ಇನ್ನೆರಡು ದಿನದಲ್ಲಿ ಬಸ್ ದರ ಇಳಿಕೆ : ರಾಮಲಿಂಗಾ ರೆಡ್ಡಿ
ಬೆಳಗಾವಿ, ಡಿ.18 : ಜನರ ಮತ್ತು ಪ್ರತಿಪಕ್ಷಗಳ ಒತ್ತಾಯಕ್ಕೆ ಮಣಿದಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ಪ್ರಯಾಣ ದರವನ್ನು ಇಳಿಸಲಾಗುವುದು ಎಂದು ಹೇಳಿದ್ದಾರೆ. ಅಧಿಕಾರಿಗಳ ಜೊತೆ ಈ ಕುರಿತು ಮಾತುಕತೆ ನಡೆಸಿದ್ದು ಇನ್ನೆರಡು ದಿನದಲ್ಲಿ ದರ ಇಳಿಕೆ ಬಗ್ಗೆ ಘೋಷಣೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮತ್ತು ದಾಸರಹಳ್ಳಿ ಶಾಸಕ ಎಸ್.ಮುನಿರಾಜು (ಬಿಜೆಪಿ) ಅವರ ಪ್ರಶ್ನೆಗೆ ಗುರುವಾರದ ಬೆಳಗಾವಿಯಲ್ಲಿನ ಚಳಿಗಾಲದ ಅಧಿವೇಶನದಲ್ಲಿ ಉತ್ತರ ನೀಡಿದ ಸಚಿವ ರಾಮಲಿಂಗಾ ರೆಡ್ಡಿ ಅವರು, ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ಸಂಸ್ಥೆ ಎಷ್ಟು ನಷ್ಟದಲ್ಲಿದೆ ಎಂದು ಅಂಕಿ-ಅಂಶಗಳ ಸಮೇತ ಮಾಹಿತಿ ನೀಡಿದರು.

ಮಾರ್ಕೊಪೋಲೋ ಮತ್ತು ವೋಲ್ವೋ ಬಸ್ಸುಗಳಿಂದಾಗಿ ಬಿಎಂಟಿಸಿಗೆ ನಷ್ಟ ಉಂಟಾಗುತ್ತಿದೆ. ಈ ಬಸ್ಸುಗಳಿಂದ 28.22 ಕೋಟಿ ನಷ್ಟವಾಗಿದೆ ಎಂದು ಸಚಿವರ ಉತ್ತರ ನೀಡಿದರು. ಇನ್ನೆರಡು ದಿನದಲ್ಲಿ ಬಸ್ ಪ್ರಯಾಣ ದರ ಇಳಿಕೆಯ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗುವುದು ಎಂದರು. [ಬಸ್ ಪ್ರಯಾಣ ದರ ಇಳಿಕೆ ಸಚಿವರು]
ಕಳೆದ ಮೂರು-ನಾಲ್ಕು ತಿಂಗಳಲ್ಲಿ ಡೀಸೆಲ್ ದರ ಒಟ್ಟಾರೆ 8 ರೂ. ಇಳಿಕೆಯಾಗಿದ್ದರೂ ಸರ್ಕಾರ ಬಸ್ ಪ್ರಯಾಣ ದರ ಕಡಿಮೆ ಮಾಡಿರಲಿಲ್ಲ. ಇದು ಜನರು ಮತ್ತು ವಿವಿಧ ಸಂಘಸಂಸ್ಥೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ನಷ್ಟದ ನೆಪ ಹೇಳಿದ್ದ ಇಲಾಖೆ ಕೊನೆಗೂ ಜನರ ಮತ್ತು ಸಂಘಸಂಸ್ಥೆಗಳ ಒತ್ತಾಯಕ್ಕೆ ಮಣಿದು ಬಸ್ ದರ ಇಳಿಸಲು ಮುಂದಾಗಿದೆ.
ಸಚಿವರ ಉತ್ತರದ ಪ್ರಮುಖ ಅಂಶಗಳು
* 98 ಮಾರ್ಕೊಪೋಲೋ ಬಸ್ ನಿಲ್ಲಿಸಲಾಗುತ್ತದೆ
* 2009ರಲ್ಲಿ 98 ಮಾರ್ಕೊಪೋಲೋ ಬಸ್ ಖರೀದಿ
* 2014ರ ಅಕ್ಟೋಬರ್ ವರೆಗೆ ಮೂರುವರೆ ಕೋಟಿ ನಷ್ಟ ಉಂಟಾಗಿದೆ
* ವೋಲ್ವೋ, ಮಾರ್ಕೊಪೋಲೋ ಬಸ್‌ಗಳಿಂದ28.25 ಕೋಟಿ ನಷ್ಟ
* ಬ್ಯಾಂಕ್‌ಗಳಿಂದ ಪಡೆದ 384 ಕೋಟಿ ಸಾಲ ಬಾಕಿ ಇದೆ
* ಕಳೆದ ಒಂದೂವರೆ ವರ್ಷದಲ್ಲಿ 1028 ಬಸ್ ಖರೀದಿ ಮಾಡಲಾಗಿದ್ದು, 320 ಕೋಟಿ ಖರ್ಚು ಮಾಡಲಾಗಿದೆ
* 2013-14ರಲ್ಲಿ 147.59 ಕೋಟಿ ನಷ್ಟ
* 2012-13ರಲ್ಲಿ 47.95 ಕೋಟಿ ನಷ್ಟ
* 1998ರಿಂದ 2012ರವರೆಗೆ ಬಿಎಂಟಿಸಿ ಲಾಭದಲ್ಲಿತ್ತು












Click it and Unblock the Notifications