ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ 4% ಮೀಸಲು: ಬಿಜೆಪಿ ಸುಪ್ರೀಂ ಕೋರ್ಟ್‌ಗೆ?
ಬೆಂಗಳೂರು, ಮಾರ್ಚ್ 17: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಧರ್ಮಾಧಾರಿತವಾಗಿ ಮೀಸಲಾತಿ ಕಲ್ಪಿಸುತ್ತಿದೆ. ಇದು ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಕ್ಕೆ ಚಿಂತನೆ, ಮಾರ್ಗದರ್ಶನಕ್ಕೆ ವಿರುದ್ಧವಾದದ್ದು ಎಂದು ಕರ್ನಾಟಕ ಬಿಜೆಪಿ ದೂರದೆ. ಕಾಂಗ್ರೆಸ್ ಸಂವಿಧಾನವನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತಿದೆ ಎಂದು ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇಕಡಾ 4ರಷ್ಟು ಮೀಸಲಾತಿ ನೀಡುವ ನಿರ್ಧಾರವನ್ನು ಖಂಡಿಸಿದೆ.
ಬಜೆಟ್ ಅಧಿವೇಶನ ನಡೆಯುತ್ತಿದೆ. ಸರ್ಕಾರದ ನಿರ್ಧಾರದ ವಿರುದ್ಧ ಬಿಜೆಪಿ ನಾಯಕರು ಸದನದ ಒಳಗೆ ಮತ್ತು ಹೊರಗೆ ಹೋರಾಟ ತೀವ್ರಗೊಳಿಸಲು ಮುಂದಾಗಿದೆ. ಸೋಮವಾರವು ತೀವ್ರ ಹೋರಾಟ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮುಸಲ್ಮಾನರಿಗೆ ಸರ್ಕಾರಿ ಗುತ್ತಿಗೆಗಳಲ್ಲಿ 4% ಮೀಸಲಾತಿ ಕಲ್ಪಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಬಿಜೆಪಿ ದೂರಿದೆ.

ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರಿದ ಬಿಜೆಪಿಯು, ಸಂವಿಧಾನದ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ನಂಬಿಕೆ ಇಲ್ಲ. ಅವರು ಸಂವಿಧಾನವನ್ನು ಗೌರವಿಸುವ ಹಾಗೆ ನಾಟಕ ಮಾಡುತ್ತಾರೆ ಎಂದು ನಾವು ಆರೋಪಿಸುತ್ತಲೇ ಬಂದಿದ್ದೇವೆ. ಅದು ಈಗ ರುಜುವಾತಾಗುತ್ತಿದೆ.
ಮಿಸ್ಟರ್ ಪಾರ್ಟ್ ಟೈಮ್ ಪೊಲಿಟಿಶಿಯನ್ ರಾಹುಲ್ ಗಾಂಧಿಯವರೇ ಸಂವಿಧಾನವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವುದರಿಂದ ಏನೂ ಲಾಭವಿಲ್ಲ, ಅದರಂತೆ ನಡೆದುಕೊಳ್ಳಿ. ಕಾಂಗ್ರೆಸ್ಸಿನ ಸಂವಿಧಾನ ವಿರೋಧಿ ನಿಲುವನ್ನು ಬಿಜೆಪಿ ಖಂಡಿಸುತ್ತದೆ ಮತ್ತು ನ್ಯಾಯಾಲಯದಲ್ಲಿ ಹೋರಾಡಲಿದೆ. ಕರ್ನಾಟಕ ರಾಜ್ಯವೀಗ ಮುಸಲ್ಮಾನರ ಅಶಾಂತಿಯ ತೋಟವಾಗಿ ಮಾರ್ಪಟ್ಟಿದೆ ಎಂದು ದೂರಿದೆ.
ಮೀಸಲಾತಿ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ
ಕರ್ನಾಟಕದಲ್ಲಿ ಕಾಂಗ್ರೆಸ್ ತುಷ್ಟೀಕರಣ ಮಾಡುತ್ತಲೇ ಬಂದಿದೆ ಎಂದು ಹಿಂದಿನಿಂದಲೂ ಬಿಜೆಪಿ ಆರೋಪಿಸುತ್ತಿದೆ. ಇದೀಗ ಮುಸ್ಲಿಮರಿಗೆ ಮೀಸಲಾತಿ ನೀಡಲು ಹೊರಟಿದ್ದನ್ನು ಕಡ್ಡಿ ಮುರಿದಂತೆ ವಿರೋಧಿಸುತ್ತಿದೆ. ಈ ಸಂಬಂಧ ಸದನದ ಹೊರಗೆ ಮತ್ತು ಒಳಗೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಪರಿಷತ್ ಪ್ರತಿ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ತೀವ್ರ ಹೋರಾಟ ನಡೆಸಲಾಗಿದೆ. ಈ ಹೋರಾಟವನ್ನು ಮುಂದುವರಿಸಲು ನಿರ್ಧರಿಸಿದೆ.
ಇದೇ ವಿಚಾರವಾಗಿ ಪ್ರತಿಕ್ರಯಿಸಿದ ಬಿಜೆಪಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು, ಮುಸ್ಲಿಮರಿಗೆ ಸರ್ಕಾರಿ ಗುತ್ತಿಗೆಗಳಲ್ಲಿ ನೀಡುವ ಮೀಸಲಾತಿ ವಿರುದ್ಧ ರಾಜ್ಯದಲ್ಲಿ ಬಿಜೆಪಿ ಹೋರಾಟ ತೀವ್ರಗೊಳಿಸಲಿದೆ. ಇದೆಲ್ಲವನ್ನು ಸುಪ್ರೀಂ ಕೋರ್ಟ್ ನೋಡಿಕೊಳ್ಳಲಿದೆ ಎಂದಿದ್ದಾರೆ. ಈ ಮೂಲಕ ಸರ್ಕಾರ ಪ್ರತಿಭಟನೆಗೆ ಬಗ್ಗದಿದ್ದರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ, ಕಾನೂನು ಹೋರಾಟ ನಡೆಸುವುದಾಗಿ ಯಡಿಯೂರಪ್ಪ ಅವರು ಸುಳಿವು ನೀಡಿದ್ದಾರೆ. ಈ ಬಗ್ಗೆ ಚರ್ಚಿಸು ಸೂಕ್ತ ನಿರ್ಣಯ ಬಿಜೆಪಿ ತಿಳಿಸಲಿದೆ.












Click it and Unblock the Notifications