ಅಪಾಯಕ್ಕೆ ಸಿಲುಕಿರುವುದು ಕಾರ್ಯಕರ್ತನೇ ಹೊರತು ಯಾವ ನಾಯಕನೂ ಅಲ್ಲ: ಪ್ರತಾಪ್ ಸಿಂಹ
ಬೆಂಗಳೂರು, ಮೇ. 18: ನಮ್ಮ ಪರವಾಗಿ, ಪಕ್ಷದ ಪರವಾಗಿ ದುಡಿಯುವ ಕಾರ್ಯಕರ್ತನಿಗೆ ಪಕ್ಷ ಸೋತಾಗ ನಮ್ಮ ಮೇಲೆ ಸಿಟ್ಟನ್ನು ತೀಕ್ಷ್ಣವಾಗಿ ಹೊರಹಾಕುವ ಹಕ್ಕೂ ಇರುತ್ತದೆ ಎಂದು ಮೈಸೂರು - ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಇದರ ಜೊತೆಗೆ ಪಕ್ಷದ ಹೀನಾಯ ಸೋಲಿಗೆ ಬಿಜೆಪಿ ಕಾರ್ಯಕರ್ತರಲ್ಲಿ ಕ್ಷಮೆಯಾಚಿಸಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದ್ದು, ಇದಕ್ಕೆ ಮಂಗಳೂರಿನಲ್ಲಿ ಪಕ್ಷದ ಕಾರ್ಯಕರ್ತರು ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಮಾಜಿ ಕೇಂದ್ರ ಸಚಿವ ಸದಾನಂದ ಗೌಡ ಅವರ ಬ್ಯಾನರಿಗೆ ಚಪ್ಪಲಿ ಹಾರ ಹಾಕಿದ ಪ್ರಕರಣ ಕೂಡ ನಡೆದಿತ್ತು.

"ನಮ್ಮ ಪರವಾಗಿ ಮತ ಕೇಳುವ, ಬ್ಯಾನರ್ ಬಂಟಿಂಗ್ ಕಟ್ಟುವ, ಮನೆ ಮಠ ಬಿಟ್ಟು ಪಕ್ಷಕ್ಕಾಗಿ ದುಡಿಯುವ ಹಾಗು ಗೆದ್ದಾಗ ಹೊತ್ತು ಮೆರೆಯುವ ಕಾರ್ಯಕರ್ತನಿಗೆ ಪಕ್ಷ ಸೋತಾಗ ನಮ್ಮ ಮೇಲೆ ಸಿಟ್ಟನ್ನು ತೀಕ್ಷ್ಣವಾಗಿ ಹೊರಹಾಕುವ ಹಕ್ಕೂ ಇರುತ್ತದೆ. ಪಕ್ಷ ಸೋತು ಅನಾಥವಾಗಿರುವುದು, ಅಪಾಯಕ್ಕೆ ಸಿಲುಕಿರುವುದು ಕಾರ್ಯಕರ್ತನೇ ಹೊರತು ಯಾವ ನಾಯಕನೂ ಅಲ್ಲ. ದಯವಿಟ್ಟು ನಮ್ಮನ್ನು ಕ್ಷಮಿಸಿ" ಎಂದಿದ್ದಾರೆ.
ಮುಂದುವರೆದು, "ಹಾಗೂ...ಯಾರದ್ದೋ ವೈಯ್ಯಕ್ತಿಕ ಮಹತ್ವಾಕಾಂಕ್ಷೆಯಿಂದ ಸೃಷ್ಟಿಯಾಗುವ ಷಡ್ಯಂತ್ರಕ್ಕೆ ಬಲಿಯಾಗುವುದು, ಯಾರ್ಯಾರನ್ನೋ ತೆಗಳುವುದು ಬೇಡ ಕಾರ್ಯಕರ್ತರೇ" ಎಂದು ಬಿಜೆಪಿ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

ಪುತ್ತೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಮಾಜಿ ಕೇಂದ್ರ ಸಚಿವ ಸದಾನಂದ ಗೌಡ ಅವರ ಬ್ಯಾನರಿಗೆ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಬಂಧಿತ ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರು ಬೆನ್ನು, ಸೊಂಟದ ಹಿಂಭಾಗಕ್ಕೆ ಬಾಸುಂಡೆ ಬರುವ ರೀತಿ ಥಳಿಸಿದ್ದರು. ಮಾರಣಾಂತಿಕವಾಗಿ ಗಾಯಗೊಂಡ ಕಾರ್ಯಕರ್ತರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಿಜೆಪಿ ನಾಯಕರ ಸೂಚನೆಯಂತೆ ಕಾರ್ಯಕರ್ತರಿಗೆ ಪೊಲೀಸರು ಥಳಿಸಿದ್ದು, ನಳಿನ್ ಕುಮಾರ್ ಆಪ್ತ, ಪುತ್ತೂರಿನ ಬಿಜೆಪಿ ನಾಯಕರ ಒತ್ತಡಕ್ಕೆ ಬಿದ್ದು ಥಳಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು.
ಇದಾದ ಬಳಿಕ ಘಟನೆಗೆ ಪ್ರತಿಕ್ರಿಯಿಸಿದ್ದ ನಳಿನ್ ಕುಮಾರ್ ಕಟೀಲ್, "ಹಿಂದೂ ಯುವಕರ ಮೇಲೆ ಪುತ್ತೂರಿನಲ್ಲಿ ದಾಖಲಾದ ಪ್ರಕರಣದಲ್ಲಿ ಪೊಲೀಸರ ವರ್ತನೆ ಪೊಲೀಸ್ ಇಲಾಖೆಗೆ ಕಪ್ಪುಚುಕ್ಕೆ. ದೂರಿನ ಬಗ್ಗೆ ಪರಿಶೀಲಿಸಿ ಯಥೋಚಿತ ತನಿಖೆ ನಡೆಸುವ ಬದಲು ಚಿತ್ರಹಿಂಸೆ ನೀಡಿರುವುದನ್ನು ಖಂಡಿಸುತ್ತೇನೆ. ಉನ್ನತ ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥ ಅಧಿಕಾರಿಗಳ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು" ಎಂದು ಆಗ್ರಹಿಸಿದ್ದರು.












Click it and Unblock the Notifications