'ಸಂಸತ್ತಿನಲ್ಲಿ ಕರ್ನಾಟಕ ನೀರಾವರಿ, ನದಿಗಳ ಜೋಡಣೆ ಯೋಜನೆಗಳ ಅನುಮತಿ ನೀಡಿ'
ದೆಹಲಿ, ಮಾರ್ಚ್ 20: ಕರ್ನಾಟಕದ ರಾಜ್ಯದಲ್ಲಿ ಕೆಲವು ನದಿಗಳ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಲಕ್ಷಾಂತರ ಜನರಿಗೆ ನೀರೊದಗಿಸುವ ಯೋಜನೆಗಳು, ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು ಎಂದು ರಾಜ್ಯ ಬಿಜೆಪಿ ಸಂಸದರು ಪ್ರಸ್ತಾಪಿಸಿದ್ದಾರೆ. ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಲು, ಕರ್ನಾಟಕಕ್ಕೆ ಅವಕಾಶ ಮಾಡಿಕೊಡಲು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಸಂಸತ್ತಿನಲ್ಲಿ ಜಲಶಕ್ತಿ ಇಲಾಖೆಯ ಬೇಡಿಕೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಸುಪ್ರೀಂ ಕೋರ್ಟ್ ಗೆ ಅಂತರಾಜ್ಯ ಜಲ ವಿವಾದದ ಕಾನೂನಿನ ಬಗ್ಗೆ ಸ್ಪಷ್ಟವಾಗಿ ತಿಳಿಸಿ ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಕೋರಿದರು.

ಕರ್ನಾಟಕದ ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೆ ನ್ಯಾಯ ಮಂಡಳಿ ಆದೇಶವಾಗಿ 15 ವರ್ಷ ಕಳೆದಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣಾ ರಾಜ್ಯಗಳ ನಡುವಿನ ನೀರಿನ ಹಂಚಿಕೆ ಗೊಂದಲದಿಂದ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ಸುಪ್ರೀಂ ಕೋರ್ಟ್ ಗೆ ಅಂತಾರಾಜ್ಯ ಜಲ ವಿವಾದದ ಕಾನೂನಿನ ಬಗ್ಗೆ ಸ್ಪಷ್ಟವಾಗಿ ತಿಳಿಸಿ ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಈ ಯೋಜನೆಯಲ್ಲಿ ಕರ್ನಾಟಕ ಮಧ್ಯಂತರ ರಾಜ್ಯವಾಗಿದೆ. ಮಹಾರಾಷ್ಟ್ರದವರು ನೀರು ಕೊಡುವುದಿಲ್ಲ. ಆಂಧ್ರ ಪ್ರದೇಶ ಹಾಗೂ ತೆಲಂಗಾಣಾದವರು ನೀರು ಬೇಕೆನ್ನುತ್ತಾರೆ. ನಮ್ಮ ಪರಿಸ್ಥಿತಿ ಹೇಳತೀರದು. 2010 ರಲ್ಲಿ ಕೃಷ್ಣಾ ನ್ಯಾಯಮಂಡಳಿ ಆದೇಶ ನೀಡಲಾಗಿದೆ. ಈಗ 2025 ಕ್ಕೆ ಬಂದಿದ್ದೇವೆ. ಈಗಲ್ಲೂ ನೋಟಿಫಿಕೇಶನ್ ಆಗಿಲ್ಲ.

ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀಟರ್ ಗೆ ಹೆಚ್ಚಳ ಮಾಡುವುದು ನಮ್ಮ ಪ್ರಸ್ತಾವನೆ ಅಲ್ಲ, ಅದು ನಮ್ಮ ಹಕ್ಕು. ಅದು ನ್ಯಾಯಮಂಡಳಿ ತೀರ್ಮಾನವಾಗಿದೆ. ಇದರಿಂದ ಮಹಾರಾಷ್ಟ್ರದಲ್ಲಿ ಪ್ರವಾಹ ಉಂಟಾಗುವುದಿಲ್ಲ. ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳದಿಂದ ತೆಲಂಗಾಣಾ, ಆಂಧ್ರ ಪ್ರದೇಶಕ್ಕೂ ಅನುಕೂಲವಾಗಲಿದೆ. ಆಂಧ್ರ ಹಾಗೂ ತೆಲಂಗಾಣ ನಡುವೆ ನೀರು ಹಂಚಿಕೆಯ ಸಮಸ್ಯೆ ಉದ್ಭವವಾಗಿದೆ. ಅದನ್ನು ಅವರು ಬಗೆ ಹರಿಸಿಕೊಳ್ಳಬೇಕು ಎಂದು ಅವರು ವಿವರಿಸಿದರು.
ಉ.ಕ ಜೀವನಾಡಿ ಮಹದಾಯಿ ಅನುಮತಿ ಬೇಕು
ಮೇಕೆದಾಟು ನಮ್ಮ ಹಕ್ಕು. ಸುಮಾರು ಆರು ವರ್ಷದಿಂದ ಯಾವುದೇ ತೀರ್ಮಾನ ಆಗಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ಮುಂದಾಳತ್ವ ತೆಗೆದುಕೊಂಡು ಸಮಸ್ಯೆ ಬಗೆ ಹರಿಸಲು ಸಿಡಬ್ಲ್ಯುಸಿಗೆ ಮತ್ತು ಸಿಡಬ್ಲ್ಯು ಎಂಎ ಗೆ ನಿರ್ದೇಶನ ನೀಡಬೇಕು. ಅದೇ ರೀತಿ ಮಹಾದಾಯಿ ನ್ಯಾಯಂಮಡಳಿ ಆದೇಶ ಆಗಿದೆ. ಆದರೆ, ಪರಿಸರ ಇಲಾಖೆಯ ಅನುಮತಿ ನೀಡುತ್ತಿಲ್ಲ. ಇದರಿಂದ ಕರ್ನಾಟಕ ರಾಜ್ಯ ಸಮಸ್ಯೆ ಎದುರಿಸುವಂತಾಗಿದೆ.
ಗೋದಾವರಿ, ಮಹಾನದಿ ಕೃಷ್ಣಾ ಕಾವೇರಿ ಜೋಡಣೆಯ ಯೋಜನೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಈ ವಿಚಾರದಲ್ಲಿ ಎನ್ ಡಬ್ಲುಡಿಎಗೆ ಸೂಕ್ತ ನಿರ್ದೇಶನ ನೀಡಿ ಕರ್ನಾಟಕದ ನೀರಿನ ಹಕ್ಕನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.












Click it and Unblock the Notifications