ಮಂಗಳೂರು ಬಾಂಬ್ ಪತ್ತೆ: ಶೃಂಗೇರಿಯಲ್ಲಿ ಕುಮಾರಸ್ವಾಮಿ ಸ್ಪೋಟಕ ಹೇಳಿಕೆ
ಚಿಕ್ಕಮಗಳೂರು, ಜ 21: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ದ ಮಂಗಳೂರಿನಲ್ಲಿ ನಡೆದ ಹಿಂಸಾಚಾರಕ್ಕೆ ಪೊಲೀಸರನ್ನು ದೂರಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಜೀವ ಬಾಂಬ್ ಪತ್ತೆಯಾಗಿದ್ದ ವಿಚಾರದಲ್ಲೂ ಪೊಲೀಸರ ವಿರುದ್ದ ಸಂಶಯ ವ್ಯಕ್ತ ಪಡಿಸಿದ್ದಾರೆ.
Recommended Video
ಶೃಂಗೇರಿಯಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ, "ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆಯಾಗಿರುವ ವಿಚಾರದಲ್ಲಿ ನನಗೆ ಪೊಲೀಸರ ಮೇಲೆಯೇ ಅನುಮಾನವಿದೆ" ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.
"ಸರಕಾರ ಮತ್ತು ಪೊಲೀಸರು ಸಮಾಜವನ್ನು ಒಡೆಯುವ ಕೆಲಸವನ್ನು ಮಾಡಬಾರದು. ನನಗೆ ಕೆಲವು ಪೊಲೀಸರ ಮೇಲೆ ನಂಬಿಕೆಯಿಲ್ಲ" ಎಂದು ಕುಮಾರಸ್ವಾಮಿ ಹೇಳಿದ್ದಾರೆ.

"ಸಮಾಜದಲ್ಲಿ ಅಪನಂಬಿಕೆ ಉಂಟಾಗದಂತೆ ನೋಡಿಕೊಳ್ಳುವುದು ಸರಕಾರದ ಕೆಲಸ. ಆದರೆ, ಬಿಜೆಪಿಯವರು ಜಾತಿಜಾತಿಯ ನಡುವೆ ಬೆಂಕಿ ಹಚ್ಚುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ" ಎಂದು ಕುಮಾರಸ್ವಾಮಿ ಬೇಸರ ವ್ಯಕ್ತ ಪಡಿಸಿದ್ದಾರೆ.
"ಬಾಂಬ್ ಪತ್ತೆಯಾದ ಜಾಗದಲ್ಲಿ ಸಿಸಿಟಿವಿ ಕ್ಯಾಮರಾ ಇದೆ. ಘಟನೆಯ ಸತ್ಯಾಸತ್ಯತೆಯನ್ನು ಪೊಲೀಸರು ಜನರ ಮುಂದೆ ಇಡಬೇಕು. ಘಟನೆ ನಡೆದ ಹದಿನೈದು ದಿನಗಳಲ್ಲಿ ಇನ್ನೊಂದು ಕಥೆಯನ್ನು ಹುಟ್ಟು ಹಾಕಬಾರದು" ಎಂದು ಕುಮಾರಸ್ವಾಮಿ ಹೇಳಿದ್ದಾರೆ.
"ಸರಕಾರಕ್ಕೆ ನನ್ನ ಮನವಿ ಇಷ್ಟೇ. ಒಂದು ವರ್ಗವನ್ನು ಓಲೈಸಿಕೊಳ್ಳಲು, ಇನ್ನೊಂದು ಸಮಾಜಕ್ಕೆ ತೊಂದರೆಯನ್ನು ಕೊಡಬೇಡಿ. ಸತ್ಯ ಏನಿದೆಯೋ ಅದನ್ನು ಜನತೆಯ ಮುಂದಿಡಿ" ಎಂದು ಕುಮಾರಸ್ವಾಮಿ ಹೇಳಿದ್ದಾರೆ.












Click it and Unblock the Notifications