ಕಾಂಗ್ರೆಸ್ ಬಗ್ಗುಬಡಿಯಲು ಬಿಜೆಪಿ, RSS ರಣತಂತ್ರ
ಬೆಂಗಳೂರು, ಜ 14: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಬಗ್ಗುಬಡಿಯಲು ರಣತಂತ್ರ ರೂಪಿಸುವ ಸಲುವಾಗಿ ಬಿಜೆಪಿ ಮತ್ತು ಆರ್ಎಸ್ಎಸ್ ಮುಖಂಡರು ಸೋಮವಾರ (ಜ13) ಇಡೀ ದಿನ ಮ್ಯಾರಥಾನ್ ಚರ್ಚೆ ನಡೆಸಿದ್ದಾರೆ.
ಸೋಮವಾರ ಬೆಳಗ್ಗೆ ಬಿಜೆಪಿ ಮುಖಂಡರು ಚಾಮರಾಜಪೇಟೆಯಲ್ಲಿರುವ ಕೇಶವಕೃಪಾದಲ್ಲಿ ಸಭೆ ಸೇರಿ ಒಂದು ರೌಂಡ್ ಮಾತುಕತೆ ನಡೆಸಿದರು. ನಂತರ ಸಭೆಯನ್ನು ಅಲ್ಲಿಂದ ಕನಕಪುರ ರಸ್ತೆಯಲ್ಲಿರುವ ಮುತ್ತುರಾಯನ ಬೆಟ್ಟದ ಸಮೀಪದ ಫಾರಂಹೌಸಿಗೆ ಶಿಫ್ಟ್ ಮಾಡಲಾಯಿತು. ಅಲ್ಲಿ ಸತತ ಏಳು ಗಂಟೆಗೂ ಹೆಚ್ಚು ಕಾಲ ಬಿಜೆಪಿ ಮತ್ತು ಆರ್ಎಸ್ಎಸ್ ಮುಖಂಡರು ಚರ್ಚೆ ನಡೆಸಿದರು.
ಇತ್ತೀಚೆಗೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸಿದ್ದವಾಗಿದ್ದ ಹದಿಮೂರು ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಬಗ್ಗೆ ಸಭೆಯಲ್ಲಿ ಮತ್ತೆ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ರಾಜ್ಯದಲ್ಲಿ ಎದ್ದಿರುವ ನರೇಂದ್ರ ಮೋದಿ ಅಲೆಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಬಗ್ಗೆ ಮಾತುಕತೆ ನಡೆಯಿತು.

ಲೋಕಸಭೆ ಚುನಾವಣೆಯ ರಣತಂತ್ರದ ಬಗ್ಗೆ ಚರ್ಚೆ ನಡೆಸಿದ ಮುಖಂಡರು, ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದರ ಬಗ್ಗೆ ಮಾತುಕತೆ ನಡೆಸಿದರು. ಕಾಂಗ್ರೆಸ್ ವಿರುದ್ದ ಹೋರಾಟ, ಪ್ರತಿಭಟನೆಯ ಬಗ್ಗೆಯೂ ಸಭೆಯಲ್ಲಿ ಮಾತುಕತೆ ನಡೆಸಲಾಯಿತು.
ರಾಜ್ಯದಲ್ಲಿ ನರೇಂದ್ರ ಮೋದಿ ಸಮಾವೇಶ, ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದರ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಜನವರಿ 20ರೊಳಗೆ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಹೈಕಮಾಂಡಿಗೆ ಕಳುಹಿಸುವ ನಿರ್ಧಾರಕ್ಕೆ ಬರಲಾಯಿತು. ಹಾಗೂ, ಈ ತಿಂಗಳಾಂತ್ಯದಲ್ಲಿ 13 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ನಿರ್ಧಾರಕ್ಕೆ ಸಭೆಯಲ್ಲಿ ಬರಲಾಯಿತು.
ಸಭೆಯ ಬಳಿಕ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ಚುನಾವಣೆ ಮಾರ್ಗಸೂಚಿ ರಚನೆಗಾಗಿ ಸಭೆ ನಡೆಸಿದ್ದೇವೆ. ಇದೇ ತಿಂಗಳ 17ರಿಂದ 19ರ ವರೆಗೆ ಪಕ್ಷದ ರಾಷ್ಟೀಯ ಕಾರ್ಯಕಾರಿಣಿ ನಡೆಯಲಿದೆ. ಜನವರಿ 19ರ ಬಳಿಕ ಮಾರ್ಗಸೂಚಿಗೆ ಚಾಲನೆ ನೀಡುತ್ತೇವೆ ಎಂದರು.
ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆಗಾಗಿ ಅಭಿಪ್ರಾಯವನ್ನು ಪಡೆದಿದ್ದೇವೆ. ರಾಷ್ಟೀಯ ಕಾರ್ಯಕಾರಿಣಿಯಲ್ಲಿ ಮೋದಿ ಸಮಾವೇಶಕ್ಕೆ ಸಮಯ ಕೇಳುತ್ತೇವೆ. ಬರುವ ತಿಂಗಳು ಎರಡರಿಂದ ಮೂರು ಮೋದಿ ಸಾರ್ವಜನಿಕ ಸಭೆ ನಡೆಸು ಉದ್ದೇಶವನ್ನು ಇಟ್ಟು ಕೊಂಡಿದ್ದೇವೆ ಎಂದು ಜೋಷಿ ಹೇಳಿದ್ದಾರೆ.
ಪ್ರಣಾಳಿಕೆಗೆ ಜನರ ಬಳಿ ಹೋಗುತ್ತೇವೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ನಾವು ಈಗಾಗಲೇ ಜನರ ಮಧ್ಯೆದಲ್ಲೇ ಇದ್ದೇವೆ. ಬಿಜೆಪಿಯಲ್ಲಿ ಒಬಿಸಿ ಪಂಗಡದವರಿಗೆ ಸ್ಥಾನವಿಲ್ಲ ಎನ್ನುವ ಹೇಳಿಕೆಯನ್ನು ಸಿದ್ದರಾಮಯ್ಯ ನೀಡುತ್ತಾರೆ. ಒಬಿಸಿಗೆ ಸೇರಿದ ಅಭ್ಯರ್ಥಿಯೇ ನಮ್ಮ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಪ್ರಹ್ಲಾದ್ ಜೋಷಿ ಸಭೆಯ ನಂತರ ಹೇಳಿದ್ದಾರೆ.
ಈ ಮ್ಯಾರಥಾನ್ ಸಭೆಯಲ್ಲಿ ಯಡಿಯೂರಪ್ಪ, ಅನಂತ್ ಕುಮಾರ್, ಜಗದೀಶ್ ಶೆಟ್ಟರ್, ಸದಾನಂದ ಗೌಡ, ಈಶ್ವರಪ್ಪ, ಸಿ ಟಿ ರವಿ, ರಘುನಾಥ್ ಮಲ್ಕಾಪುರೆ, ಆರ್ಎಸ್ಎಸ್ ಮುಖಂಡರಾದ ಸತೀಶ್, ಸಂತೋಷ್, ಕಲ್ಲಡ್ಕ ಪ್ರಭಾಕರ್ ಭಟ್ ಸೇರಿದಂತೆ ಎಲ್ಲಾ ಜಿಲ್ಲಾ ಆರ್ಎಸ್ಎಸ್ ಮುಖಂಡರು ಭಾಗವಹಿಸಿದ್ದರು.












Click it and Unblock the Notifications