Breaking; ಡಿಕೆ ಶಿವಕುಮಾರ್ ಭೇಟಿಯಾದ ಎಚ್. ವಿಶ್ವನಾಥ್!
ಬೆಂಗಳೂರು, ಡಿಸೆಂಬರ್ 09; ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮತ್ತೊಮ್ಮೆ ರಾಜ್ಯ ರಾಜಕೀಯದಲ್ಲಿ ಕುತೂಹಲ ಹುಟ್ಟುಹಾಕಿದ್ದಾರೆ. ಕೆಲವು ದಿನಗಳಿಂದ ಅವರು ಕಾಂಗ್ರೆಸ್ ನಾಯಕರನ್ನು ಭೇಟಿಯಾಗುತ್ತಿದ್ದಾರೆ.
ಶುಕ್ರವಾರ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಎಚ್. ವಿಶ್ವನಾಥ್ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭೇಟಿ ಮಾಡಿದರು. ಕಾಂಗ್ರೆಸ್‌ನ ಹಿರಿಯ ನಾಯಕ ಎಸ್. ಆರ್. ಪಾಟೀಲ್ ಸಹ ಜೊತೆಗಿದ್ದರು.
ಎಚ್. ವಿಶ್ವನಾಥ್ ಭೇಟಿ ಬಗ್ಗೆ ಡಿ. ಕೆ. ಶಿವಕುಮಾರ್ ಫೇಸ್‌ಬುಕ್ ಪೋಸ್ಟ್ ಹಾಕಿದ್ದಾರೆ. ವಿದೇಶದಿಂದ ಮರಳಿದ ನಂತರ ಎಂದಿನಂತೆ ಭೇಟಿ ಕಾರ್ಯಗಳಲ್ಲಿ ನಿರತನಾಗಿದ್ದೇನೆ ಎಂದು ಹೇಳಿದ್ದಾರೆ.

ಮಾಜಿ ಸಚಿವರಾದ ಶ್ರೀ ಎ. ಎಚ್. ವಿಶ್ವನಾಥ್ ಅವರು ಇಂದು ಗೃಹ ಕಚೇರಿಯಲ್ಲಿ ನನ್ನನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿದರು. ಇದೇ ವೇಳೆ ಪರಿಷತ್ ಮಾಜಿ ಅಧ್ಯಕ್ಷರಾದ ಶ್ರೀ ಎಸ್. ಆರ್. ಪಾಟೀಲ್ ಅವರು ತಮ್ಮ ಮಗಳ ಮದುವೆಗೆ ಆಗಮಿಸುವಂತೆ ನನ್ನನ್ನು ಆಹ್ವಾನಿಸಿದರು ಎಂದು ತಿಳಿಸಿದ್ದಾರೆ.
ಕಳೆದ ವಾರ ಎಚ್. ವಿಶ್ವನಾಥ್ ದೆಹಲಿಗೆ ತೆರಳಿದ್ದರು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ್ದರು. ಬಳಿಕ ಬೆಂಗಳೂರಿಗೆ ಆಗಮಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿಯಾಗಿದ್ದರು, ಅವರ ಆರೋಗ್ಯ ವಿಚಾರಿಸಿದ್ದರು.
ಕಾಂಗ್ರೆಸ್ ನಾಯಕರ ಭೇಟಿ; ಮಾಜಿ ಸಂಸದ, ಹಾಲಿ ವಿಧಾನಪರಿಷತ್ ಸದಸ್ಯ, ಹಳ್ಳಿಹಕ್ಕಿ ಎಂದೇ ಖ್ಯಾತಿ ಪಡೆದಿದ್ದಾರೆ ಎಚ್.ವಿಶ್ವನಾಥ್. ಕಾಂಗ್ರೆಸ್ ಪಕ್ಷದ ನಾಯಕರನ್ನು ಅವರು ಭೇಟಿ ಮಾಡುತ್ತಿರುವುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಹುಟ್ಟುಹಾಕಿದೆ.
ಕಳೆದ ಕೆಲವು ತಿಂಗಳಿನಿಂದ ಎಚ್. ವಿಶ್ವನಾಥ್ ಸ್ವಪಕ್ಷ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಇದರಿಂದಾಗಿ ಅವರು ಬಿಜೆಪಿ ಬಿಡಬಹುದು ಎಂದು ಅಂದಾಜಿಸಲಾಗಿದೆ.
ಎಚ್. ವಿಶ್ವನಾಥ್ ರಾಜ್ಯ ರಾಜಕೀಯದಿಂದ ದೂರವಾಗಿದ್ದರು. ಮೈಸೂರು-ಕೊಡಗು ಸಂಸದರಾಗಿ ಕಾರ್ಯನಿರ್ವಹಿಸಿದ್ದರು. 2014ರ ಚುನಾವಣೆಯಲ್ಲಿ ಬಿಜೆಪಿಯ ಪ್ರತಾಪ್ ಸಿಂಹ ಎದುರು ಸೋಲು ಕಂಡಿದ್ದರು. ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಕಾಂಗ್ರೆಸ್‌ನಲ್ಲಿ ಮೂಲೆ ಗುಂಪಾದರು. ಆಗ ಅವರು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿದರು.
2018ರ ವಿಧಾನಸಭಾ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ಜೆಡಿಎಸ್‌ನ ರಾಜ್ಯಾಧ್ಯಕ್ಷರೂ ಆದರು. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯೂ ಆಗಿದ್ದರು.
ಆದರೆ ಸಚಿವ ಸ್ಥಾನ ಸಿಗದ ಕಾರಣ ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದರು. ಆ ನಂತರ ನಡೆದ ಉಪಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಿದರೂ ಜನರು ಬೆಂಬಲಿಸಲಿಲ್ಲ. ಆದರೆ ವಿಧಾನಸಭೆ ಚುನಾವಣೆಯಲ್ಲಿ ಸೋತ ಅವರನ್ನು ಬಿಜೆಪಿ ಎಂಎಲ್‌ಸಿ ಮಾಡಿತು.












Click it and Unblock the Notifications