"ಯತ್ನಾಳ್ ಅದಕ್ಕೇ ನಿಮ್ಮನ್ನ ಬಚ್ಚಾ, ಎಳಸು ಅನ್ನೋದು"
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ರಾಜ್ಯ ಕಾಂಗ್ರೆಸ್ ನಡುವೆ ಟಾಕ್ ವಾರ್ ಜೋರಾಗಿದೆ. ಶಾಸಕ ಮುನಿರತ್ನ ಹಾಗೂ ಆರ್‌ಎಸ್‌ಎಸ್ ಟೋಪಿಯನ್ನು ಡಿಕೆ ಶಿವಕುಮಾರ್ ಅವಮಾನಿಸಿದ್ದಾರೆ ಎಂದು ವಿಜಯೇಂದ್ರ ಕಿಡಿಕಾರಿದ್ದರು. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ಅಪ್ಪನ ರಾಜಕೀಯ ಪ್ರಭಾವದಿಂದ ರಾಜಕೀಯಕ್ಕೆ ಬಂದ ತಕ್ಷಣ ರಾಜ್ಯಾಧ್ಯಕ್ಷ ಹುದ್ದೆ ಸಿಕ್ಕ ನಿಮಗೆ ಆ ಸ್ಥಾನದಲ್ಲಿ ಕೂತು ಯಾವ ವಿಚಾರವಾಗಿ ಮಾತನಾಡಬೇಕು, ಟೀಕಿಸಬೇಕು ಎಂಬ ಕನಿಷ್ಠ ಜ್ಞಾನವೂ ಇಲ್ಲ ಎಂದು ಲೇವಡಿ ಮಾಡಿದೆ.
ವಿಜಯೇಂದ್ರ ಅವರೇ ನಿಮ್ಮಿಂದ ಅದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಅದಕ್ಕೆ ಅಲ್ಲವೇ ಯತ್ನಾಳ್ ಅವರು ನಿಮ್ಮನ್ನು ಬಚ್ಚಾ, ಎಳಸು ಎಂದು ಕರೆಯುವುದು? ಎಂದು ವ್ಯಂಗ್ಯ ಮಾಡಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಉದ್ಯಾನದಲ್ಲಿ ಹೆಜ್ಜೆ ಹಾಕಿ ಸಾರ್ವಜನಿಕರ ಜೊತೆ ಮಾತನಾಡಿ ಅವರ ಕಷ್ಟ ಕೇಳಲು ಬಂದಿದ್ದರು. ಶಿಷ್ಟಾಚಾರ ಉಲ್ಲಂಘನೆ ಆಗಿದ್ದರೆ, ಅದನ್ನು ಪ್ರಶ್ನಿಸುವ ರೀತಿ ಇರುತ್ತದೆ. ಕಾರ್ಯಕ್ರಮಕ್ಕೆ ಅಡ್ಡಿ ಮಾಡುವುದಲ್ಲ ಎಂದು ಹೇಳಿದೆ.

ಸಂಚು ಬಯಲಾದರೂ ತುಟಿ ಬಿಚ್ಚಲಿಲ್ಲ
ನಿಮ್ಮ ಶಾಸಕರ ನಾಟಕವನ್ನು ಸಮರ್ಥಿಸಿಕೊಳ್ಳುವ ನೀವು, ಅವರ ಮೇಲೆ ಅತ್ಯಾಚಾರ ಆರೋಪ ಬಂದಾಗ ಬಾಯಿಗೆ ಬೀಗ ಹಾಕಿಕೊಂಡಿದ್ದೇಕೆ? ನಿಮ್ಮದೇ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರಿಗೆ ಏಡ್ಸ್ ಸೋಂಕು ತಗುಲಿಸುವ ಸಂಚು ಬಯಲಾದಾಗಲೂ ತುಟಿ ಬಿಚ್ಚದ ನೀವು, ಈಗ ಯಾವ ನೈತಿಕತೆ ಇಟ್ಟುಕೊಂಡು ಟೀಕೆ ಮಾಡುತ್ತೀರಿ? ಎಂದು ತಿರುಗೇಟು ನೀಡಿದೆ.
ವಿಜಯೇಂದ್ರ ಹೇಳಿದ್ದೇನು?
ಮುನಿರತ್ನ ಹಾಗೂ ಡಿಕೆ ಶಿವಕುಮಾರ್ ವಾಗ್ವಾದವನ್ನು ಖಂಡಿಸಿದ್ದ ವಿಜಯೇಂದ್ರ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪಾಳೇಗಾರಿಕೆ ಸಂಸ್ಕೃತಿಗೆ ಜಾಗವಿಲ್ಲ ಎಂದಿದ್ದರು. ಡಿಕೆ ಶಿವಕುಮಾರ್ ಒಬ್ಬ ಜನಪ್ರತಿನಿಧಿಯನ್ನು ಅಪಮಾನಿಸಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಅಗೌರವ ತೋರಿಸಿದ್ದಾರೆ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಸ್ಥಳೀಯ ಶಾಸಕ ಮುನಿರತ್ನ ಅವರನ್ನೇ ಆಹ್ವಾನಿಸದೆ, ಶಾಸಕರೊಂದಿಗೆ ಉಡಾಫೆಯಿಂದ ವರ್ತಿಸಿರುವುದು ಹಾಗೂ ಅವರು ಧರಿಸಿದ್ದ ಆರ್‌ಎಸ್‌ಎಸ್ ಗಣವೇಶವನ್ನು ಅಪಮಾನಿಸಿರುವುದು ಉದ್ಧಟತನದ ಪರಮಾವಧಿ ಎಂದು ಆಕ್ರೋಶ ಹೊರಹಾಕಿದ್ದರು.
ಅಧಿಕಾರ ಶಾಶ್ವತವಲ್ಲ, ಅದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರು ನೀಡುವ ಭಿಕ್ಷೆ ಎಂಬ ಪರಿಜ್ಞಾನವಿಲ್ಲದೆ ನಡೆದುಕೊಳ್ಳುತ್ತಿರುವ ಅವರ ವರ್ತನೆ ಅತ್ಯಂತ ಖಂಡನೀಯ. ಡಿಕೆ ಶಿವಕುಮಾರ್ ಅವರ ಈ ನಡೆಯು ಸರ್ವಾಧಿಕಾರಿತನವನ್ನು ಪ್ರತಿಬಿಂಬಿಸಿದೆ. ನಿಮ್ಮ ನಡೆ, ನುಡಿ, ವರ್ತನೆಯನ್ನು ಜನರು ಗಮನಿಸುತ್ತಿದ್ದಾರೆ, ತಕ್ಕ ಉತ್ತರದ ಪಾಠವನ್ನು ಇಷ್ಟರಲ್ಲೇ ನಿಮಗೆ ಕಲಿಸಲಿದ್ದಾರೆ ಎಂದು ಎಚ್ಚರಿಸಿದ್ದರು.












Click it and Unblock the Notifications