ಯತ್ನಾಳ್ ಉಚ್ಛಾಟನೆ ಬಳಿಕ ರಾಮುಲು ಸೈಲೆಂಟ್, ಪಟ್ಟದ ಆಸೆ ಬಿಟ್ಟು ವಿಜಯೇಂದ್ರಗೆ ಸಾಥ್
ಕಳೆದ ತಿಂಗಳಷ್ಟೇ ಬಿಜೆಪಿ ವಿರುದ್ಧ ಸಿಡಿದಿದ್ದ ಬಿ.ಶ್ರೀರಾಮುಲು ಅವರು ಅಚ್ಚರಿ ನಡೆ ಪ್ರದರ್ಶಿಸಿದ್ದಾರೆ. ಪಕ್ಷದ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಹಾಗು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ಭೇಟಿಯಾಗಿ ಯುಗಾದಿಗೆ ಶುಭಕೋರಿದ್ದಾರೆ. ಈ ಮೂಲಕ ಶ್ರೀರಾಮುಲು ಅವರು ತಮ್ಮ ವರಸೆ ಬದಲಿಸಿದ್ದಾರಾ? ಎಂದು ಚರ್ಚೆಯಾಗುತ್ತಿದೆ. ಪಕ್ಷದ ವಿರುದ್ಧ ಸಿಡಿದಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಛಾಟನೆ ಬಳಿಕ ರಾಮುಲು ಸೈಲೆಂಟ್ ಆಗಿ, ವಿಜಯೇಂದ್ರ ಬೆಂಬಲಕ್ಕೆ ನಿಂತಿದ್ದಾರಾ ಎಂದೂ ಗುಸುಗುಸು ಕೇಳಿಬರುತ್ತಿದೆ.
ಒಂದು ತಿಂಗಳ ಹಿಂದೆಯಷ್ಟೇ ಅವರು ಪಕ್ಷದ ತುಂಬಿದ ಸಭೆಯಲ್ಲೇ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಅಲ್ಲದೆ ವಿಜಯೇಂದ್ರ ಅವರಿಗೆ ಅನುಭವ ಸಾಲದು ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ಗೂ ಇಳಿದಿದ್ದರು. ಇನ್ನು ರಾಜ್ಯದಲ್ಲಿ ಬಿಜೆಪಿಯಲ್ಲಿ ಹಲವು ಸಮಸ್ಯೆಗಳಿವೆ. ಈ ಎಲ್ಲವನ್ನೂ ಹೈಕಮಾಂಡ್ ನಾಯಕರಿಗೆ ತಿಳಿಸಲು ದೆಹಲಿಗೆ ಹೋಗುವುದಾಗಿಯೂ ಹೇಳಿದ್ದರು. ಪರೋಕ್ಷವಾಗಿ ಬಿಎಸ್‌ವೈ ಕುಟುಂಬದ ವಿರುದ್ಧ ತೊಡೆ ತಟ್ಟಿದ್ದ ರಾಮುಲು ಅವರು ಇದೀಗ ಸೈಲೆಂಟ್ ಆಗಿದ್ದಾರೆ. ಇದಕ್ಕೆ ಕಾರಣ ಯತ್ನಾಳ್ ಅವರ ಉಚ್ಛಾಟನೆ ಎಂದು ಹೇಳಲಾಗುತ್ತಿದೆ.

ಬಿಜೆಪಿಯಲ್ಲಿ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಹಲವು ನಾಯಕರು ತೊಡೆ ತಟ್ಟಿದ್ದರು. ಈ ಪೈಕಿ ಯತ್ನಾಳ್, ಬಿಪಿ ಹರೀಶ್, ಕುಮಾರ್ ಬಂಗಾರಪ್ಪ, ಸತೀಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ ಸೇರಿ ಹಲವರು ಇದ್ದರು. ಬಳಿಕ ಶ್ರೀರಾಮುಲು ಅವರು ಕೂಡ ಪಕ್ಷದ ಮೇಲೆ ಬೇಸರಗೊಂಡಿದ್ದರು. ಜೊತೆ ವಿಜಯೇಂದ್ರ ವಿರುದ್ಧವೂ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು ಎಂದು ಹೇಳಲಾಗಿತ್ತು.
ಆ ಸಂದರ್ಭದಲ್ಲಿ ಯತ್ನಾಳ್ ಪರವೂ ಶ್ರೀರಾಮುಲು ಮಾತನಾಡಿ, ವಿಜಯೇಂದ್ರ ಅವರ ವಿರೋಧಿ ಬಣ ಎಂದೇ ಗುರುತಿಸಿಕೊಂಡಿದ್ದರು. ಆದರೆ ಈ ಬಗ್ಗೆ ರಾಮುಲು ಏನೂ ಪ್ರತಿಕ್ರಿಯಿಸಿರಲಿಲ್ಲ. ಬದಲಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ ಎಂದು ಆಸೆ ಕೂಡ ಬಿಚ್ಚಿಟ್ಟಿದ್ದರು. ತುಸು ಬಂಡಾಯ ನಡೆ ತೋರಿದ್ದ ರಾಮುಲು ಇದೀಗ ಯತ್ನಾಳ್ ಉಚ್ಛಾಟನೆ ಬಳಿಕ ವಿಜಯೇಂದ್ರ ಅವರೊಂದಿಗೆ ಹತ್ತಿರವಾಗುವ ಪ್ರಯತ್ನ ಮಾಡಿದ್ದಾರೆ ಎಂದು ಚರ್ಚೆಯಾಗುತ್ತಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಅವರು ನಿನ್ನೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರನ್ನ ಭೇಟಿಯಾಗಿರುವ ಫೋಟೋ ಹಂಚಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿಗಳು, ಪಕ್ಷದ ಹಿರಿಯರು, ಹುಟ್ಟು ಹೋರಾಟಗಾರರಾದಂತಹ ಯಡಿಯೂರಪ್ಪ ಜಿ ಅವರನ್ನು ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರ ಜೊತೆ ಭೇಟಿ ಮಾಡಿ, ಯುಗಾದಿ ಹಬ್ಬದ ಶುಭಾಶಯಗಳನ್ನು ಕೋರಿದೆ. ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ್ತು ಪಕ್ಷ ಸಂಘಟನೆಯ ಬಗ್ಗೆ ಹಲವು ವಿಷಯಗಳ ಬಗ್ಗೆ ಚರ್ಚಿಸಿದೆ ಎಂದು ಶ್ರೀರಾಮುಲು ಪೋಸ್ಟ್ ಮಾಡಿದ್ದಾರೆ.
ಮೊನ್ನೆಯಷ್ಟೇ ಯತ್ನಾಳ್ ಅವರ ಉಚ್ಛಾಟನೆ ಮರುಪರಿಶೀಲಿಸುವಂತೆ ಹೈಕಮಾಂಡ್‌ಗೆ ಕೋರಿದ್ದ ಅವರು, ಬಸನಗೌಡ ಯತ್ನಾಳ್ ಅವರ ಬಗ್ಗೆ ಹೇಳಿಕೆ ನೀಡದಿರಲು ಬಿಜೆಪಿ ಮುಖಂಡರು ನಿರ್ಧರಿಸಿದ್ದಾರೆ ಎನ್ನುವ ಮೂಲಕ ಬಣ ಬದಲಿಸಿದ್ದಾರೆ ಎಂಬ ನಡೆ ತೋರಿದ್ದಾರೆ. ಯತ್ನಾಳ್ ಉಚ್ಛಾಟನೆಯಿಂದ ರಾಮುಲು ಹೆದರಿದ್ದು, ಇದೇ ಕಾರಣಕ್ಕೆ ಸೈಲೆಂಟಾಗಿ ವಿಜಯೇಂದ್ರ ಬೆನ್ನಿಗೆ ನಿಲ್ಲುವ ಜಾಣ ನಡೆ ಪ್ರದರ್ಶಿಸಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications