ಅಶಾಂತಿಯ ಬೆಂಕಿಯಲ್ಲಿ ರಾಜಕೀಯ ರೊಟ್ಟಿ ಸುಡುವುದು ಕಾಂಗ್ರೆಸ್ ಜಾಯಮಾನ: ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ, ಏಪ್ರಿಲ್6: ಎಸ್‍ಸಿ, ಎಸ್‍ಟಿ ಸಮುದಾಯದ ಮತವನ್ನು ಖಾಯಂ ಆಗಿ ಪಡೆದವರು ಇಷ್ಟುವರ್ಷ ಆಡಳಿತ ನಡೆಸಿದ್ದರು. ಒಂದು ರೀತಿಯಲ್ಲಿ ಒತ್ತೆಯಾಳು, ಮತಬ್ಯಾಂಕ್ ಆಗಿ ಮಾಡಿದ್ದೀರಿ. ಚುನಾವಣೆ ಬಂದಾಗ ಸುಳ್ಳು ಘೋಷಣೆ ಪ್ರಕಟಿಸಿ ಹಗ್ಗ ಕೊಟ್ಟು ಮತ್ತೆ ಬಾವಿಗೆ ಹಾಕುವ ಕೆಲಸವನ್ನು 70 ವರ್ಷ ಮಾಡುತ್ತಾ ಬಂದಿದ್ದೀರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಒಳ ಮೀಸಲಾತಿ ಜಾರಿ ಸಂಬಂಧ ರಾಜ್ಯದ ಬಿಜೆಪಿ ಸರಕಾರವು ಬಗ್ಗೆ ತೆಗೆದುಕೊಂಡ ನಿರ್ಧಾರವನ್ನು ರಾಜ್ಯದ ಪರಿಶಿಷ್ಟ ಜಾತಿ ಸಮುದಾಯಗಳು ಸ್ವಾಗತಿಸಿದ್ದು, ಈ ಸಮುದಾಯಗಳ ವತಿಯಿಂದ ಹುಬ್ಬಳ್ಳಿಯಲ್ಲಿ ಸನ್ಮಾನ ಸ್ವೀಕರಿಸುವ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯ ಭಾಷಣಕ್ಕಷ್ಟೇ ಸೀಮಿತವಾಗಿತ್ತು. ಹಿಂದೆ ಇದ್ದವರು ಹಿಂದೆಯೇ ಇದ್ದಾರೆ. ಯಾರು ಭಾಷಣ ಮಾಡಿದರೋ ಮುಂದೆ ಹೋದರು. ಈಗಲೂ ಕೂಡ ವಂಚನೆ ಮಾಡುವ ಆಟವನ್ನು ಕಾಂಗ್ರೆಸ್ ಮಾಡುತ್ತಿದೆ. ಎಚ್ಚರಿಕೆ ಇರಲಿ ಎಂದರು.

ಸಮಾಜ ಒಡೆದಾಳುವ, ಸಂಘರ್ಷಕ್ಕೆ ಈಡು ಮಾಡುವ ಪ್ರಯತ್ನ ಕಾಂಗ್ರೆಸ್‍ನದು. ಎಲ್ಲ ಸಮುದಾಯಗಳು ಶಾಂತಿಯಿಂದ ಬಾಳುವ ಕರ್ನಾಟಕದಲ್ಲಿ ವಿಷಬೀಜ ಬಿತ್ತಿ ಅಶಾಂತಿ ಮಾಡಿ ಅದರ ಬೆಂಕಿಯಲ್ಲಿ ರಾಜಕೀಯ ರೊಟ್ಟಿ ಸುಡುವುದು ಕಾಂಗ್ರೆಸ್ ಜಾಯಮಾನ. ಕಾಂಗ್ರೆಸ್ ಲಿಂಗಾಯತ ಸಮಾಜ, ಧರ್ಮವನ್ನು ಒಡೆಯುವ ಪ್ರಯತ್ನ ಮಾಡಿತು. ಮಕ್ಕಳಲ್ಲಿ ಜಾತಿ, ಧರ್ಮದ ವಿಷಬೀಜ ಬಿತ್ತಿದ್ದರು. ಒಂದು ವರ್ಗದ ಮಕ್ಕಳಿಗೆ ಮಾತ್ರ ಪ್ರವಾಸ ಅವಕಾಶ ನೀಡಿ, ಎಸ್‍ಸಿ, ಎಸ್‍ಟಿ, ಹಿಂದುಳಿದ ವರ್ಗಕ್ಕೆ ಅಂಥ ಅವಕಾಶ ಇರಲಿಲ್ಲ. ಇದ್ಯಾವ ನೀತಿ? ಇದೆಂಥ ಕಾರ್ಯಕ್ರಮ? ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಇದೇ ನೆಹರೂ ಮೈದಾನದಲ್ಲಿ 2016ರಲ್ಲಿ ಈ ಎಲ್ಲ ಸಮುದಾಯ ನಿರೀಕ್ಷೆಯಿಂದ ಸೇರಿತ್ತು. ಒಳ ಮೀಸಲಾತಿಯ ತೀರ್ಮಾನಕ್ಕೆ ಲಕ್ಷಗಟ್ಟಲೆ ಜನ ಸೇರಿದ್ದರು. ಅವತ್ತು ಸನ್ಮಾನ್ಯ ಸಿದ್ದರಾಮಣ್ಣ ಬಂದರು. ವೇಗದಲ್ಲಿ ಬಂದು ದೀಪ ಹಚ್ಚಿ ಅದೇ ವೇಗದಲ್ಲಿ ತೆರಳಿದ್ದರು. ಇದು ಕಾಂಗ್ರೆಸ್ ನೀತಿ. ಬದ್ಧತೆ, ರಾಜಕೀಯ ಇಚ್ಛಾಶಕ್ತಿ ಇಲ್ಲ.

ಹಲವಾರು ವರ್ಷಗಳ ಐತಿಹಾಸಿಕ ಹೋರಾಟ ಇದಾಗಿತ್ತು. ಇದನ್ನು ಮಾಡಕೂಡದು; ಯಾರು ಮಾಡುತ್ತಾರೋ ಅವರು ಭಸ್ಮ ಆಗುತ್ತಾರೆಂದು ತಿಳಿಸಿದ್ದರು. ನಾನು ಸಿಎಂ ಆಗಿ ಅತ್ಯಂತ ತುಳಿತಕ್ಕೆ ಒಳಗಾದ, ಸರಿಯಾದ ಸೂರಿಲ್ಲದ, ಆಶ್ರಯ ಇಲ್ಲದ, ಪ್ರತಿನಿತ್ಯ ಕೂಲಿ ಮಾಡಿ ತಿನ್ನುವ ಪರಿಸ್ಥಿತಿಯ, ಮಕ್ಕಳನ್ನೂ ದುಡಿಯಲು ಕಳುಹಿಸುವ ಜನರಿಗೆ ನ್ಯಾಯ ಒದಗಿಸಲು ಮುಂದಾಗಿದ್ದೇನೆ ಎಂದು ತಿಳಿಸಿದರು.
ಯಾರಿಗಾಗಿ ಸ್ವಾತಂತ್ರ್ಯ, ಯಾರಿಗಾಗಿ ಪ್ರಜಾಪ್ರಭುತ್ವ ಎಂದು ಕೇಳಿದ ಅವರು, ಈ ದೇಶದ ಕಟ್ಟಕಡೆಯ ಜನರಿಗೆ ನ್ಯಾಯ ಸಿಗದೇ ಇದ್ದರೆ ಪ್ರಜಾಪ್ರಭುತ್ವಕ್ಕೆ ಅರ್ಥ ಇದೆಯೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಸ್ಥಾನಮಾನ ಶಾಶ್ವತ ಅಲ್ಲ, ನಿಮ್ಮ ಹೃದಯದಲ್ಲಿ ಸ್ಥಾನ ಲಭಿಸಿದೆ. ಇದು ಶಾಶ್ವತ ಎಂದು ಹೇಳಿದರು.
ನಿಮಗೆ ನ್ಯಾಯ, ಅವಕಾಶ ಕೊಡುವ ಸಣ್ಣ ಕೆಲಸ ಮಾಡಿದ್ದೇನೆ. ಬಡವರಾಗಿ ಆಕಸ್ಮಿಕವಾಗಿ ನಾವು ಹುಟ್ಟಬಹುದು. ಬಡವರಾಗಿ ಸಾಯಬೇಕೆಂದು ಕಾನೂನಿಲ್ಲ. ನಮ್ಮ ದುಡಿಮೆ, ಶ್ರಮ, ಬುದ್ಧಿವಂತಿಕೆಯಿಂದ ಮುಂದೆ ಬರಲು ಅವಕಾಶ ಮಾಡಿಕೊಡಬೇಕಾಗಿದೆ. ಕರ್ನಾಟಕದಲ್ಲಿ 130ರಿಂದ 140 ಸ್ಥಾನ ಗೆದ್ದು ಬಿಜೆಪಿ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾವುದೇ ಶಕ್ತಿಯಿಂದ ತಡೆಯಲಾಗದು ಎಂದು ಸವಾಲು ಹಾಕಿದರು.
ಒಳ ಮೀಸಲಾತಿಯ ಮಹತ್ವ ಮತ್ತು ಪ್ರಯೋಜನವನ್ನು ಜನರಿಗೆ ತಿಳಿಸಲು ಮನವಿ ಮಾಡಿದರು. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ದೊಡ್ಡ ಕೆಲಸವನ್ನು ಬಸವರಾಜ ಬೊಮ್ಮಾಯಿಯವರು ಮಾಡಿದ್ದಾರೆ. ಅವರಿಗೆ ಅಭಿನಂದನೆಗಳು ಎಂದರು. ಒಳ ಮೀಸಲಾತಿ ವಿಚಾರದಲ್ಲಿ ಐತಿಹಾಸಿಕ ತೀರ್ಮಾನ ನಮ್ಮದು. ಕಾಂಗ್ರೆಸ್‍ನವರು ಉದ್ದೇಶಪೂರ್ವಕವಾಗಿ ಬೋವಿ, ಕೊರಮ ಮತ್ತಿತರರ ಮೀಸಲಾತಿ ತೆಗೆದುಹಾಕಲಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಮತಕ್ಕಾಗಿ ರಾಜಕೀಯ. ನನ್ನ ಬದುಕಿನ ಕೊನೆ ಉಸಿರು ಇರುವವರೆಗೂ ಅಂಥ ನಿರ್ಧಾರ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಂವಿಧಾನ ನೀಡಿದ ಮಹಾನ್ ವ್ಯಕ್ತಿ ಡಾ. ಬಾಬಾಸಾಹೇಬ ಅಂಬೇಡ್ಕರರಿಗೆ ಅಪಮಾನ ಮಾಡಿದವರು ಕಾಂಗ್ರೆಸ್‍ನವರು. ಅವರು ತೀರಿಕೊಂಡಾಗ ದೆಹಲಿಯ ರಾಜಘಾಟ್‍ನಲ್ಲಿ ಆರಡಿ ಆರಡಿ ಜಾಗ ಕೊಡಲಿಲ್ಲ. ಮುಂಬೈ ದಾದರ್‍ನಲ್ಲಿ ಶವಸಂಸ್ಕಾರ ಮಾಡಲು ಕಾಂಗ್ರೆಸ್ಸಿಗರು ಕಾರಣ. ಇದನ್ನು ಮನವರಿಕೆ ಮಾಡುವಂತೆ ವಿನಂತಿಸಿದರು.












Click it and Unblock the Notifications