ಕೋವಿಡ್ ಹಗರಣದ ತನಿಖಾ ವರದಿ ಬಗ್ಗೆ ಸಂಸದ ಕೆ.ಸುಧಾಕರ್ ಏನಂದ್ರು?
ಸರ್ಕಾರಕ್ಕೆ ಕೋವಿಡ್ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಕೆಯಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರ ಈ ಹಗರಣದಲ್ಲಿ ಭಾಗಿಯಾಗಿತ್ತು ಹಾಗೂ ಇದರಲ್ಲಿ ಆಗಿನ ಆರೋಗ್ಯ ಸಚಿವರೂ ಆಗಿದ್ದ ಈಗಿನ ಬಿಜೆಪಿ ಸಂಸದ ಕೆ.ಸುಧಾಕರ್ ಅವರ ಪಾತ್ರವಿದೆ ಎಂಬ ಆರೋಪಗಳಿತ್ತು. ಈ ವಿಚಾರವಾಗಿ ಮಾತನಾಡಿರುವ ಸಂಸದ ಕೆ.ಸುಧಾಕರ್, ನಾನು ಯಾವುದೇ ಕಾನೂನು ಬಾಹಿರ ಕೆಲಸಗಳನ್ನು ಮಾಡಿಲ್ಲ. ಆಗ ಆರೋಗ್ಯ ಸಚಿವನಾಗಿ ಕೋವಿಡ್ ಸಂದರ್ಭದಲ್ಲಿ ಪ್ರಾಮಾಣಿಕ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ.
ನಾನು ವರದಿ ನೋಡುವವರೆಗೂ ಈ ಬಗ್ಗೆ ಏನನ್ನೂ ಮಾತನಾಡುವುದಿಲ್ಲ. ಕೋವಿಡ್ ವೇಳೆ ನನ್ನ ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡಿದ್ದೇನೆ. ನಾನು ಮಾಡಿರುವ ಕೆಲಸದ ಬಗ್ಗೆ ರಾಜ್ಯದ ಜನರಿಗೂ ಗೊತ್ತಿದೆ. ಜಸ್ಟೀಸ್ ಕೆಂಪಣ್ಣ ವರದಿ ಬಂದು ಎಷ್ಟು ವರ್ಷ ಆಗಿದೆ? ನಮ್ಮ ಪಕ್ಷದವರು ಯಾರೂ ದ್ವೇಷ ರಾಜಕಾರಣ ಮಾಡಿಲ್ಲ. ಒಂದು ವೇಳೆ ನಾವು ದ್ವೇಷ ರಾಜಕಾರಣ ಮಾಡಿದ್ದರೆ, ಇಷ್ಟೊತ್ತಿಗೆ ಸಾಕಷ್ಟು ಜನ ಜೈಲಿಗೆ ಹೋಗುತ್ತಿದ್ದರು ಎಂದಿದ್ದಾರೆ.

ಈ ರಾಜ್ಯ ಕಾಂಗ್ರೆಸ್ ಸರ್ಕಾರವು ನನ್ನ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್‌ನವರದ್ದು ಸತ್ಯಹರಿಶ್ಚಂದ್ರರ ಸರ್ಕಾರನಾ? ಈಗ ರಾಜ್ಯದಲ್ಲಿರೋದು ದರೋಡೆಕೋರರ ಸರ್ಕಾರ. ಈಗಿನ ಸರ್ಕಾರದಲ್ಲಿ ಪಾರ್ಟ್‌ನರ್‌ಶಿಪ್ ಭ್ರಷ್ಟಾಚಾರ ನಡೆಯುತ್ತಿದೆ ಎಂದು ದೂರಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ನಾಳೆ ಏನಾಗಲಿದೆ ಎಂದು ಗೊತ್ತಾದ ಪರಿಸ್ಥಿತಿ ಇತ್ತು. ಇವರು ಅಂದಿನ ಔಷಧಗಳಿಗೆ ಇಂದಿನ ದರ ಹಾಕಿ ಲೆಕ್ಕ ಹಾಕಿದ್ದಾರೆ. ಆರೋಗ್ಯದ ವಿಚಾರದಲ್ಲಿ ನಮ್ಮ ಬಿಜೆಪಿ ಸರ್ಕಾರ ಯಾವ ರೀತಿ ಉತ್ತಮ ಕೆಲಸ ಮಾಡಿತ್ತು ಎಂದು ರಾಜ್ಯದ ಜನರಿಗೆ ತಿಳಿದಿದೆ. ಅದನ್ನು ಈ ಕಾಂಗ್ರೆಸ್‌ನವರಿಗೆ ಅರ್ಥ ಮಾಡಿಸುವ ಅಗತ್ಯವಿಲ್ಲ. ಇವರು ಶಾಶ್ವತವಾಗಿ ಅಧಿಕಾರದಲ್ಲಿರುತ್ತಾರೆ ಎಂದುಕೊಂಡರೆ ಅದು ಸುಳ್ಳು, ಹೆಚ್ಚೆಂದರೆ ಇನ್ನು ಮೂರು ವರ್ಷ ಇರಬಹುದು ಅಷ್ಟೇ. ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೆಂಪಣ್ಣ ಆಯೋಗದ ವರದಿ ಬಂದು ಎಷ್ಟು ವರ್ಷ ಆಗಿದೆ? ಅದನ್ನು ಕೇವಲ ಒಂದೇ ಸಂಪುಟದ ಮುಂದೆ ಇಟ್ಟಿದ್ದಾರೆ. ನಾವು ಇವರ ವಿರುದ್ಧ ಆಗ ರಾಜಕೀಯ ದ್ವೇಷ ಮಾಡಿದೆವಾ? ನಿವೃತ್ತ ನ್ಯಾಯಾಧೀಶರ ಮೇಲೆ ಒತ್ತಡ ಹಾಕಿ ಮಧ್ಯಂತರ ವರದಿ ಪಡೆದರು. ವರದಿ ನೀಡುವುದಕ್ಕೆ ಇನ್ನೂ ಕಾಲಾವಕಾಶ ಇತ್ತು. ಜಸ್ಟೀಸ್ ಕುನ್ಹಾ ಅವರು ಸರಿಯಾದ ವರದಿ ಕೊಡುತ್ತಾರೆ ಎಂದು ನಂಬಿದ್ದೇನೆ ಎಂದಿದ್ದಾರೆ.
ಏನಿದು ಪ್ರಕರಣ?: ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದ ಸಮಯದಲ್ಲಿ ಕೋವಿಡ್ ಹೆಸರಲ್ಲಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಇದರ ತನಿಖೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿಕುನ್ಹಾ ನೇತೃತ್ವದ ವಿಚಾರಣಾ ಆಯೋಗ ರಚಿಸಲಾಗಿತ್ತು. ಅದರಂತೆ ಆಯೋಗವು ತನಿಖಾ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿನ್ನೆ ಸಲ್ಲಿಸಿದೆ.
2022ರಲ್ಲಿ ಲಾಕ್‌ಡೌನ್ ಆರಂಭವಾದ ಸಮಯದಲ್ಲಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಇತರ ಇಲಾಖೆಗಳ ಅಡಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಂಸ್ಥೆಗಳಲ್ಲಿ ಔಷಧ, ಆಕ್ಸಿಜನ್ ಉಪಕರಣಗಳು, ಸಾಮಗ್ರಿಗಳ ಖರೀದಿ, ವಿತರಣೆಯ ನಿರ್ವಹಣೆಯಲ್ಲಿ ನಡೆದಿರುವ ಅವ್ಯವಹಾರ, ಲೋಪದೋಷಗಳ ಕುರಿತು ಆಯೋಗವು ತನಿಖೆ ನಡೆಸಿ ಈ ವರದಿ ನೀಡಿದೆ ಎಂದು ಹೇಳಲಾಗುತ್ತಿದೆ. ಇದು ಸದ್ಯ ರಾಜಕೀಯ ಜಗಳಕ್ಕೆ ಎಡೆ ಮಾಡಿ ಕೊಟ್ಟಿದೆ.












Click it and Unblock the Notifications