ದ್ವೇಷದ ಬಜಾರಿನಲ್ಲಿ ಪ್ರೀತಿಯ ಅಂಗಡಿ ತೆರೆದ ಕಾಂಗ್ರೆಸ್ ಸರ್ಕಾರ: ಬಿಜೆಪಿ
ಬೆಂಗಳೂರು, ಸೆಪ್ಟಂಬರ್ 07: ದ್ವೇಷದ ಬಜಾರಿನಲ್ಲಿ ಪ್ರೀತಿಯ ಅಂಗಡಿ ತೆರೆದಿದ್ದೇವೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿದ್ದು, ಬರೀ ಬೊಗಳೆ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ತನ್ನ ನೂರು ದಿನಗಳ ಆಡಳಿತದಲ್ಲಿ ಸಾಬೀತುಪಡಿಸಿದೆ ಎಂದು ರೈತರ ಆತ್ಮಹತ್ಯೆ, ಭ್ರಷ್ಟಾಚಾರ ಇನ್ನಿತರ ವಿಚಾರ ಪ್ರಸ್ತಾಪಿಸಿ ಕರ್ನಾಟಕ ರಾಜ್ಯ ಬಿಜೆಪಿ ಕಿಡಿ ಕಾರಿದೆ.
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಸರಣಿ ಟ್ವೀಟ್ ಮಾಡಿ, ಭ್ರಷ್ಟಾಚಾರ ಹಾಗೂ ದ್ವೇಷದ ರಾಜಕಾರಣವೊಂದನ್ನು ಹೊರತುಪಡಿಸಿ ಉಳಿದೆಲ್ಲಾ ವಲಯಗಳಲ್ಲಿಯೂ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದೆ.

ಸಿದ್ದರಾಮಯ್ಯ ಅವರ ಸರ್ಕಾರದ ಕೇವಲ ಮೂರು ತಿಂಗಳ ಅವಧಿಯಲ್ಲಿ, ರಾಜ್ಯದಲ್ಲಿ 'ನೂರಕ್ಕೂ ಹೆಚ್ಚು ರೈತರು ಆತ್ಮಹತ್ಯೆ' ಮಾಡಿಕೊಂಡಿದ್ದಾರೆ. ಆದರೆ ರೈತರ ಆತ್ಮಹತ್ಯೆಯ ವಿಷಯದಲ್ಲಿಯೂ ಉದ್ದಟತನ ತೋರಿ, ನಾಡಿನ ರೈತ ಸಮುದಾಯವನ್ನು ಅವಮಾನಿಸುವ ಕೆಟ್ಟ ಸಂಪ್ರದಾಯವನ್ನು ಕಾಂಗ್ರೆಸ್ ಆರಂಭಿಸಿದೆ.
ಕಾಂಗ್ರೆಸ್ ಸರ್ಕಾರ ಬಂದರೆ ರಾಜ್ಯದಲ್ಲಿ ಬರಗಾಲ ಖಚಿತ (ನಿಕ್ಕಿ) ಎಂಬಂತಾಗಿದೆ. ಆದರೆ ಈ ಬಾರಿ ತುಸು ಹೆಚ್ಚೇ ಎಂಬಂತೆ ತನ್ನ ಕರಾಳ ಛಾಯೆಯನ್ನು ರಾಜ್ಯದಲ್ಲಿ ಬರ ಬೀರಿದೆ. ಸಿದ್ದರಾಮಯ್ಯ ಅವರ ಸರ್ಕಾರ, ರಾಜ್ಯದಲ್ಲಿ ಬರ ಘೋಷಿಸಲು ಮೀನಾಮೇಷ ಎಣಿಸುತ್ತಾ, ದೆಹಲಿಯ ಹೈಕಮಾಂಡ್‌ನ ಗ್ರೀನ್ ಸಿಗ್ನಲ್‌ಗೆ ಎದುರು ನೋಡುತ್ತಿರುವುದು ರಾಜ್ಯದ ದುರ್ದೈವ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಇದಲ್ಲದೇ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ, ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಮಾಸಿಕ ₹500 ಸಹಾಯಧನ ಹಾಗೂ ರಾಜ್ಯದ ಒಟ್ಟು 24.67 ಲಕ್ಷ ಹಾಲು ಉತ್ಪಾದಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ಥಾಪಿಸಿದ್ದ “ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್”ಗೂ ಸಹ ಕೈ ಸರ್ಕಾರ ಎಳ್ಳುನೀರು ಬಿಟ್ಟಿದೆ.
— BJP Karnataka (@BJP4Karnataka) September 7, 2023
ಕಾಂಗ್ರೆಸ್ ಸರ್ಕಾರ ತನ್ನ ದ್ವೇಷದ ರಾಜಕಾರಣವನ್ನು…
ಲೋಡ್ ಶೆಡ್ಡಿಂಗ್: ಬದುಕು ಬರ್ಬಾದ್
ಗಾಯದ ಮೇಲೆ ಬರೆ ಎಂಬಂತೆ, ರೈತ ತಾನು ಬೆಳೆದ ಬೆಳೆಗಳನ್ನು ರಕ್ಷಿಸಲು ಬೋರ್‌ವೆಲ್, ತೆರೆದ ಬಾವಿಯ ಮೂಲಕ ನೀರು ಹಾಯಿಸಲು ಮುಂದಾದರೆ, ಹಗಲು ಹೊತ್ತಿನಲ್ಲಿಯೇ ಬರೋಬ್ಬರಿ 7 ಗಂಟೆ ಲೋಡ್ ಶೆಡ್ಡಿಂಗ್ ಜಾರಿ ಮಾಡಿ, ರೈತರ ಬದುಕನ್ನು ಬರ್ಬಾದ್ ಮಾಡುವ ಎಲ್ಲಾ ಪ್ರಯತ್ನ ಕಾಂಗ್ರೆಸ್ ಸರ್ಕಾರದಿಂದ ನಡೆಯುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಕಾಂಗ್ರೆಸ್ ಸರ್ಕಾರದ ಕಾಲ್ಗುಣದಿಂದ ರಾಜ್ಯದ ಯಾವ ಜಲಾಶಯಗಳು ಈ ಬಾರಿ ಭರ್ತಿಯಾಗಿಲ್ಲ. ನಾಡಿನ ರೈತರು ಈಗಾಗಲೇ ಹಿಂಗಾರು ಬೆಳೆಯನ್ನು ಕೈ ಬಿಟ್ಟಿದ್ದಾರೆ. ಮುಂಗಾರಿನ ಬೆಳೆಯನ್ನಾದರೂ ಜತನದಿಂದ ಕಾಪಾಡಿಕೊಳ್ಳಲು ಮುಂದಾದರೆ, ಅಲ್ಲಿಯೂ ಸಹ ಕಾಂಗ್ರೆಸ್ ಸರ್ಕಾರ ರಾಜ್ಯದ ಜಲಾಶಯಗಳ ನೀರನ್ನು ತನ್ನ ಸ್ವಾರ್ಥದ ಮೈತ್ರಿಕೂಟದ ಸದಸ್ಯರನ್ನು ಓಲೈಸಲು ತಮಿಳುನಾಡಿಗೆ ಹರಿಸುತ್ತಿದೆ.

'ಪಿಎಂ ಕಿಸಾನ್ ಸಮ್ಮಾನ್ ನಿಧಿ' ತಡೆ ಹಿಡಿದ ಕಾಂಗ್ರೆಸ್
ಮಳೆಯನ್ನಷ್ಟೆ ನಂಬಿಕೊಂಡು ರಾಜ್ಯದ ರೈತರು ಕೂರಬಾರದು, ಅವರು ಸಹ ಇತರರಂತೆ ಸ್ವಾವಲಂಬನೆಯ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು, ರೈತರ ಆದಾಯವನ್ನು ದ್ವಿಗುಣಗೊಳಿಸಬೇಕು ಎಂಬ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಆರಂಭಿಸಿದ್ದ ಎಲ್ಲಾ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ತನ್ನ ದ್ವೇಷದ ರಾಜಕಾರಣಕ್ಕಾಗಿ ನಿಲ್ಲಿಸಿದೆ.
ರಾಜ್ಯದ 51 ಲಕ್ಷ ರೈತರಿಗೆ ವರದಾನವಾಗಿದ್ದ 'ಪಿಎಂ ಕಿಸಾನ್ ಸಮ್ಮಾನ್ ನಿಧಿ'ಯ ಯೋಜನೆಗೆ ರಾಜ್ಯ ನೀಡುತ್ತಿದ್ದ ಕಂತುಗಳನ್ನು ತಡೆ ಹಿಡಿದಿದೆ ಎಂದು ಬಿಜೆಪಿ ತಿಳಿಸಿದೆ.
'ರೈತ ವಿದ್ಯಾನಿಧಿ'-'ಭೂ ಸಿರಿ' ಸ್ಥಗಿತ: ಬಿಜೆಪಿ ಆಕ್ರೋಶ
ರೈತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ 'ರೈತ ವಿದ್ಯಾನಿಧಿ' ಯೋಜನೆಯನ್ನು ದ್ವೇಷದ ಕಾರಣಕ್ಕೆ ನಿಲ್ಲಿಸಿದೆ. ಈ ಯೋಜನೆಯು ವಾರ್ಷಿಕ '11 ಲಕ್ಷ ರೈತ ಕುಟುಂಬದ' ವಿದ್ಯಾರ್ಥಿಗಳಿಗೆ ವರದಾನವಾಗಿತ್ತು.
ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ್ದ ರಾಜ್ಯದ 50 ಲಕ್ಷ ರೈತರಿಗೆ 'ಭೂ ಸಿರಿ' ಯೋಜನೆಯಲ್ಲಿ ₹10 ಸಾವಿರ ಸಹಾಯಧನ ನೀಡುತ್ತಿದ್ದ ಯೋಜನೆಯನ್ನು ಸಹ ಸಿದ್ದರಾಮಯ್ಯ ಅವರ ಸರ್ಕಾರ ರದ್ದುಗೊಳಿಸಿ ತನ್ನ ರೈತ ವಿರೋಧಿ ನೀತಿಯನ್ನು ಪ್ರದರ್ಶಿಸಿದೆ ಎಂದು ಬಿಜೆಪಿ ಟೀಕಿಸಿದೆ.
ಗೋಶಾಲೆ ಮೇಲೆ ಸರ್ಕಾರದ ಕೆಟ್ಟು ಕಣ್ಣು
ಗೋ ಹತ್ಯೆಯನ್ನು ತಡೆಯಲು ಹಾಗೂ ಜಾನುವಾರು ಸಂತತಿಯನ್ನು ಬೆಳೆಸಲು ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ 'ಜಿಲ್ಲೆಗೊಂದು ಗೋ ಶಾಲೆ' ಯೋಜನೆಯ ಮೇಲೆಯೂ ಸಹ 'ಕೈ' ಸರ್ಕಾರದ ಕೆಟ್ಟ ಕಣ್ಣು ಬಿದ್ದಿದೆ. ಅಕ್ರಮ ಗೋವು ಸಾಗಾಣಿಕೆದಾರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಗೋ ಶಾಲೆ ಯೋಜನೆಯನ್ನು ರದ್ದುಪಡಿಸಿದೆ.
ಇದಲ್ಲದೇ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ, ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಮಾಸಿಕ ₹500 ಸಹಾಯಧನ ಹಾಗೂ ರಾಜ್ಯದ ಒಟ್ಟು 24.67 ಲಕ್ಷ ಹಾಲು ಉತ್ಪಾದಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ಥಾಪಿಸಿದ್ದ 'ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್'ಗೂ ಸಹ ರಾಜ್ಯ ಸರ್ಕಾರ ಎಳ್ಳುನೀರು ಬಿಟ್ಟಿದೆ.
ಕಾಂಗ್ರೆಸ್ ಸರ್ಕಾರ ತನ್ನ ದ್ವೇಷದ ರಾಜಕಾರಣ ಮಾಡಲು ಕೈ ಬಿಟ್ಟಿರುವ ರೈತ ಪರ ಯೋಜನೆಗಳನ್ನು ಮುಂದುವರೆಸಬೇಕು ಹಾಗೂ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾದ್ಯಂತ ರೈತರ ಪರ ಹೋರಾಟ ನಡೆಸಲಿದೆ ಬಿಜೆಪಿ ಎಚ್ಚರಿಸಿದೆ.












Click it and Unblock the Notifications