BJP Protest: ಜೈನಮುನಿ, ವೇಣುಗೋಪಾಲ್ ಹತ್ಯೆ ಪ್ರಕರಣ: ಗಾಂಧಿ ಪ್ರತಿಮೆ ಬಳಿ ಬಿಜೆಪಿ ಧರಣಿ; ಕಮಲ ಕಲಿಗಳು ಹೇಳಿದ್ದೇನು?
ಬೆಂಗಳೂರು,ಜುಲೈ 12: ಜೈನಮುನಿ ಕಾಮಕುಮಾರ ನಂದಿ ಮಹಾರಾಜ ಹಾಗೂ ಟಿ ನರಸೀಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಸೂಕ್ತ ರೀತಿಯಲ್ಲಿ ನಿಭಾಯಿಸಿಲ್ಲ ಹಾಗೂ ಸಿಬಿಐ ಗೆ ನೀಡುವಂತೆ ಆಗ್ರಹಿಸಿ ಎಂದು ಬಿಜೆಪಿ ವಿಧಾನಸೌಧದ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸುತ್ತಿದೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಾಜಿ ಸಚಿವ ಸುನೀಲ್ ಕುಮಾರ್, ಆರ್ ಅಶೋಕ್, ಶಾಸಕರಾದ ಬಿವೈ ವಿಜಯೇಂದ್ರ, ಸಿದ್ದು ಸವದಿ, ಉಮಾನಾಥ್ ಕೊಟ್ಯಾನ್, ಎಂಟಿಬಿ ನಾಗರಾಜ್, ಮಂಜುಳಾ ಲಿಂಬಾವಳಿ, ಸುರೇಶ್ ಕುಮಾರ್ ಸೇರಿದಂತೆ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಭಾಗಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜ ಅವರ ಹತ್ಯೆಯಾಗಿತ್ತು. ಭೀಕರವಾಗಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಬಂಧನ ಆಗಿದೆ. ಹಣದ ವ್ಯವಹಾರ ಈ ಹತ್ಯೆಗೆ ಕಾರಣ ಎಂದ ಸರ್ಕಾರ ಹೇಳುತ್ತಿದೆ. ಆದರೆ ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರ ಇದೆ ಎಂಬುವುದು ಬಿಜೆಪಿ ವಾದವಾಗಿದೆ. ಈ ಹಿನ್ನಲೆಯಲ್ಲಿ ಸಿಬಿಐ ತನಿಖೆಗೆ ಬಿಜೆಪಿ ಆಗ್ರಹಿಸಿದೆ.
ಇನ್ನೂ ಪ್ರತಿಭಟನೆಯ ವೇಳೆ ಮಾಜಿ ಸಚಿವ ಆರ್ ಅಶೋಕ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದ ಬಳಿಕ ರಾಜ್ಯದಲ್ಲಿ ಅಶಾಂತಿ ಮೂಡಿದೆ. ಹಲವು ಭಾಗ್ಯವಳನ್ನು ನೀಡಿದ ಕಾಂಗ್ರೆಸ್ ಈಗ ಕೊಲೆ ಭಾಗ್ಯ ನೀಡಿದೆ. ಹಿಂದೂ ಕಾರ್ಯಕರ್ತರು ಹಾಗೂ ಜೈನ್ ಮುನಿಗಳ ಹತ್ಯೆ ಆಗಿದೆ. ಇವುಗಳ ಹಿಂದೆ ಷಡ್ಯಂತ್ರ ಇದೆ ಬೆಂಗಳೂರಿನಲ್ಲಿ ಇಬ್ಬರ ಕೊಲೆ ಆಗಿದೆ, ಸರ್ಕಾರಕ್ಕೆ ನೈತಿಕತೆ ಇಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ,ಗೂಂಡಾಗಳು, ವಸೂಲಿ ಮಾಡುವವರು ಪಾಕಿಸ್ತಾನ ಕ್ಕೆ ಜಿಂದಾಬಾದ್ ಎನ್ನುವವರು ಮುನ್ನೆಲೆಗೆ ಬಂದಿದ್ದಾರೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು.
ಕಾಂಗ್ರೆಸ್ ಇವರ ಪರ ಇದೆ. ಲಜ್ಜೆ ಗೆಟ್ಟ ಸರ್ಕಾರ,ಟ್ರಾನ್ಪರ್ ದಂಧೆ ಮಾಡುತ್ತಿದೆ. ಈ ಸರ್ಕಾರದ ಕಿವಿಹಿಂಡಿ ಬುದ್ದಿ ಹೇಳಲು ಗವರ್ನರ್ ಗೆ ಮನವಿ ಮಾಡುತ್ತೇವೆ, ಇದಕ್ಕಾಗಿ ಈಗ ವಿಧಾನಸೌಧ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಇನ್ನೂ ಈ ವೇಳೆ ಮಾಜಿ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಸಮಾಜ ವಿದ್ರೋಹಿಗಳಿಗೆ ಶಕ್ತಿ ಬಂದಿದೆ. ಜೈನ ಮುನಿ ಸಾವು ನೋಡಿದ್ರೆ, ಐಸೀಸ್ ಉಗ್ರರು ಮಾಡದಂತಹ ಕೊಲೆ ಮಾಡಿದ್ದಾರೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ, ಈ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ವಹಿಸಬೇಕು ಎಂದರು.
ಕೊಲೆ ಸತ್ಯಾಸತ್ಯತೆ ತಿಳಿಯಲು ಸಿಬಿಐ ತನಿಖೆ ಆಗಬೇಕು. ಪೊಲಿಸ್ ಇಲಾಖೆಯಲ್ಲಿ ಕೇಸರೀಕರಣ ಹಸಿರೀಕರಣ ನಡೆಯುತ್ತಿದೆ. ಈ ಸರ್ಕಾರ ನಿಷ್ಪಕ್ಷಪಾತ ತನಿಖೆ ಆಗಬೇಕು ರಾಜ್ಯದ ಎಲ್ಲ ಹಿಂದೂ ಕಾರ್ಯಕರ್ತರ ಕೊಲೆಗಳಿಗೆ ನ್ಯಾಯ ಸಿಗಬೇಕು. ನನ್ನ ಕ್ಷೇತ್ರದಲ್ಲಿ ಹಾಡುಹಗಲ್ಲಿನಲ್ಲಿಯೇ ಮಚ್ಚು ತಗೆದುಕೊಂಡು ಓಡಾಡ್ತಿದ್ದಾರೆ. ತೀರ್ಥಹಳ್ಳಿಯಲ್ಲಿ ಮಚ್ಚಿನಿಂದ ಹೊಡೆಯಲು ಹೋಗಿದ್ದಾನೆ. ಕೊಲೆಗೆಡಿಗಳೆಲ್ಲ ಕಾಂಗ್ರೆಸ್ ಸರ್ಕಾರದಲ್ಲಿ ಹೊರಗಡೆ ಬಂದಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.
ಜೈನ ಮುನಿಗಳ ಹತ್ಯ ಸಾಮಾನ್ಯ ಹತ್ಯೆ ಇಲ್ಲ. ಈ ಹತ್ಯೆ ಹಿಂದೆ ವಿದೇಶಿ ಕೈವಾಡ ಇರುವ ಹಾಗೇ ಕಾಣುತ್ತಿದೆ. ಈ ಪ್ರಕರಣ ಸಿಬಿಐಗೆ ವಹಿಸಬೇಕು, ನಮ್ಮ ಪೋಲಿಸ್ ರು ಸರಿಯಾಗಿ ಕೆಲಸ ಮಾಡುತ್ತಾರೆ. ಆದ್ರೆ ಅವರ ಮೇಲೆ ಒತ್ತಡ ಇದೆ. ಈ ಪ್ರಕರಣ ಸಿಬಿಐಗೆ ವಹಿಸಬೇಕು ಎಂಬುದು ನಮ್ಮ ಬೇಡಿಕೆ ಎಂದು ಆಗ್ರಹಿಸಿದರು.












Click it and Unblock the Notifications