ಬಾಂಬ್ ಸ್ಫೋಟ ಭೀತಿ: ಕರ್ನಾಟಕ ಬಿಜೆಪಿ ಕಚೇರಿಯಲ್ಲಿ ಈ ಕ್ರಮ, ಏನದು
ಉಗ್ರರ ಭೀತಿ ಹಿನ್ನೆಲೆಯಲ್ಲಿ ಕರ್ನಾಟಕದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಈಗ ಹೈ ಅಲರ್ಟ್ ಮಾಡಲಾಗಿದೆ. ಬಿಜೆಪಿ ಕಚೇರಿಗೂ ಉಗ್ರರು ಬಾಂಬ್ ಇಡ್ಬೇಕು ಅಂತ ಅಂದ್ಕೊಂಡಿದ್ರು ಎನ್ನುವ ವಿಷಯ ಬೆಳಕಿಗೆ ಬಂದ ಬೆನ್ನಲ್ಲೇ ಹೈ ಅಲರ್ಟ್ ಘೋಷಿಸಲಾಗಿದ್ದು. ಭದ್ರತೆಯ ದೃಷ್ಟಿಯಿಂದ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಾಮಾನ್ಯವಾಗಿ ಯಾವುದಾದರೂ ವಿಶೇಷ ಕಾರ್ಯಕ್ರಮ, ಸಭೆ ಹಾಗೂ ಸಮಾರಂಭದಂತಹ ಸಂದರ್ಭದಲ್ಲಿ ಮಾತ್ರ ಇಲ್ಲಿ ಹೆಚ್ಚಿನ ಭದ್ರತೆ ಮಾಡಿಕೊಳ್ಳಲಾಗುತ್ತಿತ್ತು. ಇದೀಗ ಎಲ್ಲಾ ದಿನವೂ ಬಿಗಿ ಭದ್ರತೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್ಐಎ ಚಾರ್ಜ್‌ಶೀಟ್ ಸಲ್ಲಿಸಿದೆ. ಇದರಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯನ್ನೂ ಉಡಾಯಿಸಲು ಉಗ್ರರು ಮೊದಲು ಪ್ಲಾನ್ ಮಾಡಿಕೊಂಡಿದ್ದರು ಎನ್ನುವ ಅಂಶವಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲು ಮುಂದಾಗಿದೆ. ಚಾರ್ಜ್‌ಶೀಟ್‌ನಲ್ಲಿರುವ ಅಂಶ ಬಹಿರಂಗವಾಗುತ್ತಿದ್ದಂತೆಯೇ ಕರ್ನಾಟಕ ಗೃಹ ಇಲಾಖೆ ಅಲರ್ಟ್ ಆಗಿದೆ. ಬಿಜೆಪಿ ಕಚೇರಿಗೆ ಹೆಚ್ಚಿನ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ವಿಶೇಷ ಸಂದರ್ಭದಲ್ಲಿ ಮಾತ್ರ ಬಳಸಲಾಗುತ್ತಿದ್ದ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದೆ. ಬಿಗಿ ಪರಿಶೀಲನೆಗೆ ಸೂಚಿಸಲಾಗಿದ್ದು ಹೆಚ್ಚುವರಿ ಪೊಲೀಸರು ಸ್ಥಳದಲ್ಲೇ ಇದ್ದಾರೆ.

ಬೆಂಗಳೂರಿನ ಬ್ರೂಕ್ ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ಈಚೆಗೆ ಬಾಂಬ್ ಸ್ಫೋಟವಾಗಿತ್ತು. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಮಾಡುವುದಕ್ಕೂ ಮೊದಲು ಶಂಕಿತ ಉಗ್ರರು ಕರ್ನಾಟಕ ಬಿಜೆಪಿಯ ಕೇಂದ್ರ (ಘಟಕ) ಕಚೇರಿಯ ಮೇಲೂ ದಾಳಿ ಮಾಡಲು ಉದ್ದೇಶಿಸಿದ್ದರು. ಈ ವಿಷಯವನ್ನು ಎನ್‌ಐಎ ತನ್ನ ಚಾರ್ಚ್‌ಶೀಟ್‌ನಲ್ಲಿ ಉಲ್ಲೇಖ ಮಾಡಿರುವ ಹಿನ್ನೆಲೆಯಲ್ಲಿ ಈಗ ಈ ವಿಷಯ ಬಿಜೆಪಿ ಹಾಗೂ ಕಾಂಗ್ರೆಸ್‌ನ ನಡುವೆ ವಾಕ್ಸಮರಕ್ಕೆ ಕಾರಣವಾಗಿದ್ದು. ಗೃಹ ಇಲಾಖೆ ಅಲರ್ಟ್ ಆಗಿದೆ. ಬಿಜೆಪಿ ಕಚೇರಿಗೆ ಯಾವುದೇ ಕಾರಣಕ್ಕೂ ಯಾರನ್ನೂ ಪರಿಶೀಲನೆ ಮಾಡದೆ ಬಿಡಬಾರದು. ಯಾರೇ ಕಚೇರಿಗೆ ಬರುವುದಿದ್ದರೂ ಮೆಟಲ್ ಡಿಟೆಕ್ಟರ್ ಒಳಗಿಂದಲೇ ಬರಬೇಕು. ಬಿಜೆಪಿ ಕೇಂದ್ರ ಕಚೇರಿಯ ಮೇಲೆ ಮಲ್ಲೇಶ್ವರ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಸಬ್ ಇನ್ಸ್ಪೆಕ್ಟರ್ ಅವರು ಮೇಲುಸ್ತುವಾರಿ ವಹಿಸಬೇಕು ಎಂದೂ ನಿರ್ದೇಶನ ನೀಡಲಾಗಿದೆ.
ಬಿಜೆಪಿ ಕಚೇರಿಯಲ್ಲಿ ಭಾರೀ ಭದ್ರತೆ
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಾಲ ಶ್ರೀರಾಮರ ಪ್ರಾಣ ಪ್ರತಿಷ್ಠಾಪನೆ ಮಾಡುವ ದಿನದಂದೇ ಬಿಜೆಪಿ ಕಚೇರಿಯಲ್ಲೂ ಬಾಂಬ್ ಸ್ಫೋಟಿ ಮಾಡಬೇಕು ಎಂದು ಇಸಿಸ್ ಉಗ್ರ ಸಂಘಟನೆ ಯೋಜನೆ ರೂಪಿಸಿತ್ತು. ಇದಕ್ಕೆ ಶಂಕಿತ ಉಗ್ರರು ಸಹ ಮುಂದಾಗಿದ್ದರು ಎನ್ನುವ ಆಘಾತಕಾರಿ ಅಂಶ ಇದೀಗ ಬೆಳಕಿಗೆ ಬಂದಿದೆ. ಹೀಗಾಗಿ, ಕರ್ನಾಟಕದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕೆಎಸ್‌ಆರ್‌ಪಿಯ 20 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಒಬ್ಬರು ಸಹಾಯಕ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹಾಗೂ ಮೂವರು ಕಾನ್‌ಸ್ಟೆಬಲ್ ಸ್ಥಳದಲ್ಲಿ ಇರಲಿದ್ದಾರೆ. ಬಿಜೆಪಿಯ ಕಚೇರಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಫಿಕ್ಸ್ ಮಾಡಲಾಗಿದೆ. ಇಷ್ಟೆಲ್ಲ ಅಲ್ಲದೇ ಆರು ಜನ ಖಾಸಗಿ ಭದ್ರತಾ ಸಿಬ್ಬಂದಿಯನ್ನು ಸಹ ಬಿಜೆಪಿ ನೇಮಿಸಿದೆ. ಒಟ್ಟಾರೆಯಾಗಿ ಯಾವುದೇ ಅನುಮಾನಸ್ಪದ ವಸ್ತು ಅಥವಾ ವ್ಯಕ್ತಿ ಕಂಡು ಬಂದರೆ ಕೂಡಲೇ ಮಾಹಿತಿ ನೀಡುವಂತೆ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ.












Click it and Unblock the Notifications