ಸಚಿವ ಸೋಮಶೇಖರ್- ಸ್ಯಾಂಟ್ರೋ ರವಿ ನಡುವೆ ಬಾಂಬೆ ಅನುಬಂಧ: ಕುತೂಹಲಕರ ನಂಟು ಬಿಡಿಸಿಟ್ಟ ಕಾಂಗ್ರೆಸ್
ಬೆಂಗಳೂರು, ಜನವರಿ 7: ಇದುವರೆಗೂ ಚೀಫ್ ಮಿನಿಸ್ಟರ್, ಚೀಫ್ ಸೆಕ್ರೆಟರಿ ಎಂಬ ಸಾಂವಿಧಾನಿಕ ಹುದ್ದೆಗಳಿದ್ದವು. ಬಿಜೆಪಿ ಆಡಳಿತಕ್ಕೆ ಬಂದಮೇಲೆ 'ಚೀಫ್ ಬ್ರೋಕರ್' ಎಂಬ ಹೊಸ ಹುದ್ದೆ ಸೃಷ್ಟಿಸಿ ಅದಕ್ಕೆ ಸ್ಯಾಂಟ್ರೋ ರವಿಯನ್ನು ನೇಮಕ ಮಾಡಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಸ್ಯಾಂಟ್ರೋ ರವಿ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕೆಪಿಸಿಸಿ, 'ಸಚಿವ ಸೋಮಶೇಖರ್ ವರ್ಗಾವಣೆಗೆ ಸಂಬಂಧಿಸಿದಂತೆ ಆತನೊಂದಿಗೆ ಮಾತಾಡಿದ್ದಾರೆ. ಎಲ್ಲಾ ಸಚಿವರೊಂದಿಗೆ ಆತ ನಿಕಟ ಸಂಪರ್ಕದಲ್ಲಿದ್ದಾನೆ. ಸಚಿವ ಸೋಮಶೇಖರ್ ಅವರೇ, ನಿಮ್ಮ ರವಿಯ ಈ ಬಂಧ ಬಾಂಬೆಯ ಅನುಬಂಧವೇ? ಸ್ಯಾಂಟ್ರೋ ರವಿ ಬಿಜೆಪಿ ಸರ್ಕಾರದ ಚೀಫ್ ಬ್ರೋಕರ್ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ ಬೊಮ್ಮಾಯಿ ಅವರೇ?' ಎಂದು ಪ್ರಶ್ನಿಸಿದೆ.
'ಸ್ಯಾಂಟ್ರೋ ರವಿ ನನಗೆ ತಿಳಿದೇ ಇಲ್ಲ ಎಂದಿದ್ದ ಸಚಿವ ಸೋಮಶೇಖರ್ ಅವರ ಅಸಲಿತನ ಬಯಲಾಗಿದೆ. ಸಿಎಂ ಅವರೂ ಆತ ನನಗೆ ತಿಳಿದೇ ಇಲ್ಲ ಎಂದಿದ್ದಾರೆ, ಅವರ ಅಸಲಿಯತ್ತು ಬಯಲಾದರೆ ಯಾವ ಸಮಜಾಯಿಷಿ ಕೊಡಬಲ್ಲರು ಸ್ಯಾಂಟ್ರೋ ರವಿಯನ್ನು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಲ್ಲಿ ಪ್ರಕರಣ ದಾಖಲಿಸದೆ ಇನ್ಯಾವ ಆಧಾರದಲ್ಲಿ ತನಿಖೆ ಮಾಡುತ್ತಿದ್ದೀರಿ?' ಎಂದು ಕೇಳಿದೆ.

ದಿನೇಶ್ ಗುಂಡೂರಾವ್ ಟ್ವೀಟ್
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ದಿನೇಶ್ ಗುಂಡೂರಾವ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, 'ಸ್ಯಾಂಟ್ರೋ ರವಿ' ಎಂಬ ಪಿಂಪ್ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನೇ ವರ್ಗಾವಣೆ ಮಾಡಿಸುತ್ತಾನೆ. ಈ ಸರ್ಕಾರದಲ್ಲಿ 'ತಲೆ ಹಿಡುಕ'ನೊಬ್ಬ ಪೊಲೀಸ್ ಅಧಿಕಾರಿಗಳನ್ನೇ ವರ್ಗಾವಣೆ ಮಾಡುವಷ್ಟು ಪ್ರಭಾವಿಯೇ? ಗೃಹ ಮಂತ್ರಿ ಜ್ಞಾನೇಂದ್ರರವರೆ ತಲೆಹಿಡುಕ ಸ್ಯಾಂಟ್ರೋ ರವಿ ಜೊತೆ ನಿಮ್ಮ ಸಂಬಂಧವೇನು? ನಿಮ್ಮ ಗಮನಕ್ಕೆ ಬಾರದೆ ವರ್ಗಾವಣೆ ನಡೆಸಲು ಸಾಧ್ಯವೇ?' ಎಂದು ಪ್ರಶ್ನಿಸಿದ್ದಾರೆ.

'ತಲೆಹಿಡುಕ ಸ್ಯಾಂಟ್ರೋ ರವಿ ವರ್ಗಾವಣೆ ಸಂಬಂಧ ಪೊಲೀಸ್ ಅಧಿಕಾರಿಗಳ ಬಳಿ ಮಾತನಾಡಿರೋ ಆಡಿಯೋ ರಿಲೀಸ್ ಆಗಿದೆ. ಆ ಆಡಿಯೋದಲ್ಲಿ ಬೊಮ್ಮಾಯಿಯವರೆ ನನಗೆ ಸರ್ ಎನ್ನುತ್ತಾರೆ, ನೀವು ನನಗೆ ಸರ್ ಎನ್ನಬೇಕು ಎಂದು DYSPಯೊಬ್ಬರಿಗೆ ಧಮಕಿ ಹಾಕಿದ್ದಾನೆ. ಸರ್ಕಾರದ ಪ್ರಭಾವಿಗಳ ರಕ್ಷಣೆಯಿಲ್ಲದೆ ಅಧಿಕಾರಿಗೆ ಧಮಕಿ ಹಾಕಲು ಸ್ಯಾಂಟ್ರೋ ರವಿಗೆ ಸಾಧ್ಯವೇ?' ಎಂದು ಕೇಳಿದ್ದಾರೆ.

'ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಕೊಂಡಿರುವ ಸ್ಯಾಂಟ್ರೋ ರವಿ ಜೊತೆ BJP ಯ ಹಲವು ನಾಯಕರು ಸಂಪರ್ಕದಲ್ಲಿದ್ದಾರೆ.BJPಯವರು ವಿಶೇಷವಾಗಿ ತಲೆಹಿಡುಕರ ಸಂಗ ಯಾಕೆ ಬೆಳೆಸುತ್ತಾರೋ ಅರ್ಥವಾಗುತ್ತಿಲ್ಲ BJPಯವರು ತಲೆಹಿಡುಕರ ಸಂಗ ಬೆಳೆಸುವ ಹಿಂದಿನ ಮರ್ಮವೇನು? ಉತ್ತರಿಸುವಿರಾ ಬೊಮ್ಮಾಯಿಯವರೇ?' ಎಂದು ಕೇಳಿದ್ದಾರೆ.












Click it and Unblock the Notifications