ಬಳ್ಳಾರಿಯಿಂದ ಗಾಲಿ ಸೋಮಶೇಖರ್ ರೆಡ್ಡಿಗೆ ಬಿಜೆಪಿ ಟಿಕೆಟ್- ಎದುರಾಗುವ ಸವಾಲುಗಳೇನು?
ಬಳ್ಳಾರಿ ನಗರ ಕ್ಷೇತ್ರದಿಂದ ನನ್ನ ಸ್ಪರ್ಧೆ ನೂರಕ್ಕೆ ನೂರರಷ್ಟು ಖಚಿತ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಬಿಜೆಪಿಯಿಂದ ಟಿಕೆಟ್ ಸಿಗದಿದ್ರೆ ಪಕ್ಷೇತರವಾಗಿ ಸ್ಪರ್ಧಿಸುವೆ ಪಕ್ಷೇತರವಾಗಿ ಗೆದ್ದ ನಂತರ ಮತ್ತೆ ಬಿಜೆಪಿ ಸೇರುತ್ತೇನೆ ಎಂದಿದ್ದ ಗಾಲಿ ಸೋಮಶೇಖರ್ ರೆಡ್ಡಿಗೆ ಬಿಜೆಪಿ ಟಿಕೆಟ್ ನೀಡಿದೆ.
ಬಳ್ಳಾರಿ ನಗರದಿಂದ ಸ್ಪರ್ಧಿಸಲು ಗಾಲಿ ಸೋಮಶೇಖರ್ ರೆಡ್ಡಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಇವರು ಸಹೋದರ ಗಾಲಿ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ವಿರುದ್ಧ ಹೋರಾಟ ನಡೆಸಬೇಕಿದೆ.

'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ' ಎಂಬ ಹೊಸ ರಾಜಕೀಯ ಪಕ್ಷವನ್ನು ಘೋಷಿಸಿದ ಒಂದು ತಿಂಗಳ ನಂತರ, ಮಾಜಿ ಸಚಿವ ಮತ್ತು ಗಣಿ ಉದ್ಯಮಿ ಜಿ ಜನಾರ್ದನ ರೆಡ್ಡಿ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ತಮ್ಮ ಪತ್ನಿ ಅರುಣಾ ಲಕ್ಷ್ಮಿ ಅವರು ಸ್ಪರ್ಧಿಸಲಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. ಇವರ ವಿರುದ್ಧ ಸ್ಪರ್ಧಿಸಿ ಬಹುಮತ ಪಡೆಯುವುದು ಗಾಲಿ ಸೋಮಶೇಖರ್ ರೆಡ್ಡಿಗೆ ಬಹುದೊಡ್ಡ ಸವಾಲಾಗಿದೆ. ಜೊತೆಗೆ ಇದು ಪ್ರತಿಷ್ಟೆಯ ಪ್ರಶ್ನೆಯೂ ಆಗಿದೆ.
ರೆಡ್ಡಿ ಸಹೋದರರಾದ ಜಿ ಕರುಣಾಕರ ರೆಡ್ಡಿ ಮತ್ತು ಜಿ ಸೋಮಶೇಖರ್ ರೆಡ್ಡಿ ಅವರು ಹರಪನಹಳ್ಳಿ ಮತ್ತು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದು, ಅವರ ಆಪ್ತ ಶ್ರೀರಾಮುಲು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನ ಬಿಜೆಪಿ ಶಾಸಕರು ಮತ್ತು ಸಚಿವರೂ ಆಗಿದ್ದಾರೆ. ಜಿ ಸೋಮಶೇಖರ್ ರೆಡ್ಡಿ ಬಿಜೆಪಿ ಜೊತೆಗಿದ್ದು, ಜನಾರ್ದನ ರೆಡ್ಡಿ ಅವರ ಹೊಸ ಪಕ್ಷಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ರೆಡ್ಡಿ ಡಿಸೆಂಬರ್ 25 ರಂದು 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ' ಎಂಬ ಹೊಸ ಪಕ್ಷವನ್ನು ಘೋಷಿಸಿದ್ದರು. ಇದರೊಂದಿಗೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಅವರು, ಆಡಳಿತಾರೂಢ ಬಿಜೆಪಿಯೊಂದಿಗಿನ ಎರಡು ದಶಕಗಳ ಹಿಂದಿನ ಒಡನಾಟವನ್ನು ಕಡಿತಗೊಳಿಸಿದ್ದರು.

ಬಹುಕೋಟಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಅವರು 2015 ರಿಂದ ಜಾಮೀನಿನ ಮೇಲೆ ಹೊರಗಿದ್ದಾರೆ. ಕರ್ನಾಟಕದ ಬಳ್ಳಾರಿ ಮತ್ತು ಆಂಧ್ರಪ್ರದೇಶದ ಅನಂತಪುರ ಮತ್ತು ಕಡಪಕ್ಕೆ ಭೇಟಿ ನೀಡುವುದನ್ನು ನಿಷೇಧಿಸುವುದು ಸೇರಿದಂತೆ ಹಲವು ಷರತ್ತುಗಳನ್ನು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ವಿಧಿಸಿದೆ. ಇದೇ ಕಾರಣಕ್ಕೆ ಸ್ವತಃ ರೆಡ್ಡಿ ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಸ್ಪರ್ಧಿಸುತ್ತಿದ್ದು, ತವರು ಜಿಲ್ಲೆ ಬಳ್ಳಾರಿಯಿಂದ ಪತ್ನಿಯನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಆರಂಭದಲ್ಲಿ ಹೊಸ ಪಕ್ಷ ಕಟ್ಟುವ ಮುನ್ನ ಸೋಮಶೇಖರ್ ರೆಡ್ಡಿಗೆ ಜನಾರ್ದನ ರೆಡ್ಡಿ ಆಹ್ವಾನಿಸಿದ್ದರಂತೆ. ಆದರೆ ಸೋಮಶೇಖರ್ ರೆಡ್ಡಿ ಇದಕ್ಕೆ ನಿರಾಕರಿಸಿದ್ದರು. ನಾನು ಪಕ್ಷಕ್ಕೆ ಸೇರಿಲ್ಲ ಅಂತಾ ಹೇಳಿದ್ದಕ್ಕೆ ಸಿಟ್ಟಿನಿಂದ ನನ್ನ ವಿರುದ್ದ ಲಕ್ಷ್ಮಿ ಅರುಣಾ ಸ್ಪರ್ಧೆಗೆ ಘೋಷಣೆ ಮಾಡಿದ್ದಾರೆ. ಜನಾರ್ದನ ರೆಡ್ಡಿಗೆ ಪಕ್ಷ ಕಟ್ಟುವುದು ಬೇಡ ಎಂದು ನಾನು ಶ್ರೀರಾಮುಲು, ಕರುಣಾಕರರೆಡ್ಡಿ ಸಲಹೆ ನೀಡಿದರೂ ಅದನ್ನು ಮೀರಿ ಹೊಸ ಪಕ್ಷ ಕಟ್ಟಿದ್ದಾರೆ.
ಕೆಲವರು ಹಣಕ್ಕಾಗಿ ಅವರ ಪಕ್ಷದ ಕಡೆ ಹೋಗುತ್ತಿದ್ದಾರೆ. ಆದರೆ ನಿಷ್ಠಾವಂತ ಕಾರ್ಯಕರ್ತರು ನನ್ನ ಜೊತೆ ಇದ್ದಾರೆ ಸ್ಪರ್ಧೆಯಿಂದ ಹಿಂದೆ ಸರಿಯುವುದು ನನ್ನ ಜಾಯಮಾನದಲ್ಲೇ ಇಲ್ಲ. ಲಕ್ಷ್ಮೀ ಅರುಣಾ ಸ್ಪರ್ಧೆ ಮಾಡೋದು ಒಳ್ಳೆಯದು, ಸೊಸೆ ಬಾವ ಮಧ್ಯೆ ಸ್ಪರ್ಧೆ ರಸವತ್ತಾಗಿ ಇರುತ್ತೆ ಎಂದು ಸೋಮಶೇಖರ್ ರೆಡ್ಡಿ ಹಿಂದೆ ಹೇಳಿದ್ದರು.
'ತಮ್ಮ ಜನಾರ್ಧನರೆಡ್ಡಿ ಜೈಲಲ್ಲಿದ್ದಾಗ ಅವನಿಗಾಗಿ 2018ರಲ್ಲಿ ಚುನಾವಣೆಗೆ ನಿಲ್ಲಲಿಲ್ಲ. ತಮ್ಮನಿಗಾಗಿ 63ದಿನಗಳು ಜೈಲಿಗೆ ಹೋಗಿ ಬಂದೆ, ಆಗ ನನ್ನ ಸೊಸೆ ಲಕ್ಷ್ಮೀ ಅರುಣಾ ಬಾವ ನಿಮ್ಮ ಋಣ ತೀರಿಸಿಕೊಳ್ಳಲು ಸಾಧ್ಯವಿಲ್ಲ ಅಂತಾ ಹೇಳಿದ್ರು, ಮಗಳು ಕೂಡ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ ದೊಡ್ಡಪ್ಪ ಎಂದಿದ್ದರು ಎಂದು ಸೋಮಶೇಖರರೆಡ್ಡಿ ಹಳೆ ಸಂದರ್ಭಗಳನ್ನ ನೆನೆದರು' ಬಿಜೆಪಿ ಟಿಕೆಟ್ ಘೋಷಣೆಗೂ ಮುನ್ನ ಸುದ್ದಿಗಾರರ ಮುಂದೆ ಹೇಳಿಕೊಂಡಿದ್ದರು.
ಸೋಮಶೇಖರ್ ರೆಡ್ಡಿಗೆ ಟಿಕೆಟ್: ಅಸಮಧಾನ
ಬಳ್ಳಾರಿ ನಗರ ಕ್ಷೇತ್ರಕ್ಕೆ ಹಾಲಿ ಶಾಸಕ ಜಿ.ಸೋಮಶೇಖರರೆಡ್ಡಿಯವರಿಗೆ ಟಿಕೆಟ್ ನೀಡಿದ್ದು ಬಿಜೆಪಿಗೆ ಸಂಕಷ್ಟ ಎದುರಾಗಲಿದೆ ಎನ್ನಲಾಗುತ್ತಿದೆ. ಇದು ಬುಡಾ ಮಾಜಿ ಅಧ್ಯಕ್ಷ, ಕೋರ್ ಕಮಿಟಿ ಸದಸ್ಯ ಕೆ.ಎ. ರಾಮಲಿಂಗಪ್ಪ ಅಸಮಧಾನಕ್ಕೆ ಕಾರಣವಾಗಿದೆ. ಬಿಜೆಪಿ ಪಕ್ಷದಿಂದ ಮಾಜಿ ಸಚಿವ ಜಿ. ಜನಾರ್ಧನ ರೆಡ್ಡಿ, ಸಹೋದರರಾದ ಶಾಸಕರಾದ ಜಿ.ಸೋಮಶೇಖರ ರೆಡ್ಡಿ, ಕರುಣಾಕರ ರೆಡ್ಡಿ ಸೇರಿ ಇಡೀ ಕುಟುಂಬ ಅಧಿಕಾರ ಅನುಭವಿಸಿದೆ. ಆದರೂ, ಜನಾರ್ಧನ ರೆಡ್ಡಿಯವರು ಈಚೆಗೆ ನಾನು ಬೆಳಸಿದವರೇ ನನಗೆ ಕಿರುಕುಳ ನೀಡುತ್ತಿದ್ದಾರೆ, ಅನ್ಯಾಯವಾಗಿದೆ ಎಂದು ಪಕ್ಷದ ವಿರುದ್ಧವೇ ಹೇಳಿಕೆ ನೀಡಿದ್ದಾರೆ.
ವಾಸ್ತವವಾಗಿ ಕುರುಬ, ಲಿಂಗಾಯತ ಸಮುದಾಯಕ್ಕೆ ಅನ್ಯಾಯವಾಗಿದೆ. ಹಾಗಾಗಿ ಚುನಾವಣೆಯಲ್ಲಿ ಸೋಮಶೇಖರ್ ರೆಡ್ಡಿಯವರಿಗೆ ಟಿಕೆಟ್ ನೀಡಿದರೆ ಗೆಲ್ಲುವ ಪಕ್ಷಕ್ಕೆ ಕಷ್ಟವಾಗಲಿದೆ. ಹಾಗಾಗಿ ಗೆಲ್ಕುವ ಸಮುದಾಯಗಳಿಗೆ ಟಿಕೆಟ್ ನೀಡಬೇಕು ಎಂದು ಅವರು ಹೇಳಿದ್ದರು.
ಆದರೂ ಬಿಜೆಪಿ ಸೋಮಶೇಖರ್ ರೆಡ್ಡಿಗೆ ಸದ್ಯ ಟಿಕೆಟ್ ನೀಡಿದ್ದು ಗೆಲುವಿಗೆ ಇದು ದೊಡ್ಡ ಸವಾಲಾಗುವುದರಲ್ಲಿ ಅನುಮಾನವೇ ಇಲ್ಲ.












Click it and Unblock the Notifications