ಕೋಟಿ ಹೃದಯಗಳ ಪ್ರಾರ್ಥನೆ ನ್ಯಾಯ ದೇಗುಲದಲ್ಲಿ ಅನಾವರಣಗೊಂಡಿದೆ-ವಿಜಯೇಂದ್ರ
ಬೆಂಗಳೂರು, ಜೂನ್ 04: ಪೋಕ್ಸೋ ಕೇಸ್ನಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪಗೆ ಸದ್ಯ ರಿಲೀಫ್ ಸಿಕ್ಕಿದೆ. ಮುಂದಿನ ವಿಚಾರಣೆ ತನಕ ಅರೆಸ್ಟ್ ಮಾಡುವಂತಿಲ್ಲ. ಬಲವಂತದ ಕ್ರಮ ತೆಗೆದುಕೊಳ್ಳದಂತೆ ಕೋರ್ಟ್ ಮಹತ್ವದ ಆದೇಶ ನೀಡಿದೆ. ಬಿ.ಎಸ್ ಯಡಿಯೂರಪ್ಪ ವಿರುದ್ಧ ಅರೆಸ್ಟ್ ವಾರಂಟ್ ಜಾರಿಯಾದ ಹಿನ್ನೆಲೆಯಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ಪೀಠದಲ್ಲಿ ಯಡಿಯೂರಪ್ಪ ಜಾಮೀನು ವಿಚಾರಣೆ ನಡೆದಿದೆ.
ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಸಿದ್ದು, ನ್ಯಾಯ ದೇಗುಲದಲ್ಲಿ ಸತ್ಯವೇ ಗೆಲ್ಲುತ್ತದೆಂಬ ಅಚಲ ವಿಶ್ವಾಸವಿದೆ ಎಂದಿದ್ದಾರೆ. ಯಡಿಯೂರಪ್ಪ ಅವರ ಮೇಲಿನ ಕರುನಾಡ ಜನರ ಆಶೀರ್ವಾದ, ಕೋಟಿ ಹೃದಯಗಳ ಪ್ರಾರ್ಥನೆ ನ್ಯಾಯ ದೇಗುಲದಲ್ಲಿ ಅನಾವರಣಗೊಂಡಿದೆ. ಷಡ್ಯಂತ್ರ, ಪಿತೂರಿ ರಾಜಕಾರಣ ಮಾನ್ಯ ಬಿ.ಎಸ್.ಯಡಿಯೂರಪ್ಪ ಅವರ ಹಿಂಬಾಲಿಸಿಕೊಂಡು ಬರುತ್ತಲೇ ಇದೆ, ಎದೆಗುಂದದ ಅವರು ನ್ಯಾಯದ ಹಾದಿಯಲ್ಲಿ ಷಡ್ಯಂತ್ರಗಳನ್ನು ಜಯಿಸಿದ್ದಾರೆ.

ಉಚ್ಚ ನ್ಯಾಯಾಲಯದಲ್ಲಿ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ಘನ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿ ಯಡಿಯೂರಪ್ಪನವರು ವಿಚಾರಣೆಗಳಿಗೆ ಬೆನ್ನು ತೋರಿಸುವ ಜಾಯಮಾನದವರಲ್ಲ ಎನ್ನುವ ಮಾತನ್ನು ಉಲ್ಲೇಖಿಸಿರುವುದು ಬಿ.ಎಸ್ ಯಡಿಯೂರಪ್ಪನವರು ಈ ನೆಲದ ಕಾನೂನಿಗೆ ಗೌರವ ಕೊಡುವ ಪರಿಯನ್ನು ಸಾಕ್ಷೀಕರಿಸಿದೆ. ಮುಂದಿನ ದಿನಗಳಲ್ಲಿ ನ್ಯಾಯ ದೇಗುಲದಲ್ಲಿ ಸತ್ಯವೇ ಗೆಲ್ಲುತ್ತದೆಂಬ ಅಚಲ ವಿಶ್ವಾಸ ನಮ್ಮದಾಗಿದೆ ಎಂದಿದ್ದಾರೆ.
ನಮ್ಮ ತಂದೆ ವಿರುದ್ಧ ರಾಜಕೀಯ ಷಡ್ಯಂತ್ರ- ಬಿ.ವೈ ರಾಘವೇಂದ್ರ
ಈ ಬಗ್ಗೆ ಶಿವಮೊಗ್ಗದ ನೂತನ ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ನಮ್ಮ ತಂದೆ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿದೆ ಎಂದಿದ್ದಾರೆ. ದೂರು ನೀಡಿರುವ ಮಹಿಳೆ 50 ಅಧಿಕಾರಿಗಳ ಮೇಲೆ ಇದೇ ರೀತಿ ದೂರು ನೀಡಿದ್ದಾರೆ. ಗೃಹ ಸಚಿವರೇ ಮಾನಸಿಕವಾಗಿ ತೊಂದ್ರೆಯಲ್ಲಿ ಇರುವಂತಹ ಹೆಣ್ಣು ಮಗಳು ಎಂಬ ಅರ್ಥದಲ್ಲಿ ಹೇಳಿದ್ದರು. ನಾವು ಹಾಗೇ ಎಂದುಕೊಂಡಿದ್ದೆವು. ಆದರೆ, ಚುನಾವಣೆ ನಂತರ ಹೀಗೆ ಆಗಿದೆ. ಈ ಹಿಂದೆ ಸುಳ್ಳು ಭ್ರಷ್ಟಾಚಾರದ ಆರೋಪ ಮಾಡಿ, ಅಧಿಕಾರದಿಂದ ಕೆಳಗೆ ಇಳಿಯುವಂತೆ ಮಾಡಿದರು. ಇಂದು ಸಹ ವೈಯಕ್ತಿಕವಾದ ಘಟನೆ ಆಗಿದೆ ಎಂದು ಪ್ರತಿಬಿಂಬಿಸುವ ಪ್ರಯತ್ನ ಮಾಡಲಾಗಿದೆ. ನನಗೆ ನ್ಯಾಯಾಲಯದ ಮೇಲೆ ವಿಶ್ವಾಸವಿದೆ ಎಂದಿದ್ದರು.












Click it and Unblock the Notifications