ಅಭ್ಯರ್ಥಿಯ ಕೆಲಸ, ನಡವಳಿಕೆ ಆಧಾರದ ಮೇಲೆ ಚುನಾವಣಾ ಸಮಿತಿ ಟಿಕೆಟ್ ನೀಡಲಿದೆ-ಸಿ.ಟಿ ರವಿ
ಬೆಂಗಳೂರು, ಡಿಸೆಂಬರ್ 13: ನನಗೆ ನಮ್ಮ ಅಭಿವೃದ್ಧಿ ಯಾತ್ರೆಗೆ ಕಾಂಗ್ರೆಸ್‌ನವರ ಯಾತ್ರೆ ವಿರೋಧಿ ಯಾತ್ರೆ ಅನಿಸಲ್ಲ. ನಮ್ಮ ಯೋಜನೆ ವಿರುದ್ಧ ಗೆದ್ದು ಬರುವ ತಾಕತ್ತು ಯಾರಿಗೂ ಇಲ್ಲ. ನಾವು ನೋಡದಿರುವ ಕಾಂಗ್ರೆಸ್, ಸಿದ್ದರಾಮಯ್ಯ, ಡಿಕೆಶಿ, ಖರ್ಗೆ ಏನಲ್ಲ. ಅವರ ಅಂಗಳದಲ್ಲೇ ಅವರನ್ನು ಸೋಲಿಸಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರ್ಗಿಯಲ್ಲಿ ಮಾಲ್ಲಿಕಾರ್ಜುನ್ ಖರ್ಗೆ ಅವರನ್ನು ಮಣಿಸಿದ್ದೇವೆ.
ಈಗ ಅವರಿಗೆ ಅತಿಮಾನುಷ ಶಕ್ತಿ ಬಂದಿದೆಯಾ..? ಚಾಮುಂಡಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋತರು, ಅವರಿಗೆ ಈಗ ಶಕ್ತಿ ಬಂದಿದೆಯಾ..? ಡಿಕೆಶಿ ಅವರಿಗೆ ಆ ದಿನಗಳ ಶಕ್ತಿ ಬಂದಿದೆಯಾ..? ಹೆಡ್ ಬುಷ್ ಸಿನಿಮಾ ನೋಡಿದರೆ ಅದು ಯಾರಿಗೆ ಸಂಬಂಧಿಸಿದ ವಿಚಾರ ಎನ್ನುವುದು ಗೊತ್ತಾಗಲಿದೆ ಎಂದರು.

ಮೊದಲಿನಿಂದಲೂ ನ್ಯಾಯಯುತವಾಗಿ ಬಿಜೆಪಿ ಕೆಲಸ ಮಾಡುತ್ತಿದೆ. ಒಕ್ಕಲಿಗ ಮತ್ತು ಇತರೆ ಸಮುದಾಯ ಮೀಸಲಾತಿ ಕೊಡುವ ಕೆಲಸವನ್ನು ಸಹ ಬಿಜೆಪಿ ಮಾಡಲಿದೆ. ಇದರ ಜೊತೆಗೆ ಸುಪ್ರೀಂ ಕೋರ್ಟ್ ನಿಯಮ ಪಾಲನೆ ಕೂಡ ಮಾಡಬೇಕಿದೆ. ನ್ಯಾಯಯುತವಾಗಿ ಮಾಡಬೇಕಾಗಿರುವುದನ್ನು, ನಾವು ಮಾಡುತ್ತೇವೆ ಎಂದರು.
ರಾಜ್ಯದಲ್ಲಿ ಗುಜರಾತ್ ಮಾದರಿ ವಿಚಾರವಾಗಿ ಮಾತನಾಡಿದ ಅವರು, ಗುಜರಾತ್ ಮಾದರಿ ಅಂದರೆ ಬರಿ ಚುನಾವಣೆ ಮಾದರಿ ಅಲ್ಲ. ಅಭಿವೃದ್ಧಿ ಮತ್ತು ಪ್ರಾಮಾಣಿಕ ನೇತೃತ್ವ. ಆ ಮಾದರಿಯನ್ನು ಟೀಕಿಸುತ್ತಿದ್ದ ಕಾಂಗ್ರೆಸ್ ಸದ್ಯ ಅದನ್ನು ಅಳವಡಿಸಿಕೊಳ್ಳಲು ಹೊರಟಿರುವುದು ಸಕಾರಾತ್ಮಕ ಭಾವನೆ. ಗುಜರಾತ್ ಫಲಿತಾಂಶ ನಮಗೆ ಆತ್ಮವಿಶ್ವಾಸ ಹೆಚ್ಚಿಸಿದೆ. ಜೊತೆಯಲ್ಲಿ ಎಚ್ಚರಿಕೆಯನ್ನು ಕೂಡ ನೀಡಿದೆ.
ಹಿಮಾಚಲದಲ್ಲಿ ಕೂದಲೆಳೆಯಲ್ಲಿ ಸೋತಿದ್ದೇವೆ ಎಂದರು.
ಚುನಾವಣೆ ಗೆಲುವೊಂದೇ ನಮ್ಮ ಮಾನದಂಡ ಅಲ್ಲ. ಗೆಲುವು ಮುಖ್ಯ. ಆಡಳಿತ ನಡೆಸುವುದು ನಮ್ಮ ಮಾನದಂಡ. ಕೆಲ ಶಾಸಕರು ಉತ್ತಮ ಕೆಲಸ ಮಾಡಿದ್ದಾರೆ. ಆದರೆ ನಡವಳಿಕೆಯಲ್ಲಿ ಸೋತಿದ್ದಾರೆ. ಉತ್ತಮ ಕೆಲಸದ ಜೊತೆ ನಡವಳಿಕೆಯೂ ಮುಖ್ಯ. ಉತ್ತಮ ಅಭ್ಯರ್ಥಿ ಜೊತೆ, ನಡವಳಿಕೆಯೂ ಮುಖ್ಯ. ಅದರ ಆಧಾರದ ಮೇಲೆ ಚುನಾವಣಾ ಸಮಿತಿ ಟಿಕೆಟ್ ನೀಡಲಿದೆ. ಸಣ್ಣ ಸಮುದಾಯಕ್ಕೂ ಟಿಕೆಟ್ ಕೊಡಬೇಕು ಎನ್ನುವುದರಲ್ಲಿ ನಾನು ಮೊದಲಿಗ. ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೂ ಆದ್ಯತೆ ಕೊಡಬೇಕು ಎಂದು ಹೇಳಿದರು.












Click it and Unblock the Notifications