ಶಕ್ತಿ-ನಿಶ್ಯಕ್ತಿ; ಕಾಂಗ್ರೆಸ್ ಕನ್ನಡಿಗರ ಕಿವಿ ಮೇಲೆ ಹೂವಿಟ್ಟಿದೆ!
ಬೆಂಗಳೂರು, ನವೆಂಬರ್ 21: ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು 5 ಗ್ಯಾರಂಟಿ ಯೋಜನೆಗಳು. ಇವುಗಳಲ್ಲಿ ಈಗಾಗಲೇ ಸರ್ಕಾರ 4 ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಪಕ್ಷದವರ ಪ್ರಕಾರ ಇದು ನುಡಿದಂತೆ ನಡೆದ ಸರ್ಕಾರ.
ಆದರೆ ಕರ್ನಾಟಕದ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ 5 ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸುತ್ತಿವೆ. ಹಣ ಹೊಂದಿಸಲು ಆಗದೇ ಗ್ಯಾರಂಟಿ ಕೇವಲ ಕಾಗದದಲ್ಲಿ ಉಳಿಯಲಿದೆ ಎಂದು ಹೇಳಿವೆ.

ಮಂಗಳವಾರ ಟ್ವೀಟ್ ಮಾಡಿರುವ ಬಿಜೆಪಿ 5 ಗ್ಯಾರಂಟಿ ಯೋಜನೆಗಳನ್ನು ಉಲ್ಲೇಖ ಮಾಡಿದೆ. ಅಲ್ಲದೇ 'ಕರ್ನಾಟಕ ಕಾಂಗ್ರೆಸ್ ಕನ್ನಡಿಗರ ಕಿವಿ ಮೇಲೆ ಹೂವಿಟ್ಟಿದೆ..!' ಎಂದು ಆರೋಪ ಮಾಡಿದೆ.
ಬಿಜೆಪಿಯ ಟ್ವೀಟ್
'ಆರು ತಿಂಗಳಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದ ಅವೈಜ್ಞಾನಿಕ ಗ್ಯಾರಂಟಿಗಳ ಅನುಷ್ಠಾನ. @INCKarnataka ಕನ್ನಡಿಗರ ಕಿವಿ ಮೇಲೆ ಹೂವಿಟ್ಟಿದೆ..!' ಎಂದು ಬಿಜೆಪಿ ಹೇಳಿದೆ.
* ಶಕ್ತಿ - ನಿಶ್ಯಕ್ತಿ
ನಿಗಮಗಳ ಬಳಿ ಇಲ್ಲ ಸಂಪನ್ಮೂಲ
ಸರ್ಕಾರ ಕೊಡುತ್ತಿಲ್ಲ ಅನುದಾನ
* ಗೃಹ ಜ್ಯೋತಿ
ಪ್ರತಿ ಮನೆಗಳಲ್ಲೂ ತುಂಬಿತು ಕಗ್ಗತ್ತಲು
ಕೈಗಾರಿಕೆಗಳಿಗೂ ವಿದ್ಯುತ್ ಇಲ್ಲ ರೈತರಿಗೂ ಇಲ್ಲ
* ಯುವನಿಧಿ
ಜಾರಿಗೆ ಬರಲೇ ಇಲ್ಲ ಬರುವುದೂ ಇಲ್ಲ
ಉದ್ಯೋಗವೂ ಇಲ್ಲ, ನಿಧಿಯೂ ಇಲ್ಲ
* ಅನ್ನಭಾಗ್ಯ - ಕನ್ನಭಾಗ್ಯ
ಮೋದಿ ಸರ್ಕಾರದ ಅಕ್ಕಿಗೂ ಕನ್ನ
ಜನರ ಖಾತಗೆ ಹಾಕುವ ಹಣಕ್ಕೂ ಕನ್ನ
* ಗೃಹ ಲಕ್ಷ್ಮಿ
ಬೀದಿಗೆ ಬಂದು ನಿಂತ ಸ್ವಾಭಿಮಾನಿ ಮಹಿಳೆಯರು
ಎಟಿಎಂ ಸರ್ಕಾರ ಹಾಕಲೇ ಇಲ್ಲ ಎರಡನೇ ತಿಂಗಳ ಹಣ
ಸೋಮವಾರದಿಂದ ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ 5 ಗ್ಯಾರಂಟಿ ಯೋಜನೆಗಳ ಕುರಿತು ಸರಣಿ ಟ್ವೀಟ್ ಮಾಡುತ್ತಿವೆ. ಸಿದ್ದರಾಮಯ್ಯ ಟ್ವೀಟ್‌ನಲ್ಲಿ, 'ಕಳೆದ 6 ತಿಂಗಳ ಅವಧಿಯಲ್ಲಿ ನಾಡಿನ ಜನತೆಗೆ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಗ್ಯಾರಂಟಿ ಯೋಜನೆಗಳು ಸೇರಿದಂತೆ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳ ಜಾರಿ ಮತ್ತು ಸಮಾಜದ ಶಾಂತಿ-ಸಾಮರಸ್ಯದ ರಕ್ಷಣೆಯು ನಮ್ಮ ಸರ್ಕಾರದ ಪ್ರಮುಖ ಗುರಿಯಾಗಿದೆ. ನಮ್ಮ ಈ 6 ತಿಂಗಳ ಆಡಳಿತದ ಬಗ್ಗೆ ಜನರಿಂದ ವ್ಯಕ್ತವಾದ ಅಭಿಪ್ರಾಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಸಾಧಿಸಿದ್ದು ಹಲವು, ಸಾಗಬೇಕಾದ ಹಾದಿ ಬಹುದೂರ ಇದೆ. ಕರ್ನಾಟಕ ಅಭಿವೃದ್ಧಿ ಮಾದರಿಯ ಈ ಪಯಣದಲ್ಲಿ ಜೊತೆಯಾಗಿ ಸಾಗೋಣ, ನಾಡನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸೋಣ' ಎಂದು ಹೇಳಿದ್ದಾರೆ.
ಬಿಜೆಪಿ ಒಂದು ಟ್ವೀಟ್‌ನಲ್ಲಿ, 'ನಾವು ಬಿಜೆಪಿಗಿಂತಲೂ ಉತ್ತಮ ಆಡಳಿತ ನೀಡುತ್ತೇವೆ ಎನ್ನುವ ಧೈರ್ಯ ಸ್ವತಃ ಕಾಂಗ್ರೆಸ್ಸಿಗರಿಗೇ ಇಲ್ಲ. ಹಾಗಾಗಿ ಬಿಜೆಪಿಗೆ ಮತ ನೀಡಿದರೆ ಗ್ಯಾರಂಟಿಗಳು ರದ್ದಾಗುತ್ತವೆ ಎಂದು ಡಿ. ಕೆ. ಶಿವಕುಮಾರ್ ಅವರ ಮತದಾರರ ಬ್ಲ್ಯಾಕ್‌ಮೇಲ್ ಮಾಡುವ ಕುತಂತ್ರಕ್ಕೆ ಕೈ ಹಾಕಿದ್ದಾರೆ. ತಾನೇ ಘೋಷಿಸಿದ ಗ್ಯಾರಂಟಿಗಳನ್ನು ಪರಿಪೂರ್ಣವಾಗಿ ಜಾರಿ ಮಾಡುವುದಕ್ಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಆರು ತಿಂಗಳು ಕಳೆದರೂ ಸಾಧ್ಯವಾಗಿಲ್ಲ. ಹೀಗಿರುವಾಗ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿದರೆ ಗ್ಯಾರಂಟಿಗಳು ರದ್ದಾಗಲಿವೆ ಎಂಬ ಡಿ. ಕೆ. ಶಿವಕುಮಾರ್ ಅವರ ಹೇಳಿಕೆ ಬೌದ್ಧಿಕ ದಾರಿದ್ರ್ಯ ಮತ್ತು ಅಸಾಮರ್ಥ್ಯದ ಲಕ್ಷಣ' ಎಂದು ಟೀಕೆ ಮಾಡಿದೆ.
ಇನ್ನು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಹ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡಿದ್ದಾರೆ. "ಗ್ಯಾರಂಟಿಗಳು ಹಳ್ಳ ಹಿಡಿದು ವಿಫಲವಾಗಿವೆ. ಅನುಮಾನವೇ ಇಲ್ಲ. ಯಾವ ಗ್ಯಾರಂಟಿಯೂ ಸಮರ್ಪಕ ಜಾರಿ ಆಗಿಲ್ಲ. ಎಷ್ಟು ಜನರಿಗೆ ಫಲ ಸಿಕ್ಕಿದೆ? ಆರ್ಥಿಕವಾಗಿ ಹೊರೆ ಎಷ್ಟು ಬಿದ್ದಿದೆ? ಹೊರಡಿಸಿ ಶ್ವೇತಪತ್ರವನ್ನು. ಬನ್ನಿ ಚರ್ಚೆಗೆ, ನಾನು ತಯಾರಿದ್ದೇನೆ. ಅಧಿವೇಶನದಲ್ಲೂ ದಾಖಲೆ ಸಮೇತ ಚರ್ಚೆಗೆ ಸಿದ್ಧನಿದ್ದೇನೆ, ಉತ್ತರಿಸಿ. ಚನ್ನಪಟ್ಟಣದ ನನ್ನ ಜನರೂ ಮಾಹಿತಿ ನೀಡಿದ್ದಾರೆ, ರಾಜ್ಯದ ಉಳಿದ 223 ಕ್ಷೇತ್ರಗಳ ಜನರು ಕೊಟ್ಟ ವಿವರವೂ ನನ್ನಲ್ಲಿದೆ. ನೀವು ಒಳಗೊಳಗೆ ಮಾಡುತ್ತಿರುವ ಗಿಲೀಟುಗಳ ಮಾಹಿತಿಯೂ ಇದೆ. ಚರ್ಚೆ ಮಾಡೋಣಂತೆ" ಎಂದು ಆಹ್ವಾನ ನೀಡಿದ್ದಾರೆ.












Click it and Unblock the Notifications