ಐಟಿ ದಾಳಿ ಹಣದ ಕುರಿತು ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ; ಏನಿದು ಕರ್ನಾಟಕ ಕಾಂಗ್ರೆಸ್ ಎಟಿಎಂ ಸರ್ಕಾರ್ ಮಾದರಿ?
ಬೆಂಗಳೂರು, ಅಕ್ಟೋಬರ್ 17: ಬೆಂಗಳೂರಿನಲ್ಲಿ ನಡೆದ ಐಟಿ ದಾಳಿಯ ಸಂದರ್ಭದಲ್ಲಿ 42 ಕೋಟಿ ಹಣ ಸಿಕ್ಕಿರುವ ವಿಚಾರವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ನಾಯರು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು.
ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರದರ್ಶನಕ್ಕಿಟ್ಟಿರುವ ಎಟಿಎಂ ಪ್ರತಿಕೃತಿಯು ಎಲ್ಲರ ಗಮನ ಸೆಳೆದಿದೆ.ಹೌದು, ಬಿಜೆಪಿ ಪ್ರತಿಭಟನೆಯಲ್ಲಿ ಎಟಿಎಂ ಯಂತ್ರದ ಮಾದರಿ ಗಮನ ಸೆಳೆಯಿತು. ಯಂತ್ರದ ಮಾದರಿಯಲ್ಲಿ ಕರ್ನಾಟಕ ಕಾಂಗ್ರೆಸ್ ಎಟಿಎಂ ಸರ್ಕಾರ್ ಎಂದು ಬರೆಯಲಾಗಿದೆ. ಅಲ್ಲದೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ಫೋಟೋವನ್ನು ಹಾಕಲಾಗಿದೆ.

ಇನ್ನೂ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕರು, ಲೂಟಿ ಮಾಡಿ ನುಡಿದಂತೆ ನಡೆದಿದ್ದೇವೆ, ಎಚ್ಚರ ತಪ್ಪಿ ಮತ ಹಾಕಿದ್ದಕ್ಕೆ ಕರ್ನಾಟಕ ಲೂಟಿ, ಮಂಚದಡಿ ಮಗಲಿದ್ದ 42 ಕೋಟಿಗೆ ಅಪ್ಪ ಯಾರು? ಎಂದು ಪೋಸ್ಟರ್‌ಗಳು ಪ್ರತಿಭಟನೆಯಲ್ಲಿ ಗಮನ ಸೆಳೆದವು.
ಪ್ರತಿಭಟನೆಯ ವೇಳೆ ಮಾಜಿ ಡಿಸಿಎಂ ಡಾ. ಸಿ ಎನ್ ಅಶ್ವಥ್ ನಾರಾಯಣ್ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರಕಾರ ಎಡವಟ್ಟುಗಳ ಸರಕಾರ. ಆಡಳಿತ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು. ಅಲ್ಲದೇ, ಐಟಿ ದಾಳಿ ಸಂಬಂಧ ಸಿಬಿಐ ತನಿಖೆ ಮಾಡಿ ಹಣದ ಮೂಲವನ್ನು ಪತ್ತೆ ಮಾಡಬೇಕು ಎಂದು ಆಗ್ರಹಿಸಿದರು.
ನಾಚಿಕೆ ಇಲ್ಲದ ಸರಕಾರ ಇದು. ಪ್ರತಿಯೊಂದು ವಿಚಾರದಲ್ಲೂ ನಾಡಿಗೇ ಸಂಕಷ್ಟ ತಂದಿಟ್ಟ ಕಾಂಗ್ರೆಸ್ ಸರಕಾರ ಇದೆ. ಈ ಸರಕಾರ ತೊಲಗುವುದನ್ನೇ ಜನ ಬಯಸುತ್ತಿದ್ದಾರೆ ಎಂದು ತಿಳಿಸಿದರು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ರಾಜೀನಾಮೆಗೆ ಅವರು ಆಗ್ರಹಿಸಿದರು.

ಸಾಕಷ್ಟು ಆಡಳಿತ ಅನುಭವ, ಪರಿಣತಿ ಇದ್ದರೂ, ಭಾರಿ ಬಹುಮತ ಸಿಕ್ಕಿದರೂ ಜನಾಶೀರ್ವಾದಕ್ಕೆ ತಕ್ಕ ಗೌರವವನ್ನು ನೀಡಿಲ್ಲ. ನಾಮಕಾವಾಸ್ತೆಗೆ ಕೆಲವು ಭಾಗ್ಯಗಳನ್ನು ತೋರಿಸಿ ಲೂಟಿ ಸರಕಾರವನ್ನು ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ರಾಜ್ಯವನ್ನು ಲೂಟಿ ಮಾಡಲು ಮತ್ತು ಸ್ವಾರ್ಥದಾಹ ಹಿಂಗಿಸಲು ಈ ಸರಕಾರ ಮುಂದಾಗಿದೆ. ಏನೇ ಆಪಾದನೆಗೂ ಅದು ಜಗ್ಗುತ್ತಿಲ್ಲ. ಭಂಡತನದ ಉತ್ತರವನ್ನು ನೀಡುತ್ತಿದ್ದಾರೆ. ಗುತ್ತಿಗೆದಾರರು, ಬಿಲ್ಡರ್‍ಗಳಿಂದ ಹಣ ಲೂಟಿ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಆಕ್ಷೇಪಿಸಿದರು.
ಈ ಪ್ರತಿಭಟನೆಯಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಮುಖಂಡರಾದ ಭಾಸ್ಕರ ರಾವ್, ನೆ.ಲ.ನರೇಂದ್ರ ಬಾಬು, ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಜಿಲ್ಲಾ ಅಧ್ಯಕ್ಷರಾದ ಮಂಜುನಾಥ ಜಿ, ನಾರಾಯಣ ಗೌಡ, ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು












Click it and Unblock the Notifications