ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದೆ ನನಗೆ ಯಾರೂ ಒತ್ತಾಯ ಮಾಡಿರಲಿಲ್ಲ. ಆದರೆ.. : ಯಡಿಯೂರಪ್ಪ ಹೇಳಿದ್ದೇನು?
ಯಾದಗಿರಿ,ಮಾರ್ಚ್ 8: ಮುಂಬರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಈ ನಡುವೆ ನಾನು ಮುಂದಿನ ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಾದ್ಯಂತ ಪ್ರವಾಸವನ್ನ ನಡೆಸಿದ್ದಾರೆ.
ಮಂಗಳವಾರ ಯಾದಗಿರಿಯಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಬಿ ಎಸ್ ಯಡಿಯೂರಪ್ಪ ಅವರು ಮಾತನಾಡಿ, ನನಗಿಗ 81 ವರ್ಷ. ನಾನು ಮುಂದಿನ ವಿಧಾನಸಭೆ ಚುನಾವಣೆಗೆ ನಿಲ್ಲಲ್ಲಎಂದು ಹೇಳಿದ್ದೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದೆ ನನಗೆ ಯಾರೂ ಒತ್ತಾಯ ಮಾಡಿರಲಿಲ್ಲ. ಆದರೆ ರಾಜಕೀಯ ಮಾಡುತ್ತೇನೆ. ಈ ಬಾರಿ ಪಕ್ಷವನ್ನು ಗೆಲ್ಲಿಸಬೇಕಿದೆ. ಅದಕ್ಕೆ ನೀವು ಗೊಂದಲಕ್ಕೆ ಅವಕಾಶ ಮಾಡಿಕೊಡದೇ ಯಾರೇ ಅಭ್ಯರ್ಥಿ ಹಾಕಿದರೂ ಗೆಲ್ಲಿಸಬೇಕು ಎಂದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ140ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಸಂಕಲ್ಪ ಮಾಡಿದ್ದೇನೆ. ಯಾದಗಿರಿ ಜಿಲ್ಲೆಯ ಎಲ್ಲ4 ಕ್ಷೇತ್ರಗಳನ್ನು ನಾವು ಗೆಲ್ಲಲೇಬೇಕು.ಅದಕ್ಕೆ ನೀವೆಲ್ಲ ತಯಾರಾಗಬೇಕು.
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ರಾಹುಲ್ ಗಾಂಧಿ ಸರಿಸಾಟಿ ಅಲ್ಲ. ಅವರು ಭಾರತ್ ಜೋಡೋ ಯಾತ್ರೆ ಮುಗಿದ ಬಳಿಕ ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ. ಇಂತಹವರಿಂದ ದೇಶದ ಅಭಿವೃದ್ಧಿ ಆಗಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಹಣದ ಬಲ, ತೋಳ್ಬಲ ಅಧಿಕಾರದ ಬಲ, ಜಾತಿಯ ವಿಷ ಬೀಜ ಬಿತ್ತಿ ಚುನಾವಣೆ ಗೆಲ್ಲುತ್ತಿದ್ದರು. ಆದರೆ ಆ ಕಾಲ ಹೋಗಿದೆ. ಜನರು ಜಾಗೃತರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನಮ್ಮ ಸರಕಾರದ ಯೋಜನೆಗಳು ಜನರಿಗೆ ತಲುಪಿವೆ. ಈ ಯಡಿಯೂರಪ್ಪ ಅಲ್ಪಸಂಖ್ಯಾತರಿಗೆ ದ್ರೋಹ ಮಾಡಿದ ಒಂದೇ ಒಂದು ಉದಾಹರಣೆ ಕೊಡಿ. ನಾವೆಲ್ಲ ಮೋದಿಯವರು ಮನಸ್ಸಿನಂತೆ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್‌ಗೆ ಈಗ ನಾಯಕರು ಯಾರಿದ್ದಾರೆ? ರಾಹುಲ್ ವಿದೇಶಕ್ಕೆ ಹೋಗಿದ್ದಾರೆ ಮತ್ತೆ ಯಾವಾಗ ಬರುತ್ತಾರೆ ಗೊತ್ತಿಲ್ಲಎಂದು ವ್ಯಂಗ್ಯವಾಡಿದರು.
ಇತ್ತೀಚಿಗೆ ನಡೆದ ಮೂರು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಅದೇ ರೀತಿಯ ಫಲಿತಾಂಶ ಕರ್ನಾಟಕದಲ್ಲಿಯೂ ಬರಲಿದೆ. ಕಾಂಗ್ರೆಸ್ ಪಕ್ಷಕ್ಕೆ ಜನತೆ ಸರಿಯಾಗಿ ತಕ್ಕಪಾಠವನ್ನು ಕಲಿಸಲಿದ್ದಾರೆ ಎಂದು ಕಿಡಿಕಾರಿದರು.












Click it and Unblock the Notifications