ಮಹಿಳೆಯಿಂದ 2 ಕೋಟಿ ರೂ.ಗೆ ಬ್ಲಾಕ್‌ಮೇಲ್: ಶಾಸಕ ರಾಜಕುಮಾರ್ ಪಾಟೀಲ್ ದೂರು
ಬೆಂಗಳೂರು, ಫೆ. 07: ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ಗೆ ಎರಡು ಕೋಟಿ ರೂ. ನೀಡುವಂತೆ ಬ್ಲಾಕ್ ಮೇಲ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮಹಿಳೆಯೊಬ್ಬರು ನನಗೆ ಎರಡು ಕೋಟಿ ರೂ. ನೀಡುವಂತೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಶಾಸಕ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಮಹಿಳೆ ಮತ್ತು ಆಕೆಯ ಪತಿಯನ್ನು ವಿಧಾನಸೌಧ ಪೊಲೀಸರು ವಿಚಾರಣೆ ನಡೆಸಿ ಕಳುಹಿಸಿ ಕೊಟ್ಟಿದ್ದಾರೆ.
ಬೊಮ್ಮಾಯಿಗೆ ದೂರು:
ಬಿಜೆಪಿಯ ಶಾಸಕರೊಬ್ಬರು ನನ್ನನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಮಗು ಹುಟ್ಟಿಸಿ ಮೋಸ ಮಾಡಿದ್ದಾರೆ. ಈ ಕುರಿತು ತಮ್ಮನ್ನು ಭೇಟಿ ಮಾಡಲು ಅನೇಕ ಸಲ ಪ್ರಯತ್ನಿಸಿದೆ. ಸಾಧ್ಯವಾಗದ ಕಾರಣ ಫೇಸ್‌ಬುಕ್ ಮೂಲಕ ತಮ್ಮ ಗಮನಕ್ಕೆ ತರುತ್ತಿದ್ದು ನ್ಯಾಯ ಒದಗಿಸುವಂತೆ ಕೋರಿ ಮಹಿಳೆಯೊಬ್ಬರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಫೇಸ್ ಬುಕ್ ಗೆ ಟ್ಯಾಗ್ ಮಾಡಿದ್ದರು. ಈ ವಿಚಾರ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು.

ಇದರ ಬೆನ್ನಲ್ಲೇ ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಮಹಿಳೆ ಸೇರಿದಂತೆ ನಾಲ್ವರನ್ನು ವಿಧಾನಸೌಧ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್, ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ತನಿಖೆ ಹಂತದಲ್ಲಿದೆ ಎಂದಷ್ಟೇ ಸ್ಪಷ್ಟನೆ ನೀಡಿದ್ದಾರೆ.
ಮೂರು ದಿನದ ಹಿಂದೆ ಪೋಸ್ಟ್:
ಕಲಬುರಗಿಯ ಬಿಜೆಪಿ ಪಕ್ಷದ ಶಾಸಕರು ನನ್ನನ್ನು ಪ್ರೀತಿಸಿದ್ದರು. ಮದುವೆಯಾಗುವುದಾಗಿ ನಂಬಿಸಿದ್ದರು. ಮಗು ಜನಿಸಿದ ಬಳಿಕ ಮೋಸ ಮಾಡಿದ್ದಾರೆ. ನಿಮ್ಮನ್ನು ಭೇಟಿ ಮಾಡಲು ಆಗಲಿಲ್ಲ ಎಂದು ಬಸವರಾಜ ಬೊಮ್ಮಾಯಿ ಅವರ ಫೇಸ್ ಬುಕ್ ಪೇಜ್ ನಲ್ಲಿ ತನ್ನ ಅಳಲು ತೋಡಿಕೊಂಡಿದ್ದರು ನೊಂದ ಮಹಿಳೆ.

ಪ್ರಧಾನಿ ನರೇಂದ್ರ ಮೋದಿ ಆತ್ಮ ನಿರ್ಭರ ಕುರಿತು ಮಾಡಿದ್ದ ಭಾಷಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಮಹಿಳೆ ಈ ವಿಚಾರವನ್ನು ಬರೆದುಕೊಂಡಿದ್ದರು. ನನಗೆ ಮಗುವಿದೆ. ನಿಮ್ಮಿಂದ ಭರವಸೆ ಸಿಕ್ಕ ಬಳಿಕ ನಾನು ಮುಂದಿನ ಹೋರಾಟ ನಡೆಸುತ್ತೇನೆ. ನ್ಯಾಯ ಸಿಗುವ ವರೆಗೂ ಹೋರಾಟ ಮುಂದುವರೆಸುತ್ತೇನೆ ಎಂದು ಅಳಲು ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ರಾಜಕುಮಾರ್ ಪಾಟೀಲ್ ನೀಡಿದ ದೂರಿನ ಮೇರೆಗೆ ಬ್ಲಾಕ್ ಮೇಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications