ಕಾಂಗ್ರೆಸ್ ಬುಡ ಅಲ್ಲಾಡಿಸಲು ರಾಜ್ಯಕ್ಕೆ ಅಮಿತ್ ಶಾ
ಬೆಂಗಳೂರು, ಸೆ.10: ರಾಜ್ಯದ ಆಡಳಿತದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಅಲ್ಲಾಡಿಸಲು ಬುಡಮಟ್ಟದಲ್ಲಿ ಕೊಡಲಿ ಪೆಟ್ಟು ನೀಡಲು ಬಿಜೆಪಿಯ 'ಚಾಣಕ್ಷ' ಅಮಿತ್ ಶಾ ಸೆ.17ರಂದು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಇದು ಅಮಿತ್ ಅವರು ರಾಜ್ಯಕ್ಕೆ ನೀಡುತ್ತಿರುವ ಮೊದಲ ಭೇಟಿಯಾಗಿದೆ.
ಕಾಂಗ್ರೆಸ್ ಪಾಲಿನ ಭದ್ರ ಕೋಟೆ ಎನಿಸಿರುವ ಹೈದ್ರಾಬಾದ್ - ಕರ್ನಾಟಕ ಪ್ರದೇಶವನ್ನು ಬಿಜೆಪಿ ತೆಕ್ಕೆಗೆ ಸೇರುವಂತೆ ಮಾಡಲು ಅಮಿತ್ ಶಾ ಅವರು ಕಾರ್ಯತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.
ಈ ಮಹತ್ವಾಕಾಂಕ್ಷೆಯೊಂದಿಗೇ ಸೆಪ್ಟೆಂಬರ್ 17 ರಂದು ಅಮಿತ್ ಶಾ ರಾಜ್ಯಕ್ಕೆ ಆಗಮಿಸಲಿದ್ದಾರೆ. ಹೈದ್ರಾಬಾದ್-ಕರ್ನಾಟಕ ಪ್ರದೇಶದಲ್ಲಿ ಅಹಿಂದ ವರ್ಗಗಳ ಮತದಾರರ ಸಂಖ್ಯೆ ಹೆಚ್ಚಾಗಿದ್ದು ಅದೇ ಕಾಲಕ್ಕೆ ಗಣನೀಯ ಪ್ರಮಾಣದ ಲಿಂಗಾಯತ ಮತದಾರರ ಜತೆ ಸಮೀಕರಿಸಿದರೆ ಬಿಜೆಪಿಯ ಪಾಲಿಗೆ ಅದನ್ನು ಭದ್ರಕೋಟೆಯನ್ನಾಗಿ ಪರಿವರ್ತಿಸಬಹುದು ಎಂಬುದು ಅಮಿತ್ ಶಾ ಲೆಕ್ಕಾಚಾರ ಹಾಕಿದ್ದಾರೆ. [ಅಮಿತ್ ಶಾ ಗೆ ಕ್ಲೀನ್ ಚಿಟ್ ನೀಡಿಲ್ಲ: ಸದಾಶಿವಂ]
ಸೆಪ್ಟೆಂಬರ್ ಹದಿನೇಳರಂದು ಕರ್ನಾಟಕಕ್ಕೆ ಆಗಮಿಸಲಿರುವ ಅಮಿತ್ ಶಾ, ಹೈದ್ರಾಬಾದ್- ಕರ್ನಾಟಕ ವಿಮೋಚನಾ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಗುಲ್ಬರ್ಗಾದ ಗೊರಂಟಾಲಾ ಗ್ರಾಮದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲರ ಪ್ರತಿಮೆಗೆ ಶಂಕು ಸ್ಥಾಪನೆ ಮಾಡಲಿದ್ದಾರೆ.

ಕೈ ಪಕ್ಷಕ್ಕೆ ಎಚ್ಚರಿಕೆ ಗಂಟೆ: ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ಬೀದರ್ ಸೇರಿದಂತೆ ಹೈದ್ರಾಬಾದ್-ಕರ್ನಾಟಕದ ಬಹುತೇಕ ಕಡೆ ಕಾಂಗ್ರೆಸ್ ಭದ್ರವಾಗಿ ತಳವೂರಿದ್ದು ಅದರ ಬುಡವನ್ನು ಅಲುಗಾಡಿಸಲು ಉತ್ತರಪ್ರದೇಶದಲ್ಲಿ ಅನುಸರಿಸಿದ ಕಾರ್ಯತಂತ್ರವನ್ನೇ ಪ್ರಯೋಗಿಸಲು ನಿರ್ಧರಿಸಿದ್ದಾರಂತೆ.
ಆರಂಭದಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಗಳ ವೇಳೆಗೆ ಕಾಂಗ್ರೆಸ್ ಬುಡವನ್ನು ಅಲುಗಾಡಿಸುವ ಪರೀಕ್ಷಾರ್ಥ ಪ್ರಯೋಗವನ್ನು ಸೆಪ್ಟೆಂಬರ್ ಹದಿನೇಳರಿಂದಲೇ ಅಮಿತ್ ಶಾ ಅರಂಭಿಸಲಿದ್ದಾರೆ ಎನ್ನಲಾಗಿದೆ. [ಅಮಿತ್ ಗೆ ಬೆಣ್ಣೆ, ಬಿಎಸ್ವೈಗೆ ದೊಣ್ಣೆ;ಇದ್ಯಾವ ನ್ಯಾಯ]
ಉತ್ತರ ಪ್ರದೇಶದಲ್ಲಿ ಇಂಥದ್ದೇ ಪ್ರಯೋಗವನ್ನು ನಡೆಸಿದ್ದ ಅಮಿತ್ ಷಾ, ಇದಕ್ಕಾಗಿ ಪಕ್ಷದ ಕಾರ್ಯಕರ್ತರ ಮೊರೆ ಹೋಗದೆ ಡಾಬಾಗಳು ಸೇರಿದಂತೆ ಸಾಮಾನ್ಯ ಜನರು ಸೇರುವ ಕಡೆಗಳಿಗೆ ಭೇಟಿ ನೀಡಿ, ಮತ ಬ್ಯಾಂಕ್ ಸ್ವರೂಪ ಹೇಗಿದೆ? ಯಾರನ್ನು ಹೇಗೆ ಬಳಸಿಕೊಳ್ಳಬೇಕು? ಜನರ ಆಶೋತ್ತರಗಳೇನು? ಎಂಬುದನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ರಣನೀತಿ ಹೆಣೆದು ಯಶ ಸಾಧಿಸಿದ್ದರು.
ಈ ನಡುವೆ ಸೆ.17ರಂದು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಆಚರಣೆ ನಡೆಸಲಾಗುತ್ತಿದ್ದು, ಮೋದಿ ಅವರು ಗುಜರಾತಿನಲ್ಲಿ ತಮ್ಮ ಸೋದರ ಪಂಕಜ್ ಮನೆಯಲ್ಲಿರುವ ತಾಯಿ ಹೀರಾಬೇನ್ ಅವರ ಆಶೀರ್ವಾದ ಪಡೆಯಲಿದ್ದಾರೆ. ನಂತರ ಭಾರತ ಪ್ರವಾಸಕ್ಕಾಗಿ ಬರುವ ಚೀನಾ ಕ್ಸಿ ಜಿಪಿಂಗ್ ಅವರ ಜೊತೆ ಹುಟ್ಟುಹಬ್ಬ ಸಂಭ್ರಮ ಆಚರಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.












Click it and Unblock the Notifications