎಚ್‌ಎಸ್‌ಆರ್ ಬಡವಾಣೆಯಿಂದ ಆರಂಭವಾಗಿ ಈಗ ಇಡೀ ದೇಶ & ಜಗತ್ತಿನಲ್ಲಿ ಸದ್ದು ಮಾಡುತ್ತಿವೆ. ಹೀಗಾಗಿ ಜನಸಂಖ್ಯೆ ಕೂಡ ದಿನದಿಂದ ದಿನಕ್ಕೆ ಏರಿಕೆಯನ್ನ ಕಾಣುತ್ತಿದ್ದು, ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತರಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದೇವೆ ಎಂದು ಶಾಸಕ ಸತೀಶ್ ರೆಡ್ಡಿ ಅವರು ತಿಳಿಸಿದರು.
ಹೊಂಗಸಂದ್ರ ಸರ್ಕಾರಿ ಶಾಲೆ ಹೈಟೆಕ್
ಬೊಮ್ಮನಹಳ್ಳಿ ಕ್ಷೇತ್ರ ವ್ಯಾಪ್ತಿಯ ಹೊಂಗಸಂದ್ರ ಸರ್ಕಾರಿ ಶಾಲೆಗೆ ಹೈಟೆಕ್ ರೂಪ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಹೊಂಗಸಂದ್ರ ಸರ್ಕಾರಿ ಶಾಲೆಯ ಹೊಸ ಕಟ್ಟಡ ಉದ್ಘಾಟನೆ ನೆರವೇರಿಸಲಾಗಿತ್ತು. ಹೊಂಗಸಂದ್ರ ಪ್ರದೇಶದಲ್ಲಿ ಗಾರ್ಮೆಂಟ್ಸ್ ಸೇರಿದಂತೆ ಹಲವಾರು ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು ಕುಟುಂಬ ಸಮೇತ ಹೆಚ್ಚಾಗಿ ನೆಲೆಸಿದ್ದಾರೆ, ಹೀಗಾಗಿ ಸರ್ಕಾರಿ ಶಾಲೆಯಲ್ಲಿ ಹೈಟೆಕ್ ಸೌಲಭ್ಯ ಕಲ್ಪಿಸಿರುವುದು ಸಾಕಷ್ಟು ನೆರವು ನೀಡಲಿದೆ ಅಂತಿದ್ದಾರೆ ಸ್ಥಳೀಯರು.












Click it and Unblock the Notifications