ವಿಜಯೇಂದ್ರರನ್ನು ಮುಗಿಸಲು ಬಿಎಲ್ ಸಂತೋಷ್‌ಗೆ ಸುಪಾರಿ ಕೊಟ್ಟ ವಿರೋಧಿ ಬಣ- ವೈರಲ್ ಆದ್ವು ಫೋಟೊಗಳು
ಬೆಂಗಳೂರು, ಫೆಬ್ರವರಿ 04: ದಕ್ಷಿಣ ಭಾರತದಲ್ಲಿ ಕಮಲ ಅರಳಿಸುವಲ್ಲಿ ಪ್ರಮುಖ ಪಾತ್ರವಹಿಸಿದವರು ಬಿ ಎಸ್ ಯಡಿಯೂರಪ್ಪ. ರಾಜ್ಯ ಬಿಜೆಪಿ ಘಟಕದಲ್ಲಿ ಗರಿಷ್ಠ ಸಂಖ್ಯೆಯ ಬೆಂಬಲಿಗರನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಅವರು ರಾಜ್ಯದಲ್ಲಿ ಪಕ್ಷದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ಇದೀಗ ಬಿ ವೈ ವಿಜಯೇಂದ್ರ ಅವರ ವಿರೋಧಿ ಬಣ ಸಿಡಿದೆದ್ದಿದೆ.
ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಾಗಿ ಹಾಗೂ ನಿಷ್ಠವಂತ ಕಾರ್ಯಕರ್ತರಾಗಿ ರಾಜ್ಯದಲ್ಲಿ ಬಿಜೆಪಿಯ ಮೇಲೆ ಸಂಪೂರ್ಣ ಹಿಡಿತವನ್ನ ಸಾಧಿಸಿದ ಬಿ ಎಸ್ ಯಡಿಯೂರಪ್ಪ ಅವರ ಮಾತಿನ ಮಣಿದು ಬಿಜೆಪಿ ಹೈಕಮಾಂಡ್ ಬಿಎಸ್ವೈ ಪುತ್ರ ಹಾಗೂ ಶಾಸಕ ಬಿ ವೈ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಪಟ್ಟವನ್ನ ನೀಡಿತ್ತು. ಬಿಜೆಪಿ ಹೈಕಮಾಂಡ್ ತೆಗೆದುಕೊಂಡ ನಿರ್ಧಾರಕ್ಕೆ ಯಡಿಯೂರಪ್ಪ ಅವರ ವಿರೋಧಿ ಬಣ ತೀವ್ರವಾಗಿ ವಿರೋಧಿಸಿತ್ತು.

ಬಿ ವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷ ಸ್ಥಾನವನ್ನ ವಹಿಸಿಕೊಂಡ ದಿನದಿಂದಲೂ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಬಹಿರಂಗವಾಗಿ ಯಡಿಯೂರಪ್ಪ ಹಾಗೂ ಬಿ ವೈ ವಿಜಯೇಂದ್ರ ಅವರ ವಿರುದ್ಧ ವಾಗ್ದಾಳಿ ನಡೆಸಿಕೊಂಡೆ ಬಂದಿದ್ದಾರೆ. ಇದೀಗ ಬಿ ವೈ ವಿಜಯೇಂದ್ರ ಅವರ ರಾಜ್ಯಾಧ್ಯಕ್ಷ ಸ್ಥಾನವನ್ನ ವಹಿಸಿಕೊಂಡು ಬರೋಬ್ಬರಿ ಒಂದು ವರ್ಷದ ಬಳಿಕ ಯತ್ನಾಳ್ ಟೀಂ ಗರಂ ಆಗಿದ್ದು, ಬಹಿರಂಗವಾಗಿಯೇ ಅಸಮಾಧಾನವನ್ನ ಹೊರಹಾಕಿದೆ. ಸದ್ಯ ರಾಜ್ಯ ರಾಜಕೀಯದ ಬೆಳವಣಿಗೆ ಬಿಜೆಪಿ ಹೈಕಮಾಂಡ್ ಅಂಗಳದಲ್ಲಿದೆ.
ಇಂದು ದೆಹಲಿಯಲ್ಲಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಬಿ. ಎಲ್. ಸಂತೋಷ್ ಅವರನ್ನು ನಿಯೋಗದೊಂದಿಗೆ ಮಾಜಿ ಶಾಸಕ ಕುಮಾರ ಬಂಗಾರಪ್ಪ ಅವರು ಭೇಟಿ ಮಾಡಿ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದ್ದಾರೆ. ಬಿ ಎಲ್ ಸಂತೋಷ್ ಅವರನ್ನ ಭೇಟಿ ಮಾಡಿರುವ ಫೋಟೋ ಒನ್ ಇಂಡಿಯಾ ಕನ್ನಡಕ್ಕೆ ಲಭ್ಯವಾಗಿದ್ದು, ರಾಜ್ಯಾಧ್ಯಕ್ಷರ ಬದಲಾವಣೆ ಹಾಗೂ ಜಿಲ್ಲಾಧ್ಯಕ್ಷರ ಬದಲಾವಣೆ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ.
ಮೊದಲಿದಲೂ ಸಹ ಬಿ ಎಸ್ ಯಡಿಯೂರಪ್ಪ ಅವರ ವಿರುದ್ಧ ಬಿ ಎಸ್ ಸಂತೋಷ್ ಅವರಿಗೆ ಅಸಮಾಧಾನವಿದೆ. ಇದೀಗ ಬಿ ವೈ ವಿಜಯೇಂದ್ರ ಅವರ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್, ಕುಮಾರಬಂಗಾರಪ್ಪ, ರಮೇಶ್ ಜಾರಕಿಹೊಳಿ, ಬಿ.ಪಿ.ಹರೀಶ್, ಜಿ.ಎಂ.ಸಿದ್ದೇಶ್ವರ, ಚಂದ್ರಪ್ಪ, ಸಂಸದ ಕೆ.ಸುಧಾಕರ್ ಸೇರಿದಂತೆ ಮತ್ತಿತರರು ದೆಹಲಿಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಇದೀಗ ಬಿ ವೈ ವಿಜಯೇಂದ್ರ ಅವರನ್ನ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ನಿಟ್ಟಿನಲ್ಲಿ ಹೈಕಮಾಂಡ್ ನಾಯಕರ ಭೇಟಿಗೆ ಮುಂದಾಗಿದ್ದಾರೆ. ಇನ್ನೂ ದೆಹಲಿ ವರಿಷ್ಠರನ್ನ ಭೇಟಿಯಾಗುವ ಮೊದಲೇ ಬಿ ಎಲ್ ಸಂತೋಷ್ ಅವರನ್ನ ಭೇಟಿ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕಳೆದ ಒಂದು ವರ್ಷದ ಬಳಿಕ ಬಿ ವೈ ವಿಜಯೇಂದ್ರ ಅವರ ವಿರುದ್ಧ ತಿರುಗಿ ಬಿದ್ದಿರುವ ಯತ್ನಾಳ್ ಬಣದ ಹಿಂದೆ ಬಿಎಲ್ ಸಂತೋಷ್ ಇದ್ದಾರೆ ಎಂದು ಹೇಳಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ ವೈ ವಿಜಯೇಂದ್ರ ಅವರನ್ನ ಕೆಳಗಿಳಿಸಲು ಬಸವನಗೌಡ ಪಾಟೀಲ್ ಯತ್ನಾಳ್ ಬಣ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಬಿ ಎಲ್ ಸಂತೋಷ್ ಅವರಿಗೆ ಒತ್ತಡ ಹಾಕಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಈ ಕುರಿತಾಗಿಯೇ ಬಿ ಎಲ್ ಸಂತೋಷ್ ಅವರ ಜೊತೆಗೆ ಸುದೀರ್ಘವಾಗಿ ಕುಮಾರ ಬಂಗಾರಪ್ಪ ಅವರು ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications