ಸ್ವಾತಿ ನಕ್ಷತ್ರದ ರೇವಣ್ಣಗೆ ಮಾಟ ಮಂತ್ರ ತಟ್ಟೋಲ್ವಂತೆ
ಬೆಂಗಳೂರು, ಸೆ.28: ಮಾಜಿ ಸಚಿವ, ಜಡಿಎಸ್ ಹಿರಿಯ ನಾಯಕ ಎಚ್‌ಡಿ ರೇವಣ್ಣ ಅವರು ಮಾಟ-ಮಂತ್ರ, ವಾಮಾಚಾರಕ್ಕೆ ಕಡಿವಾಣ ಹಾಕಲು ಉತ್ಸುಕತೆ ತೋರುತ್ತಿರುವ ರಾಜ್ಯ ಸರ್ಕಾರವನ್ನು ತಮ್ಮದೇ ಆದ ಶೈಲಿಯಲ್ಲಿ ಟೀಕಿಸಿದ್ದಾರೆ. 'ನನ್ನದು ಸ್ವಾತಿ ನಕ್ಷತ್ರ. ಯಾವ ಮಾಟವೂ ನನಗೆ ತಟ್ಟುವುದಿಲ್ಲ. ಬದಲಿಗೆ, ಅದು ಮಾಡಿಸಿದವರಿಗೇ ತೊಂದರೆ ಕೊಡುತ್ತದೆ' ಎಂದು ಎಚ್ಚರಿಕೆ ಮಿಶ್ರಿತ ಧಾಟಿಯಲ್ಲಿ ಕಟಕಿಯಾಡಿದ್ದಾರೆ.
ಮಾಟ-ಮಂತ್ರ, ವಾಮಾಚಾರಕ್ಕಾಗಿ ಪ್ರತ್ಯೇಕ ಇಲಾಖೆ ರಚಿಸಬೇಕು. ಮುಜರಾಯಿ ಇಲಾಖೆಯಿಂದ ಅದನ್ನು ಬೇರ್ಪಡಿಸಬೇಕು. ಈ ಬಗ್ಗೆ ಹೆಚ್ಚಿನ ಉತ್ಸಾಹ ತೋರುತ್ತಿರುವ ಸಚಿವ ಟಿಬಿ ಜಯಚಂದ್ರ ಅವರಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡುವುದು ಒಳಿತು. ಈ ವಿಷಯದಲ್ಲಿ ಅವರು ಹೆಚ್ಚು ತಿಳಿದುಕೊಂಡಂತಿದೆ ಎಂದು ರೇವಣ್ಣ ಲೇವಡಿ ಮಾಡಿದ್ದಾರೆ.

ಮಾಟ ಮಂತ್ರ ಮೊದಲು ದೆಹಲಿಯಲ್ಲಿ ನಿಲ್ಲಲಿ: 'ಮಾಟ-ಮಂತ್ರ ಹೆಚ್ಚು ನಡೆಯುವುದು ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ. ಹೀಗಾಗಿ ರಾಷ್ಟ್ರಮಟ್ಟದಲ್ಲೇ ಮೊದಲು ಅದನ್ನು ನಿಷೇಧಿಸುವ ಕಾಯ್ದೆ ಜಾರಿಯಾಗಬೇಕು. ಅದಕ್ಕೆ ನಮ್ಮ ಪಕ್ಷ ಪೂರ್ಣ ಬೆಂಬಲ ನೀಡಲಿದೆ' ಎಂದು ಹೇಳಿ ರೇವಣ್ಣ ನಗೆಯಾಡಿದ್ದಾರೆ.
'ತಮಗೆ ಬೇಕಾದವರಿಗೆ ಉದ್ಯೋಗ ಕೊಡಿಸಲು ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಸದಸ್ಯರ ಮೇಲೆ ಬಹುತೇಕ ಎಲ್ಲ ರಾಜಕಾರಣಿಗಳೂ ಪ್ರಭಾವ ಬೀರಿದ್ದಾರೆ. ಬೇಕಾದರೆ ಎಲ್ಲ ಸದಸ್ಯರ ದೂರವಾಣಿ ಸಂಖ್ಯೆಗಳನ್ನು ಒಮ್ಮೆ ಪರಿಶೀಲಿಸಲಿ' ಎಂದು ರೇವಣ್ಣ ಇದೇ ಸಂದರ್ಭದಲ್ಲಿ ಸವಾಲು ಹಾಕಿದ್ದಾರೆ.
'ಪರಿಶಿಷ್ಟ ಜಾತಿಯ ಗೋನಾಳ ಭೀಮಪ್ಪ ಅವರನ್ನು ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಭೀಮಪ್ಪ ಮನೆ ಪರಿಸ್ಥಿತಿ ಏನು ಎನ್ನುವುದು ನನಗೆ ಗೊತ್ತು' ಎಂದು ರೇವಣ್ಣ ಇತ್ತೀಚೆಗೆ ಸುದ್ದಿಗಾರರ ಮುಂದೆ ಹೇಳಿದ್ದಾರೆ.
'ನೇಮಕಾತಿಯಲ್ಲಿ ಅಕ್ರಮ ನಡೆದಿದ್ದರೆ ಕ್ರಮ ತೆಗೆದುಕೊಳ್ಳಲಿ. ಆದರೆ, ರಾಜಕಾರಣಿಗಳು ಎಷ್ಟು ಬಾರಿ ದೂರವಾಣಿ ಕರೆ ಮಾಡಿ ಒತ್ತಡ ಹೇರಿದ್ದಾರೆ ಎನ್ನುವುದನ್ನೂ ತನಿಖೆ ಮಾಡಲಿ. ಆಗ ಸತ್ಯ ಏನು ಎನ್ನುವುದು ಗೊತ್ತಾಗುತ್ತದೆ' ಎಂದೂ ಅವರು ಹೇಳಿದರು. ಇಷ್ಟಕ್ಕೂ ದೂರವಾಣಿ ಕರೆ ಮಾಡಿಲ್ಲ ಎಂದು ಹೇಳುವ ರಾಜಕಾರಣಿ ಯಾರಿದ್ದಾರೆ? ಎಂದು ರೇವಣ್ಣ ಪ್ರಶ್ನಿಸಿದರು.












Click it and Unblock the Notifications