PM Modi Dharwad Visit: ಉತ್ತಮ ಶಿಕ್ಷಣ ಲಭ್ಯತೆಗೆ ಉತ್ತಮ ಸಂಸ್ಥೆಗಳ ಸ್ಥಾಪನೆ, ಹೆದ್ದಾರಿ ಜಾಲ ಅಭಿವೃದ್ಧಿಗೆ ಆದ್ಯತೆ: ಪ್ರಧಾನಿ
ಧಾರವಾಡ, ಮಾರ್ಚ್ 12 : ದೇಶದಲ್ಲಿ ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ ಲಭ್ಯವಾಗಬೇಕು. ಉತ್ತಮ ಶಿಕ್ಷಣ ಸಂಸ್ಥೆ ಆರಂಭಿಸಿದಷ್ಟು ಉತ್ತಮ ಶಿಕ್ಷಣ ದೊರಕುವುದು ಸಾಧ್ಯವಾಗಲಿದ್ದು, ಅದಕ್ಕೆ ಬಿಜೆಪಿ ಸರ್ಕಾರ ಆದ್ಯತೆ ನೀಡಲಿದೆ. ಕಳೆದ 9 ವರ್ಷಗಳಿಂದ ಆಧುನೀಕರಣಕ್ಕೆ ಒತ್ತು ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಧಾರವಾರ ಜಿಲ್ಲೆಯ ಚಿಕ್ಕಮಲ್ಲಿಗವಾಡದಲ್ಲಿ ನಿರ್ಮಾಣವಾದ ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ನೂತನ ಕಟ್ಟಡ ಉದ್ಘಾಟಿಸಿ, ವಿವಿಧ ಯೋಜನೆಗಳ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಕನ್ನಡದಲ್ಲೇ ಭಾಷಣ ಆರಂಭಿಸಿದ ಅವರು ಭಾಷಣಕ್ಕೂ ಮುನ್ನ ಶರಣ ಬಸವೇಶ್ವರನ್ನು ಸ್ಮರಿಸಿ ನಾಡಿನ ಜನತೆಗೆ ನಮಸ್ಕಾರ ತಿಳಿಸಿದರು.

ಐಐಟಿಯ ಹೊಸ ಕ್ಯಾಂಪಸ್ ಧಾರವಾಡದ ಪರಿಚಯವನ್ನು ಮತ್ತಷ್ಟು ಬಲಗೊಳಿಸಲಿದೆ. ಕರ್ನಾಟಕದ ವಿಕಾಸದಲ್ಲಿ ಐಐಟಿ ಹೊಸ ಅಧ್ಯಯವಾಗಲಿದೆ. ಇಲ್ಲಿನ ಮೂಲ ಸೌಕರ್ಯಗಳು ಈ ಸಂಸ್ಥೆಯನ್ನು ವಿಶ್ವದ ಮುನ್ನೆಲೆಗೆ ತರಲಿದೆ.
ಐಐಟಿ ಸಂಸ್ಥೆಯು ಬಿಜೆಪಿ ಸರಕಾರದ ಸಂಕಲ್ಪದ ಸಿದ್ಧಿಯಾಗಿದೆ. ಶಂಕುಸ್ಥಾಪನೆ ನೆರವೇರಿಸಿದ ನಾಲ್ಕು ವರ್ಷಗಳಿಂದ ಡಬಲ್ ಎಂಜಿನ್ ಸರಕಾರವು ಅದೇ ವೇಗದಲ್ಲಿ ನಡೆದಿದೆ. ಶಂಕುಸ್ಥಾಪನೆ ನೆರವೇರಿಸಿ ಮರೆತುಬಿಡುವ ಕಾಲ ಹೋಯಿತು. ನಾವೇ ಶಂಕುಸ್ಥಾಪನೆ ನೆರವೇರಿಸಿ ನಾವೇ ಲೋಕಾರ್ಪಣೆ ಮಾಡುವುದು ನಮ್ಮ ಬದ್ಧತೆಯಾಗಿದೆ.
ಕೇವಲ ಪಟ್ಟಣದಲ್ಲಿ ಮಾತ್ರವಲ್ಲದೇ ಹೆದ್ದಾರಿಗಳ ಜೊತೆಗೆ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗುತ್ತಿದೆ. ಸಾರಿಗೆ ಸಂಪರ್ಕ ಜಾಲ ಅಭಿವೃದ್ಧಿ ಪಡಿಸಲಾಗುತ್ತಿದೆ. ಇನ್ನೂ ಹುಬ್ಬಳ್ಳಿ, ಬೆಳಗಾವಿ, ಕಲಬುರ್ಗಿ ಮತ್ತಿತರ ಕಡೆಗಳಲ್ಲಿ ರೋಡ್ ಶೋ ಸಂದರ್ಭದಲ್ಲಿ ಅದ್ಭುತ ಪ್ರೀತಿ ದೊರೆತಿದೆ. ಡಬಲ್ ಎಂಜಿನ್ ಸರ್ಕಾರ ಕರ್ನಾಟಕದ ಪ್ರತಿ ಹಳ್ಳಿಗಳ ಸಮಗ್ರ ಪ್ರಗತಿಗೆ ಬದ್ಧವಾಗಿದೆ ಎಂದರು.

9 ವರ್ಷದಲ್ಲಿ 250 ಕಾಲೇಜು ಸ್ಥಾಪನೆ: ಪ್ರಧಾನಿ ವಿವರಣೆ
ಭಾರತದಲ್ಲಿ 380 ವೈದ್ಯಕೀಯ ಕಾಲೇಜುಗಳು ಇದ್ದು, ಕಳೆದ 9 ವರ್ಷಗಳಲ್ಲಿ ಹೊಸದಾಗಿ 250 ಕಾಲೇಜು ಸ್ಥಾಪಿಸಲಾಗಿದೆ. ಇದೇ ರೀತಿ ಐಐಟಿ ಗಳನ್ನು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆರಂಭಿಸಲಾಗುತ್ತಿದೆ. ಜಯದೇವ ಹೃದ್ರೋಗ ಆಸ್ಪತ್ರೆ ಆರಂಭದಿಂದ ಧಾರವಾಡ ಸುತ್ತಮುತ್ತಲಿನ ಭಾಗದ ಜನರಿಗೆ ಉತ್ತಮ ಚಿಕಿತ್ಸೆ ಲಭಿಸಲಿದೆ ಎಂದು ತಿಳಿಸಿದರು.
ಜಲಜೀವನ್ ಮಿಷನ್ ಯೋಜನೆ ಮೂಲಕ 1 ಸಾವಿರ ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಮಲಪ್ರಭಾ ನದಿಯ ನೀರನ್ನು ನಳಗಳ ಮೂಲಕ ಮನೆ ಮನೆಗೆ ತಲುಪಿಸಲಾಗುವುದು.
ತುಪ್ಪರಿಹಳ್ಳದ ಯೋಜನೆ ಮೂಲಕ ಪ್ರವಾಹ ಹಾನಿ ತಪ್ಪಿಸಲಿದೆ. ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣದಲ್ಲಿ ವಿಶ್ವದ ಅತೀ ದೊಡ್ಡ ಫ್ಲ್ಯಾಟ್ ಫಾರ್ಮ್ ಇದು ಕೇವಲ ದಾಖಲೆಯಲ್ಲ. ಮೂಲಸೌಕರ್ಯ ಅಭಿವೃದ್ಧಿಗೆ ನಾವು ನೀಡಿದ ಆದ್ಯತೆಯ ಸಾಕ್ಷಿಯಾಗಿದೆ.
ರೈಲು ಮಾರ್ಗದ ವಿದ್ಯುದ್ದೀಕರಣದಿಂದ ತೈಲದ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಪರಿಸರ ರಕ್ಷಣೆಗೂ ಸಹಕಾರಿಯಾಗಲಿದೆ ಎಂದು ಅವರು ಬಿಜೆಪಿ ಕಾರ್ಯಸಾಧನೆಯನ್ನು ವಿವರಿಸಿದರು.

ರಸ್ತೆ, ಸಾರಿಗೆ ಮತ್ತಿತರ ಮೂಲಸೌಕರ್ಯಗಳನ್ನು ಒದಗಿಸುವುದರಿಂದ ಪ್ರತಿಯೊಬ್ಬರಿಗೂ ಅನುಕೂಲವಾಗುತ್ತಿದೆ. ಹಳ್ಳಿ ಹಳ್ಳಿಗೆ ಅಂತರ್ಜಾಲ ಸಂಪರ್ಕವನ್ನು ಒದಗಿಸಿರುವುದರಿಂದ ಇಂದು ಭಾರತವು ಜಗತ್ತಿನ ಡಿಜಿಟಲ್ ಶಕ್ತಿ ಕೇಂದ್ರವಾಗಿ ಹೊರಹೊಮ್ಮಿದೆ.
ಪಿಎಂ -ಗತಿಶಕ್ತಿ ಮಾಸ್ಟರ್ ಪ್ಲ್ಯಾನ್ ಮೂಲಕ ಅಗತ್ಯ ಮೂಲ ಸೌಕರ್ಯ ಒದಗಿಸಲಾಗುತ್ತಿದೆ.
ಆಸ್ಪತ್ರೆ, ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಭವಿಷ್ಯದ ಭಾರತ ನಿರ್ಮಾಣಕ್ಕೆ ಶ್ರಮಿಸಲಾಗುತ್ತಿದೆ.
ಧಾರವಾಡ ಬಣ್ಣಿಸಿದ ಪ್ರಧಾನಿ
ಬಸವಣ್ಣನವರು ಅನುಭವ ಮಂಟಪ ಸ್ಥಾಪನೆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮುನ್ನುಡಿ ಬರೆದಿದ್ದಾರೆ. ಲಂಡನ್ ನಲ್ಲಿ ಬಸವೇಶ್ವರ ಪುತ್ಥಳಿ ಲೋಕಾರ್ಪಣೆ ಅವಕಾಶ ಸಿಕ್ಕಿತ್ತು. ಆದರೆ ಅದೇ ಲಂಡನ್ ನಲ್ಲಿ ಇತ್ತೀಚೆಗೆ ಭಾರತದ ಪ್ರಜಾಪ್ರಭುತ್ವ ಕ್ಕೆ ಅವಮಾನಿಸುವ ಮಾತುಗಳನ್ನು ಕೇಳುವುದು ದೌರ್ಭಾಗ್ಯವಾಗಿದೆ ಎಂದು ರಾಹುಲ್ ಗಾಂಧಿ ವಿರುದ್ಧ ಲೇವಡಿ ಮಾಡಿದರು.
ಧಾರವಾಡವು ಕರ್ನಾಟಕ ಮತ್ತು ಭಾರತದ ಜೀವಂತಿಕೆಯ ಪ್ರತಿಬಿಂಬವಾಗಿದೆ. ಧಾರವಾಡದ ಪರಿಚಯವು ಸಾಹಿತಿ ದ.ರಾ.ಬೇಂದ್ರೆ, ಸಮೃದ್ಧ ಸಂಗೀತ ಸ್ವರ ಸಾಮ್ರಾಟ್ ಭೀಮಸೇನ್ ಜೋಶಿ, ಹಿಂದೂಸ್ಥಾನಿ ಸಂಗೀತ ಗಾಯಕಿ ಗಂಗೂಬಾಯಿ ಹಾನಗಲ್, ಕುಮಾರ್ ಗಂಧರ್ವ,ಬಸವರಾಜ ರಾಜಗುರು, ಮಲ್ಲಿಕಾರ್ಜುನ ಮನಸೂರ ಅವರಂತಹ ಸಂಗೀತ ದಿಗ್ಗಜರ ತವರೂರಾಗಿದೆ ಎಂದು ಜಿಲ್ಲೆಯನ್ನು ಪ್ರಧಾನಿ ಬಣ್ಣಿಸಿದರು.












Click it and Unblock the Notifications