ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಬಿಕೆ ಹರಿಪ್ರಸಾದ್‌ಗೆ ಸ್ಥಾನ: ಸಿದ್ದರಾಮಯ್ಯರನ್ನು ಕಟ್ಟಿಹಾಕುವ ತಂತ್ರವೇ?
ಬೆಂಗಳೂರು, ಆಗಸ್ಟ್ 21: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊಂದಿರುವ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಲಾಗಿದೆ. ಕಾಂಗ್ರೆಸ್ ಹೈಕಮಾಂಡ್ ತೆರೆದುಕೊಂಡಿರುವ ನಿರ್ಧಾರ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕುವ ತಂತ್ರದ ಭಾಗವೇ ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.
ಕರ್ನಾಟಕದಲ್ಲಿ ಅಭೂತಪೂರ್ವ ಯಶಸ್ಸಿನ ಬಳಿಕ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಬೇಕೆಂಬ ಹೆಬ್ಬಯಕೆಯನ್ನು ಹರಿಪ್ರಸಾದ್ ಹೊಂದಿದ್ದರು. ಆದರೆ, ಅವರಿಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಜೊತೆಗೆ ಗಟ್ಟಿ ಸಂಬಂಧ ಹೊಂದಿರುವ ಬಿಕೆ ಹರಿಪ್ರಸಾದ್ ಹಲವು ವರ್ಷಗಳ ಕಾಲ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. 19 ರಾಜ್ಯಗಳಲ್ಲಿ ಪಕ್ಷದ ಪರ ಕೆಲಸ ಮಾಡಿರುವ ಅವರು ಕೇಂದ್ರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಅಸಮಾಧಾನ
ಕರ್ನಾಟಕ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಬಿಕೆ ಹರಿಪ್ರಸಾದ್ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ವಿಧಾನಪರಿಷತ್ ಸದಸ್ಯರೂ ಆಗಿರುವ ಬಿಕೆ ಹರಿಪ್ರಸಾದ್ ಅವರು ಸಿದ್ದರಾಮಯ್ಯ ವಿರುದ್ಧ ಹಲವು ಬಾರಿ ವಾಗ್ದಾಳಿ ನಡೆಸಿದ್ದಾರೆ. 'ಮುಖ್ಯಮಂತ್ರಿ ಮಾಡುವುದು ಅಥವಾ ಬೀಳಿಸುವುದು ನಮಗೆ ಗೊತ್ತು' ಎಂದು ಈ ಹಿಂದೆ ಹೇಳಿದ್ದರು.
ಬಿಲ್ಲವ ಸಮುದಾಯದ ಸಭೆಯೊಂದರಲ್ಲಿ ಮಾತನಾಡಿದ್ದ ಬಿಕೆ ಹರಿಪ್ರಸಾದ್, 'ನನಗೆ ಸಿಎಂ ಮಾಡುವುದು ಹೇಗೆ, ಅವರನ್ನು ಕೆಳಗಿಳಿಸುವುದು ಹೇಗೆಂಬುದು ಗೊತ್ತು. ನಾನು ಯಾರ ಬಳಿಯೂ ಭಿಕ್ಷೆ ಬೇಡುವುದಿಲ್ಲ. ಎದೆಯೊಡ್ಡಿ ನಿಲ್ಲುತ್ತೇನೆ. ಸಚಿವರಾಗುವುದು ಬೇರೆ ಪ್ರಶ್ನೆ' ಎಂದು ತಿಳಿಸಿದ್ದರು.

'ಸಮುದಾಯದ ಜನರು ಜಾಗೃತರಾಗಿರಬೇಕು. ನಾನು ಸಚಿವನಾಗುತ್ತೇನೋ ಇಲ್ಲವೋ ಎಂಬುದು ಬೇರೆ ಪ್ರಶ್ನೆ. ಈ ದೇಶದಲ್ಲಿ ಐವರು ಮುಖ್ಯಮಂತ್ರಿಗಳನ್ನು ಮಾಡುವಲ್ಲಿ ನಾನು ಈಗಾಗಲೇ ಪ್ರಮುಖ ಪಾತ್ರ ವಹಿಸಿದ್ದೇನೆ. ಜಾರ್ಖಂಡ್, ಹರಿಯಾಣ ಮತ್ತು ಪಂಜಾಬ್‌ನಲ್ಲಿ ನಾನು ಇದನ್ನು ಮಾಡಿದ್ದೇನೆ' ಎಂದು ಹರಿಪ್ರಸಾದ್ ಹೇಳಿದ್ದರು.
'ಸಿದ್ದರಾಮಯ್ಯ ಹಿಂದುಳಿದ ವರ್ಗಕ್ಕೆ ಸೇರಿದವರು. ಎಲ್ಲರೂ ಒಗ್ಗಟ್ಟಾಗಿ ಉಳಿಯಬೇಕು ಎಂಬ ಕಾರಣಕ್ಕೆ 2013ರಲ್ಲಿ ಬೆಂಬಲ ಅವರಿಗೆ ನೀಡಿದ್ದೆವು' ಎಂದು ಅವರು ತಿಳಿಸಿದ್ದರು.
ಡಿಕೆಗೆ ಬಿಕೆ ಮನವಿ
ಮಂಡಳಿ ಹಾಗೂ ನಿಗಮಗಳಿಗೆ ತೆರವಾದ ಹುದ್ದೆಗಳನ್ನು ಭರ್ತಿ ಮಾಡುವ ಸಂದರ್ಭದಲ್ಲಿ ಎಲ್ಲ ಸಮುದಾಯಗಳಿಗೂ ಸಮಾನ ಅವಕಾಶ ಕಲ್ಪಿಸುವಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಬಿಕೆ ಹರಿಪ್ರಸಾದ್ ಅವರು ಭಾನುವಾರ ಹೇಳಿದ್ದಾರೆ.

ಪಕ್ಷದ ಕಾರ್ಯಕರ್ತರ ಹಿತಾಸಕ್ತಿ ಕಾಪಾಡುವಂತೆ ಶಿವಕುಮಾರ್ ಅವರಿಗೆ ಮನವಿ ಮಾಡುತ್ತೇನೆ. ಪಕ್ಷದ ಕಾರ್ಯಕರ್ತರು ತಮ್ಮನ್ನು ಹೊರಗಿಡಲಾಗಿದೆ ಎಂದು ಭಾವಿಸಬಾರದು ಎಂಬುದಾಗಿ ಅವರು ತಿಳಿಸಿದ್ದಾರೆ.
ಸಿದ್ದರಾಮಯ್ಯ ಕಟ್ಟಿಹಾಕಲು ಹೈಕಮಾಂಡ್ ತಂತ್ರ
ಸಿದ್ದರಾಮಯ್ಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಇರುವ ಬಿಕೆ ಹರಿಪ್ರಸಾದ್ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಲಾಗಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಮೂಲ ಕಾಂಗ್ರೆಸ್ಸಿಗರಾಗಿರುವ ಬಿಕೆ ಹರಿಪ್ರಸಾದ್ ಅವರು ಶಿವಕುಮಾರ್ ಪರ ಬ್ಯಾಟ್ ಮಾಡುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರನ್ನು ಕಟ್ಟಿಹಾಕಲು ಹರಿಪ್ರಸಾದ್ ಅವರಿಗೆ ಹೈಕಮಾಂಡ್ ಮಣೆ ಹಾಕಿದೆಯೇ ಎಂಬ ಚರ್ಚೆಗಳು ಹುಟ್ಟಿಕೊಂಡಿವೆ.












Click it and Unblock the Notifications