ರಾಜ್ಯದಲ್ಲಿ ಗುಜರಾತ್ ಮಾಡೆಲ್: ಘಟಾನುಘಟಿ ಸಚಿವರು,ಶಾಸಕರಿಗೆ ಟಿಕೆಟ್ ಡೌಟ್?
ರಾಜ್ಯ ವಿಧಾನಸಭಾ ಚುನಾವಣೆ ಈಗಾಗಲೇ ಮೂರು ಪಕ್ಷಗಳು ಅಬ್ಬರ ಪ್ರಚಾರವನ್ನ ನಡೆಸುತ್ತಿದ್ದು, ಈ ಬಾರಿ ಬಿಜೆಪಿಯಲ್ಲಿ ಗುಜರಾತ್ ಮಾದರಿ ಜಾರಿಗೊಳಿಸುವ ಸಾಧ್ಯತೆಗಳು ಹೇಳಿಬರುತ್ತಿವೆ.
ಬೆಂಗಳೂರು,ಫೆಬ್ರವರಿ28: ರಾಜ್ಯ ವಿಧಾನಸಭಾ ಚುನಾವಣೆಗೆ ಹತ್ತಿರವಾಗುತ್ತಿದ್ದಂತೆ ಪ್ರಚಾರದ ಅಬ್ಬರ, ರಾಜ್ಯಾದ್ಯಂತ ಯಾತ್ರೆಗಳು ಹೆಚ್ಚಾಗುತ್ತಿದ್ದು, ಆಡಳಿತರೂಢ ಬಿಜೆಪಿಯೂ ಈ ಬಾರಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕು ಎಂದು ಪಣ ತೊಟ್ಟಿದೆ. ಈಗಾಗಲೇ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ನಡೆಸಿದ್ರೆ, ಜೆಡಿಎಸ್ ಪಂಚರತ್ನ ರಥಯಾತ್ರೆಯನ್ನ ನಡೆಸುತ್ತಿದ್ದು ಮಾರ್ಚ್ 1 ರಿಂದ ರಾಜ್ಯಾದ್ಯಂತ ಬಿಜೆಪಿ ಯಾತ್ರೆ ನಡೆಸಲು ನಿರ್ಧರಿಸಿದೆ.
ಬಿಜೆಪಿ ರಾಜ್ಯ ನಾಯಕರು ಟಿಕೆಟ್ ಘೋಷಣೆಗೂ ಮುನ್ನ ಹೈಕಮಾಂಡ್ ನಾಯಕರ ಮೂಲಕ ಅಬ್ಬರದ ಪ್ರಚಾರವನ್ನ ನಡೆಸುತ್ತಿದ್ದಾರೆ. ಆದರೆ ಈ ಬಾರಿ ಟಿಕೆಟ್ ನಿರೀಕ್ಷೆಯಲ್ಲಿರುವ 10 ಕ್ಕೂ ಹೆಚ್ಚು ಹಾಲಿ ಶಾಸಕರಿಗೂ ಹಾಗೂ ಸಚಿವರಿಗೂ ಟಿಕೆಟ್ ಕೈ ತಪ್ಪಲಿದ್ದು, ಹಲವು ನಾಯಕರಿಗೆ ಆತಂಕ ಶುರುವಾಗಿದೆ.

ರಾಜ್ಯ ಬಿಜೆಪಿಯಲ್ಲೂ ಗುಜರಾತ್ ಮಾಡೆಲ್ ಗೆ ಪ್ಲಾನ್?
ರಾಜ್ಯ ಬಿಜೆಪಿಯಲ್ಲಿ ಕೆಲ ತಿಂಗಳಿಂದಲೂ ಗುಜರಾತ್ ಮಾದರಿಯ ಕುರಿತು ಸಾಕಷ್ಟು ಚರ್ಚೆಯಾಗುತ್ತಿವೆ. ಪಕ್ಷವನ್ನ ಇನ್ನಷ್ಟು ಗಟ್ಟಿಗೊಳಿಸಿ ಅಧಿಕಾರಕ್ಕೆ ಬರ್ಬೇಕು ಅಂದ್ರೆ ಗುಜರಾತ್ ಮಾಡೆಲ್ ಅನಿವಾರ್ಯ ಎಂಬಂತಾಗಿದೆ. ಈಗಾಗಲೇ ಗುಜರಾತ್ ನಲ್ಲಿ ಈ ಬೆಳವಣೆಗೆಯಿಂದಾಗಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಇದಕ್ಕೆ ಕಾರಣವೇ ಟಿಕೆಟ್ ಹಂಚಿಕೆಯ ಸೂತ್ರ. ಗುಜರಾತ್ ನಲ್ಲಿ ಸುಮಾರು 45 ಕ್ಕೂ ಹೆಚ್ಚು ಮಂದಿ ಹಾಲಿ ಶಾಸಕರಿಗೆ ಟಿಕೆಟ್ ಕೊಡಲ್ಲ ಎಂದು ಹೇಳಿತ್ತು.
ಅದರಂತೆ ಹೊಸ ಮುಖಗಳಿಗೆ ಮಣೆ ಹಾಕಿತ್ತು. ಬಿಜೆಪಿಯ ಈ ಪ್ಲಾನ್ ನಿಂದ ಗುಜರಾತ್ ನಲ್ಲಿ ಬಿಜೆಪಿ ಯಶಸ್ಸು ಕಂಡಿತ್ತು. ಈ ಮಾದರಿಯನ್ನೇ ಹಿಮಾಚಲ ಪ್ರದೇಶದಲ್ಲೂ ಜಾರಿ ಮಾಡುವ ಮೂಲಕ ಹೊಸ ಮುಖಗಳಿಗೆ ಅವಕಾಶವನ್ನ ಮಾಡಲಾಗಿತ್ತು. ಅದರಂತೆ ಕರ್ನಾಟಕದಲ್ಲೂ ಸಹ ಗುಜರಾತ್ ಮಾದರಿ ಜಾರಿ ಕುರಿತು ಚಿಂತನೆ ನಡೆದಿದ್ದು, 10 ಕ್ಕೂ ಹೆಚ್ಚು ನಾಯಕರಿಗೆ ಟಿಕೆಟ್ ಕೈ ತಪ್ಪುವುದು ಸಾಧ್ಯತೆ ಇದೆ.

ಈ ಬಾರಿ ಕೆಲವರಿಗೆ ಟಿಕೆಟ್ ನಿರಾಕರಣೆ ಯಾಕೆ?
ಈ ಬಾರಿ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಗೆಲ್ಲಲೇ ಬೇಕು ಎಂದು ಪಣತೊಟ್ಟಿದೆ. ಆದರೆ ಈ ಬಾರಿ ರಾಜ್ಯ ಬಿಜೆಪಿಯಲ್ಲಿ ಕೆಲ ಬದಲಾವಣೆಗಳನ್ನ ತರುವ ನಿಟ್ಟಿನಲ್ಲಿ ಹೈಕಮಾಂಡ್ ಪ್ಲಾನ್ ನಡೆಸಿದೆ. ಕರ್ನಾಟಕದಲ್ಲೂ ಗುಜರಾತ್ ಮಾದರಿಯನ್ನ ತರುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಂಡಿದೆ. ಹೀಗಾಗಿ ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ನೀಡುವ ಲೆಕ್ಕಾಚಾರವನ್ನ ಹಾಕಿಕೊಂಡಿದೆ. ಆದರೆ ಇಲ್ಲ ಹೊಸಬರು, ಹಳಬರು ಎಂಬ ಪ್ರಶ್ನೆಯೇ ಇಲ್ಲ. ಅಭಿವೃದ್ದಿ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿರುವ ಸಚಿವರು ಹಾಗೂ ಶಾಸಕ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ.
ಈಗಾಗಲೇ ಬಿಜೆಪಿಯಲ್ಲಿ 75ಕ್ಕೂ ಹೆಚ್ಚು ವರ್ಷ ಮೀರಿದವರಿಗೆ ಟಿಕೆಟ್ ಸಿಗುವುದಿಲ್ಲ. ಇನ್ನು ಕ್ಷೇತ್ರದಲ್ಲಿ ಕಾರ್ಯಕರ್ತ ಹಾಗೂ ಜನರ ನಡುವಿನ ಒಡನಾಟವೂ ಪ್ರಮುಖ ಮಾನದಂಡವಾಗಿರುತ್ತೆ. ಇನ್ನೂ ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದರೆ ಟಿಕೆಟ್ ಸಿಗೋದೇ ಇಲ್ಲ. ಇನ್ನೂ ಪ್ರಮುಖವಾಗಿ ಸರ್ವೆ ಆಧಾರಿತವಾಗಿ ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ನೀಡಲಾಗುವುದು ಎಂದು ಹೇಳಲಾಗಿದೆ.

ಟಿಕೆಟ್ ಆಕಾಂಕ್ಷಿಗಳಿಗೆ ಗೊಂದಲ;ಶುರುವಾಗಿದೆ ತಳಮಳ
ಈಗಾಗಲೇ ರಾಜ್ಯ ಬಿಜೆಪಿಯಲ್ಲಿ ಗುಜರಾತ್ ಮಾದರಿ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದ್ದು, ಹಲವೆಡೆ ನಮಗೆ ಈ ಬಾರಿ ಟಿಕೆಟ್ ಸಿಗುತ್ತೋ ಇಲ್ವೋ ಎನ್ನುವ ಗೊಂದಲದಲ್ಲಿ ಅಭ್ಯರ್ಥಿಗಳಿದ್ದು, ತಮಗೆ ಟಿಕೆಟ್ ಸಿಗದೇ ಇದ್ದರೆ ತಮ್ಮ ತಮ್ಮ ಕುಟುಂಬಸ್ಥರಿಗೆ ಟಿಕೆಟ್ ಕೊಡಿಸುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ.
ಈಗಾಗಲೇ ಟಿಕೆಟ್ ವಿಚಾರದಲ್ಲಿ ಹೈಕಮಾಂಡ್ ನಾಯಕರನ್ನ ಹಲವು ನಾಯಕರು ಸಂಪರ್ಕಿಸಿದ್ದು, ಕ್ಷೇತ್ರದಲ್ಲಿ ಬಿರುಸಿನ ಓಡಾಟವನ್ನ ನಡೆಸುತ್ತಿದ್ದಾರೆ. ಇನ್ನು ಕೆಲ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದಾರೆ. ಇತ್ತ ಕೆಲ ಹಿರಿಯ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಪಡೆಯುವ ತವಕದಲ್ಲಿರುವ ನಾಯಕರಲ್ಲಿ ತಳಮಳ ಶುರುವಾಗಿದೆ

ಗುಜರಾತ್ ಮಾಡೆಲ್; ಬಿಜೆಪಿಯಲ್ಲಿ ಬಂಡಾಯ?
ಇನ್ನೂ ರಾಜ್ಯ ಬಿಜೆಪಿಯಲ್ಲಿ ಗುಜರಾತ್ ಮಾದರಿ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದ್ದು, ಒಂದು ವೇಳೆ ಆ ಮಾದರಿ ಈ ಚುನಾವಣೆಯಲ್ಲಿ ಜಾರಿಯಾಗಿ ಸಾಕಷ್ಟು ಜನ ಹಿರಿಯರಿಗೆ ಟಿಕೆಟ್ ಕೈ ತಪ್ಪಿದ್ದೆ ಆದರೆ, ಸಾಕಷ್ಟು ಜನ ನಾಯಕರು ಬಂಡಾಯ ಹೇಳುವ ಸಾಧ್ಯತೆ ಹೆಚ್ಚು. ಈಗಾಗಲೇ ಅನ್ಯ ಪಕ್ಷಗಳಿಂದ ವಲಸೆ ಬಂದ ನಾಯಕರು ಸಹ ಟಿಕೆಟ್ ಗಾಗಿ ಲಾಭಿ ನಡೆಸಿದ್ದು, ಟಿಕೆಟ್ ವಿಚಾರವಾಗಿ ಮೂಲ ಬಿಜೆಪಿಗರು ಹಾಗೂ ವಲಸೆ ಬಿಜೆಪಿಗರ ನಡುವೆ ಜಿದ್ದಾಜಿದ್ದಿ ಏರ್ಪಡುವ ಸಾಧ್ಯತೆ ಹೆಚ್ಚಾಗಿದೆ. ಒಂದು ವೇಳೆ ಟಿಕೆಟ್ ಕೈತಪ್ಪಿದರೇ ಬಂಡಾಯ ಹೇಳುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.












Click it and Unblock the Notifications