ಸಕಲೇಶಪುರ ಶಾಸಕ ಎಚ್.ಕೆ. ಕುಮಾರಸ್ವಾಮಿಗೆ ಉದಯಗೌಡ ಮೂಲಕ ಬಿಜೆಪಿ ಆಫರ್
ಬೆಂಗಳೂರು, ಸೆಪ್ಟೆಂಬರ್ 17: ಸಕಲೇಶಪುರದ ಜೆಡಿಎಸ್ ಶಾಸಕ ಎಚ್.ಕೆ. ಕುಮಾರಸ್ವಾಮಿ ಅವರಿಗೆ ಪಕ್ಷ ಸೇರ್ಪಡೆಯಾಗುವಂತೆ ಬಿಜೆಪಿ ಆಹ್ವಾನ ನೀಡಿತ್ತು ಎಂದು ಆರೋಪಿಸಲಾಗಿದೆ.
ಎಚ್.ಕೆ. ಕುಮಾರಸ್ವಾಮಿ ಅವರನ್ನು ನೇರವಾಗಿ ಸಂಪರ್ಕಿಸದೆ ಅವರ ಪತ್ನಿ ಚಂಚಲಾ ಅವರ ಮೂಲಕ ಅವರನ್ನು ಪಕ್ಷಕ್ಕೆ ಸೆಳೆಯುವ ಪ್ರಯತ್ನವನ್ನು ಬಿಜೆಪಿ ನಡೆಸಿತ್ತು ಎಂದು ದೂರಲಾಗಿದೆ.
ಸತೀಶ್ ಮತ್ತು ರಮೇಶ್ ಜಾರಕಿಹೊಳಿ ಸಹೋದರರು ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡಿದ್ದರಿಂದ ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆಯಾಗುವ ಸೂಚನೆ ದೊರೆತಿತ್ತು. ಈ ಕೂಡಲೇ ಕಾರ್ಯೋನ್ಮುಖರಾದ ಬಿಜೆಪಿ ಮುಖಂಡರು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಕೆಲವು ಶಾಸಕರನ್ನು ಸೆಳೆಯಲು ಪ್ರಯತ್ನಿಸಿದ್ದಾರೆ ಎಂದು ಹೇಳಲಾಗಿದೆ.

ಎಚ್ ಕೆ ಕುಮಾರಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಉದಯ್ ಗೌಡ, ಜೆಡಿಎಸ್ ತೊರೆದು ಬಿಜೆಪಿ ಸೇರುವಂತೆ ಚಂಚಲಾ ಅವರ ಮೂಲಕ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಿದ್ದರು. ಗಣೇಶ ಚತುರ್ಥಿಯೆಂದೇ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದರು. ಆದರೆ, ಯಾವುದೇ ಕಾರಣಕ್ಕೂ ಜೆಡಿಎಸ್ ತೊರೆಯುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ ಬಳಿಕ ಅವರು ವಾಪಸ್ ಆಗಿದ್ದರು ಎಂದು ಹೇಳಲಾಗಿದೆ.
ಹಾಲಿ ಸರ್ಕಾರ ಉರುಳಿಸಿ ಬಿಜೆಪಿಯು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ತನ್ನೆಡೆಗೆ ಸೆಳೆದುಕೊಂಡು ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.












Click it and Unblock the Notifications