ಬಿಜೆಪಿ vs ಕಾಂಗ್ರೆಸ್: ಕ್ಯಾಕರಿಸಿ ಉಗಿದರೂ - ಛೀ.. ಥೂ ಎಂದು ಉಗಿಯುತ್ತಿದ್ದರೂ ಎಂದು ಬೈದಾಡಿಕೊಂಡ ಪಕ್ಷಗಳು!
ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲೇ ಹೆಚ್ಚಾಗಿ ರಸ್ತೆಗುಂಡಿ ಸಮಸ್ಯೆಯ ಬಗ್ಗೆ ಚರ್ಚೆ ಆಗುತ್ತಿದೆ. ಇದೀಗ ರಸ್ತೆಗುಂಡಿಯ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ವಾಕ್ಸಮರ ಮುಂದುವರಿದಿದೆ. ಬಿಜೆಪಿಯು ರಸ್ತೆ ಗುಂಡಿ ವಿಚಾರದಲ್ಲಿ ಹೈಕೋರ್ಟ್ ಕ್ಯಾಕರಿಸಿ ಉಗಿದರೂ ರಸ್ತೆ ಗುಂಡಿ ಮುಚ್ಚಿರಲಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
ರಸ್ತೆಗುಂಡಿ ವಿಚಾರಕ್ಕೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಬಿಜೆಪಿ vs ಕಾಂಗ್ರೆಸ್ ಪಕ್ಷಗಳ ನಡುವೆ ಟ್ವೀಟ್ ವಾರ್ ಮುಂದುವರಿದಿದೆ. ಬಿಜೆಪಿ ಕರ್ನಾಟಕ ತಮ್ಮ ಆಡಳಿತದಲ್ಲಿ ಎಷ್ಟು ಡೆಡ್ ಲೈನ್ ಮೀರಿತ್ತು ಎಂದು ಮರೆತಿದ್ದೀರಾ? ರಸ್ತೆ ಗುಂಡಿ ವಿಚಾರದಲ್ಲಿ ಹೈಕೋರ್ಟ್ ಕ್ಯಾಕರಿಸಿ ಉಗಿದರೂ ರಸ್ತೆ ಗುಂಡಿ ಮುಚ್ಚಿರಲಿಲ್ಲ. ನಿಮ್ಮ ದೂರಾಡಳಿತದಲ್ಲೇ ಅಲ್ಲವೇ ಬೆಂಗಳೂರಿಗೆ ಗ್ರಾಬೇಜ್ ಸಿಟಿ ಎಂಬ ಕಳಂಕ ಅಂಟಿಕೊಂಡಿದ್ದು. 40% ಕಮಿಷನ್‌ನಲ್ಲಿ ಮುಳುಗಿದ್ದ ನಿಮ್ಮ ಸರ್ಕಾರ ರಾಜ್ಯವನ್ನು ನಾಶ ಮಾಡಿದ್ದು ನೆನಪಿಲ್ಲವೇ ಎಂದು ಪ್ರಶ್ನೆ ಮಾಡಿದೆ.

ಬೆಂಗಳೂರು ಐಟಿ ರಫ್ತು ಹಾಗೂ ಇತರೆ ಉದ್ಯಮಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರತಿ ವರ್ಷ 4.50 ಲಕ್ಷ ಕೋಟಿ ತೆರಿಗೆ ಪಾವತಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕೊಟ್ಟಿರುವ ಯೋಜನೆ, ಅನುದಾನ ಏನು. ರಾಜ್ಯದಿಂದ ಅದರಲ್ಲೂ ಬೆಂಗಳೂರಿನಿಂದ ಆಯ್ಕೆಯಾಗಿರುವ ಸಂಸದರು ಏನು ಮಾಡುತ್ತಿದ್ದಾರೆ? ಇವರಿಗೆ ಬೆಂಗಳೂರಿನ ಅಭಿವೃದ್ಧಿಯ ಹೊಣೆಗಾರಿಕೆ ಇಲ್ಲವೇ ಎಂದು ಕಾಂಗ್ರೆಸ್ ಕೇಳಿದೆ.
ಅಂದಹಾಗೆ, ಕಾಂಗ್ರೆಸ್ ಸರ್ಕಾರ ದಿಟ್ಟ ಆಡಳಿತದಲ್ಲಿ ಈಗಾಗಲೇ 18 ಸಾವಿರ ರಸ್ತೆಗುಂಡಿ ಮುಚ್ಚಲಾಗಿದೆ. ಸಾವಿರಾರು ಕೋಟಿ ವೆಚ್ಚದಲ್ಲಿ ವೈಟ್ ಹಾಗೂ ಬ್ಲಾಕ್ ಟಾಪಿಂಗ್ ಕಾರ್ಯ ಭರದಿಂದ ಸಾಗುತ್ತಿದೆ. ಕಸದ ವಿಲೇವಾರಿಗೆ ಕರೆಯಲಾಗಿದ್ದ 33 ಪ್ಯಾಕೇಜ್ ಗೆ ನ್ಯಾಯಾಲಯದಲ್ಲಿ ಆಕ್ಷೇಪಣೆ ವಿಚಾರಣೆ ನಡೆಯುತ್ತಿದ್ದು, ಶೀಘ್ರದಲ್ಲೇ ಈ ಟೆಂಡರ್ ಜಾರಿಯಾಗಲಿದೆ. ಬ್ರಾಂಡ್ ಬೆಂಗಳೂರು ದಿನ ಬೆಳಗಾಗುವುದರಲ್ಲಿ ಆಗುವುದಲ್ಲ. ಇಂತಹ ಪರಿಕಲ್ಪನೆ ನಿಮ್ಮಂತಹವರ ತಲೆಗೆ ಬರುವುದೂ ಇಲ್ಲ.
ಡಿ.ಕೆ ಶಿವಕುಮಾರ್ ಅವರ ದೂರದೃಷ್ಟಿಯಿಂದ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ 117 ಕಿ.ಮೀ ಬೆಂಗಳೂರು ಬಿಸಿನೆಸ್ ಕಾರಿಡಾರ್, 44 ಕಿ.ಮೀ ಡಬಲ್ ಡೆಕ್ಕರ್, 300 ಕಿ.ಮೀ ಬಫರ್ ರಸ್ತೆ, 120 ಕಿ.ಮೀ ಉದ್ದದಷ್ಟು ಎಲಿವೆಟೆಡ್ ಕಾರಿಡಾರ್ ಯೋಜನೆ ಹಮ್ಮಿಕೊಂಡಿದೆ. ಇದರ ಜೊತೆಗೆ ನಿಮ್ಮ ಕೇಂದ್ರ ಸಚಿವ ನಿತೀನ್ ಗಡ್ಕರಿ ಬೆಂಬಲಿಸುವ ಟನಲ್ ರಸ್ತೆಗೆ ಮುಂದಾಗಿದ್ದಾರೆ. ಇದನ್ನು ಸಹಿಸಲಾಗದೆ ಅಡ್ಡಗಾಲು ಹಾಕುತ್ತಿರುವ ಬಿಜೆಪಿ ಬೆಂಗಳೂರಿನ ಬಗ್ಗೆ ಮಾತನಾಡುವ ನೈತಿಕತೆ ಹೊಂದಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಬಿಜೆಪಿ ಟ್ವೀಟ್
ಇನ್ನು ಕಾಂಗ್ರೆಸ್ ಸರ್ಕಾರವು ರಸ್ತೆಗುಂಡಿ ಮುಚ್ಚುವ ವಿಚಾರದಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಸರಣಿ ಟ್ವೀಟ್ ಮಾಡಿದೆ.
➡️ರಸ್ತೆ ಗುಂಡಿ ಮುಚ್ಚುವ ಡೆಡ್ ಲೈನ್ ಹಳ್ಳ ಹಿಡಿಯಿತು ಎಂದು ಬಿಜೆಪಿ ಟ್ವೀಟ್ ಮಾಡಿದೆ.
➡️ಬ್ರ್ಯಾಂಡ್ ಬೆಂಗಳೂರು ಭರವಸೆ ಹುಸಿಯಾಯಿತು
➡️ಗಾರ್ಡನ್ ಸಿಟಿ ಗಾರ್ಬೇಜ್ ಸಿಟಿಯಾಯಿತು
➡️ ರಸ್ತೆ ಗುಂಡಿಗಳಿಂದ ಐನೂರಕ್ಕೂ ಹೆಚ್ಚು ಜನರ ಪ್ರಾಣ ಹಾರಿ ಹೋಯಿತು.
➡️ಬೀದಿನಾಯಿ ಹಾವಳಿ, ಟ್ರಾಫಿಕ್ ಸಮಸ್ಯೆಯಿಂದ ಬೆಂಗಳೂರು ಘನತೆ ಮಣ್ಣು ಪಾಲಾಯಿತು
ಸಾರ್ವಜನಿಕರು, ವಾಹನ ಸವಾರರು ದಿನನಿತ್ಯವೂ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಛೀ.. ಥೂ ಎಂದು ಉಗಿಯುತ್ತಿದ್ದರೂ ಎಚ್ಚೆತ್ತಿಲ್ಲ.! ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಪವರ್ ಶೇರಿಂಗ್, ಬ್ರೇಕ್ ಫಾಸ್ಟ್ ಮೀಟಿಂಗ್ ಎಂಬ ಸ್ವಾರ್ಥ ಸಾಧನೆಯಲ್ಲೇ ಮುಳುಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಬಿಜೆಪಿ ಹೇಳಿದೆ.












Click it and Unblock the Notifications