ಕೋಟಿಗಟ್ಟಲೆ ತೆರಿಗೆ ಹಣದಿಂದ ಬೆಳಗಾವಿಯಲ್ಲಿ ಮಹಾಧಿವೇಶನ: ನಾಳೆ ಬಿಜೆಪಿ ಪ್ರತಿಭಟನೆ
ಕಾಂಗ್ರೆಸ್ ಪಕ್ಷವು ರಾಜ್ಯದ ಜನರ ಕೋಟಿಗಟ್ಟಲೆ ತೆರಿಗೆ ಹಣವನ್ನು ಬಳಸಿಕೊಂಡು ಬೆಳಗಾವಿಯಲ್ಲಿ ಮಹಾಧಿವೇಶನ ಮಾಡಲು ಹೊರಟಿರುವುದು ಸರಿಯಲ್ಲ . ನಕಲಿ ಕಾಂಗ್ರೆಸ್ಸಿನ ಈ ನೀತಿಯ ವಿರುದ್ಧ ಬೆಳಗಾವಿಯಲ್ಲಿ ಕಾಂಗ್ರೆಸ್ ಮಹಾಧಿವೇಶನವನ್ನು ವಿರೋಧಿಸಿ ನಾಳೆ (ಡಿಸೆಂಬರ್ 26) ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಲಿದ್ದೇವೆ. ವಿಧಾನಸಭೆ- ವಿಧಾನಪರಿಷತ್ತಿನ ಸದಸ್ಯರು ಇದರಲ್ಲಿ ಭಾಗವಹಿಸುವರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಹೇಳಿದರು.
ಈ ಕುರಿತು ಗುರುವಾರ ಮಾಧ್ಯಮಗಳ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಮಾತನಾಡಿ, ದೇಶ, ರಾಜ್ಯದಲ್ಲಿರುವುದು ಅಸಲಿ ಕಾಂಗ್ರೆಸ್ ಪಕ್ಷವಲ್ಲ; ಇದು ನಕಲಿ ಕಾಂಗ್ರೆಸ್ ಪಕ್ಷ. ಮಹಾತ್ಮ ಗಾಂಧೀಜಿ ಮತ್ತು ಡಾ. ಅಂಬೇಡ್ಕರ್ ಅವರ ತತ್ವಗಳನ್ನು ಗಾಳಿಗೆ ತೂರಿದ ಪಕ್ಷ ಕಾಂಗ್ರೆಸ್ ಎಂದ ಅವರು, ಗಾಂಧೀಜಿ ಮತ್ತು ಅಂಬೇಡ್ಕರರ ಹೆಸರು ಹೇಳುವ ನೈತಿಕತೆ, ಯೋಗ್ಯತೆ ಕಾಂಗ್ರೆಸ್ಸಿಗರಿಗೆ ಇಲ್ಲ ಎಂದು ಆಕ್ಷೇಪಿಸಿದರು.

ಕಾಂಗ್ರೆಸ್ ಪಕ್ಷದವರಿಗೆ ಈ ದೇಶದ ಬಗ್ಗೆ, ಅಖಂಡತೆ, ಸಮಗ್ರತೆ ಬಗ್ಗೆ ಬದ್ಧತೆ ಇಲ್ಲ. ದೇಶ ಒಡೆಯುವ ಕೆಲಸವನ್ನು ಕಾಂಗ್ರೆಸ್ಸಿಗರೇ ಮಾಡಿದ್ದಾರೆ ಎಂದು ಹೇಳಿದರು. ಬಾಬಾ ಸಾಹೇಬರಿಗೆ ಸಂಬಂಧಿಸಿದ 5 ಪ್ರಮುಖ ಸ್ಥಳಗಳನ್ನು ಪ್ರಧಾನಿ ನರೇಂದ್ರ ಮೋದಿಜೀ ಅವರು ಪಂಚತೀರ್ಥಗಳನ್ನಾಗಿ ಅಭಿವೃದ್ಧಿ ಪಡಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಹೇಳಿದರು.
ದೇಶ ವಿರೋಧಿ ಕಾಂಗ್ರೆಸ್ ಇದೆ: ಬಸವರಾಜ ಬೊಮ್ಮಾಯಿ
ದೇಶದಲ್ಲಿ ಎರಡು ರೀತಿಯ ಕಾಂಗ್ರೆಸ್ ಇದ್ದು, ಸ್ವಾತಂತ್ರ್ಯ ಪೂರ್ವದಲ್ಲಿ ರಾಷ್ಟ್ರೀಯತೆಯ ಕಾಂಗ್ರೆಸ್ ಇತ್ತು. ಈಗ ಜನ ವಿರೋಧಿ, ದೇಶ ವಿರೋಧಿ ಕಾಂಗ್ರೆಸ್ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. 1924 ರಲ್ಲಿ ಬೆಳಗಾವಿಯಲ್ಲಿ ಮಹಾತ್ಮಾ ಗಾಂಧೀಜಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದ ಶತಮಾನೋತ್ಸವವನ್ನು ಕಾಂಗ್ರೆಸ್ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಈಗಿನದು ಜನ ವಿರೋಧಿ, ಮತ್ತು ದೇಶ ವಿರೋಧಿ ಕಾಂಗ್ರೆಸ್ ಆಗಿದೆ ಎಂದು ಹೇಳಿದರು.
ಈ ಸರ್ಕಾರ ಸಂಪೂರ್ಣ ಪೊಲಿಸ್ ಇಲಾಖೆಯ ನೈತಿಕತೆ ಕುಸಿಯುವಂತೆ ಮಾಡಿದೆ. ಹಿರಿಯ ಅಧಿಕಾರಿಗಳು ಕಾನ್ಸ್ ಟೇಬಲ್ ರೀತಿ ನಡೆದುಕೊಳ್ಳುತ್ತಿದ್ದಾರೆ. ಯಾರು ನ್ಯಾಯ ಸಮ್ಮತವಾಗಿ ಕೆಲಸ ಮಾಡುತ್ತಿದ್ದಾರೆ ಅವರಿಗೆ ಶಿಕ್ಷೆ ಕೊಡಲಾಗುತ್ತಿದೆ. ಪೊಲಿಸರು ಕಾನೂನಿಗೆ ನಿಷ್ಠೆ ಇರಬೇಕು. ಕಾಂಗ್ರೆಸ್ ನವರಿಗೆ ತಮಗೆ ನಿಷ್ಠೆ ಇರುವ ಪೊಲಿಸ್ ಅಧಿಕಾರಿಗಳು ಬೇಕಾಗಿದ್ದಾರೆ. ಹೀಗಾಗಿ ಪೊಲಿಸ್ ಇಲಾಖೆಯನ್ನು ಪಕ್ಷಗಳ ಆಧಾರದಲ್ಲಿ ವಿಭಜಿಸುವಂತದ್ದು, ಯುನಿಫಾರ್ಮ್ ನಲ್ಲಿರುವ ಪೊಲಿಸ್ ಅಧಿಕಾರಿಗಳಿಗೆ ಶಿಕ್ಷೆ ನೀಡುವುದರಿಂದ ಅವರ ನೈತಿಕತೆ ಕುಸಿಯುತ್ತಿದೆ. ತಕ್ಷಣವೇ ಈ ವ್ಯವಸ್ಥೆಯನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಬರುವ ದಿನಗಳಲ್ಲಿ ಬಹಳ ದೊಡ್ಡ ಸಮಸ್ಯೆ ಎದುರಾಗಲಿದೆ ಎಂದು ಹೇಳಿದರು.
ಬಿಜೆಪಿ ಶಾಸಕ ಮುನಿರತ್ನ ಅವರ ಮೇಲೆ ಮೊಟ್ಟೆ ಎಸೆದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನವರ ದುರಾಡಳಿತ ಮಿತಿ ಮೀರುತ್ತಿದೆ. ಕಾನೂನು ಕೈಗೆ ತೆಗೆದುಕೊಳ್ಳಬಾರದು ಎನ್ನುವ ಕನಿಷ್ಠ ಜ್ಞಾನ ಇವರಿಗೆ ಇಲ್ಲ ಎಂದರೆ, ಇವರು ನೂರನೇ ವರ್ಷಾಚರಣೆ ಮಾಡಿ ಏನು ಪ್ರಯೋಜನ ಎಂದು ಪ್ರಶ್ನಿಸಿದರು.












Click it and Unblock the Notifications