70th Kannada Rajyotsava: ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಉತ್ತರ-ದಕ್ಷಿಣ ತಾರತಮ್ಯ ನೀತಿ: ಬಿಜೆಪಿ
ಬೆಂಗಳೂರು, ನವೆಂಬರ್ 01: ಈ ಬಾರಿಯು 70ನೇ ಕನ್ನಡ ರಾಜ್ಯೋತ್ಸವದಲ್ಲಿ (70th Kannada Rajyotsava) ಪ್ರಶಸ್ತಿ ಆಯ್ಕೆ ವಿಚಾರದಲ್ಲಿ ರಾಜ್ಯ ಸರ್ಕಾದ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಉತ್ತರ ಕರ್ನಾಟಕದ ಸಾಧಕರನ್ನು ನಿರ್ಲಕ್ಷಿಸಿದ್ದು, ಮೈಸೂರಿಗೆ ಭರಪೂರ ಒದಗಿಸಲಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಈ ಬಗ್ಗೆ ಬಿಜೆಪಿ ಕರ್ನಾಟಕ ಎಕ್ಸ್ ಪೋಸ್ಟ್ ಮೂಲಕ ಸರ್ಕಾರದ ವಿರುದ್ಧ ಕೆಂಡ ಕಾರಿದೆ.
ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಧಾರವಾಡಕ್ಕೆ ಶೂನ್ಯ ನೀಡಿರುವ ಸರ್ಕಾರ ತಾರತಮ್ಯ ನೀತಿ ಅನುಸರಿಸಿದೆ ಎಂದು ಬಿಜೆಪಿ ಮುಖಂಡ ಪಿಎಚ್ ನೀಲಕೇರಿ ದೂರಿದ್ದಾರೆ. ಸರ್ಕಾರ ಪ್ರಶಸ್ತಿ ಆಯ್ಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಂಡಿಲ್ಲ. ಕೆಲವು ಜಿಲ್ಲೆಗಳಿಗೆ ಮಾತ್ರವೇ ಆದ್ಯತೆ ನೀಡಿದೆ ಎಂದು ಆರೋಪಿಸಿದರು. ಇದರ ಬೆನ್ನಲ್ಲೆ ಬಿಜೆಪಿ ಪಕ್ಷ ಭಾನುವಾರ ತಾರತಮ್ಯ ಕುರಿತು ಕಿರಿ ಕಾರಿದೆ.

ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡುವಲ್ಲಿ ಉತ್ತರ ಕರ್ನಾಟಕ ಭಾಗವನ್ನು ನಿರ್ಲಕ್ಷಿಸಲಾಗಿದೆ ಎಂಬ ಗಂಭೀರವಾದ ಅಪವಾದ ಕೇಳಿ ಬರುತ್ತಿದೆ. ಆ ಭಾಗದಲ್ಲೂ ಅನೇಕ ಅರ್ಹರಿದ್ದರೂ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡದೆ ರಾಜ್ಯ ಸರ್ಕಾರ ತಾರತಮ್ಯ ಮಾಡಿದೆ. ಪ್ರಶಸ್ತಿ ಆಯ್ಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತರಿಗೆ, ತಮ್ಮ ಆಸ್ಥಾನದ ಕೆಲ ಬುದ್ಧಿಜೀವಿಗಳಿಗೂ ಆದ್ಯತೆ ನೀಡಿದೆ. ಸಹ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಇದರಿಂದಾಗಿ ಉತ್ತರ ಕರ್ನಾಟಕ ಭಾಗದ ಸಾಧಕರನ್ನು ಗುರುತಿಸುವ ಅವಕಾಶವನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ ಎಂದು ಬಿಜೆಪಿ ದೂರಿದೆ.
ಸರ್ಕಾರವು ಪ್ರಶಸ್ತಿ ವಿತರಣೆಯಲ್ಲಿ ಓಲೈಕೆ ರಾಜಕಾರಣ, ಪ್ರಾದೇಶಿಕ ಅಸಮಾನತೆಯನ್ನು ತೊಡೆದು ಹಾಕಬೇಕು. ಪ್ರಧಾನಿ ನರೇಂದ್ರ ಮೋದಿಯವರು ಅವರ ನೇತೃತ್ವದ ಕೇಂದ್ರ ಸರ್ಕಾರದಂತೆ ಎಲೆಮರೆಯ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಆಗ್ರಹಿಸುತ್ತೇವೆ ಎಂದು ಬಿಜೆಪಿ ನಾಯಕರು ಪರೋಕ್ಷವಾಗಿ ತಿಳಿಸಿದ್ದಾರೆ.
ಸರ್ಕಾರದಿಂದ ಸ್ಪಷ್ಟನೆಗೆ ಆಗ್ರಹ
ಮುಖಂಡ ಪಿಎಚ್ ನೀಲಕೇರಿ ಅವರು, ಜಿಲ್ಲಾವಾರು ತಾರತಮ್ಯ ಮಾಡಿದ್ದಕ್ಕಾಗಿ ಸ್ಪಷ್ಟನೆ ನೀಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರಮಾಣಿಕರಿಗೆ ಅನ್ಯಾಯ ಮಾಡಿದ್ದಾರೆ. ತಮ್ಮ ಆಪ್ತರಿಗೆ, ಬೇಕಾದವರಿಗೆ ಪ್ರಶಸ್ತಿ ಘೋಷಿಸಿದ್ದಾರೆ. ಧಾರವಾಡದಲ್ಲಿ ಸಾಹಿತ್ಯ, ಸಂಗೀತ, ಇತರ ಸಾಮಾಜಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿಲ್ಲ ಎಂದು ಹೇಳಿದ್ದಾರೆ. ಗದಗ ಜಿಲ್ಲೆಗೂ ಪ್ರಶಸ್ತಿ ಸಿಕ್ಕಿಲ್ಲ. ಇದೇ ರೀತಿ ಕೆಲವು ಜಿಲ್ಲೆಗಳಿಗೆ ಆಗಿದೆ. ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆ ಹಲವು ಗೊಂದಗಳಿಂದ ಕೂಡಿದೆ ಎಂದು ಅವರು ದೂರಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅಥವಾ ಡಿಸಿಎಂ ಡಿಕೆ ಶಿವಕುಮಾರ್ ಅವರಾಗಲಿ ಸ್ಪಷ್ಟನೆ ನೀಡುತ್ತಾರಾ? ಎಂದು ಕಾದು ನೋಡಬೇಕಿದೆ.












Click it and Unblock the Notifications