ಆಪರೇಷನ್ ಹಸ್ತ ಫಿಕ್ಸ್: ಐದಾರು ಬಿಜೆಪಿ ಶಾಸಕರಿಗೆ ಗಾಳ?: ಡಾ.ಜಿ ಪರಮೇಶ್ವರ್ ಬಹಿರಂಗ ಹೇಳಿಕೆ
ಬೆಂಗಳೂರು, ಆಗಸ್ಟ್ 16: ಲೋಕಸಭಾ ಚುನಾವಣೆಗೆ ರಾಜ್ಯ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸುತ್ತಿದ್ದು, ಈಗ ರಾಜ್ಯದ ಬಿಜೆಪಿಗೆ ಆಪರೇಷನ್ ಭೀತಿ ಎದುರಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಹಸ್ತದ ಗುಸು ಗುಸು ಜೋರಾಗಿದ್ದು ಐದಾರು ಬಿಜೆಪಿ ಶಾಸಕರಿಗೆ ಗಾಳ ಹಾಕಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಬಹಿರಂಗ ಹೇಳಿಕೆ ನೀಡಿದ್ದಾರೆ.
ಹೌದು, ಈ ಕುರಿತು ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮಗಳ ಜೊತೆಗೆ ಮಾತನಾಡಿ, ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಬರಬಹುದು. ಬಿಜೆಪಿಯಲ್ಲಿ ಬೇಸರ ಆಗಿ ಕಾಂಗ್ರೆಸ್ ಪಕ್ಷಕ್ಕೆ ಬರಬಹುದು, ಸರಿಯಾಗಿ ನಡೆಸಿಕೊಳ್ಳಲಿಲ್ಲವೆಂದು ಶಾಸಕರು ಬರಬಹುದು. ಬರುವವರನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳುತ್ತೆವೆ. ಈಗಾಗಲೇ ಅಧ್ಯಕ್ಷರು ಈ ಬಗ್ಗೆ ಹೇಳಿದ್ದಾರೆ, ಪರಿಶೀಲನೆ ಮಾಡಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಅನ್ಯ ಪಕ್ಷದಿಂದ ಬರುವವರು ಕಾಂಗ್ರೆಸ್ ಐಡಿಯಾಲಜಿ ನಂಬಿ ಬರಲಿ. ಹಿಂದೆ ಪಕ್ಷ ಬಿಟ್ಟು ಹೋದವರು ಬರಬಹುದು, ಪಕ್ಷ ಬಿಟ್ಟು ಹೋದವರು ವಾಪಸ್ ಬಂದ ಉದಾಹರಣೆ ಇದೆ. ಆದರೆ ಅವರಿಗೆ ಫಸ್ಟ್ ಬೇಂಚ್ ಸಿಗುವುದಿಲ್ಲ. ತಪ್ಪು ಮಾಡಿದ್ದನ್ನ ಸರಿ ಮಾಡಿಕೊಂಡರೆ ಬರಬಹುದು. ಫಸ್ಟ್ ಬೆಂಚ್ ಸಿಗುವುದಿಲ್ಲ ಅವರಿಗೆ. ಆದರೆ ಅವರಿಗೆ ಕ್ಲಾಸ್ ರೂಂಗೆ ಅವಕಾಶ ಇದೆ. ಫಸ್ಟ್ ಬೆಂಚ್ ಬೇಕಾದ್ರೆ ತುಂಬಾ ದಿನ ಆಗುತ್ತದೆ ಎಂದು ತಿಳಿಸಿದರು.
ನನ್ನ ಜೊತೆ ಶಾಸಕರು ಚರ್ಚೆ ಮಾಡಿದ್ದು ಹೇಳಲ್ಲ. ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ, ಈ ಬಾರಿ ಜನತೆ ನಮಗೆ ಅಧಿಕಾರ ಕೊಟ್ಟಿದ್ದಾರೆ. ಅವರ ವಿಶ್ವಾಸಕ್ಕೆ ತಕ್ಕಂತೆ ಭರವಸೆ ಈಡೇರಿಸಿದ್ದೇವೆ ನುಡಿದಂತೆ ನಡೆದಿದ್ದೇವೆ,ಅದರಂತೆ ನಡೆದುಕೊಳ್ಳುತ್ತೇವೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸೀಟು ಗೆಲ್ಲುಬೇಕು.

ಇದಕ್ಕೆ ಏನು ಬೇಕೋ ಅದನ್ನ ಮಾಡುತ್ತೇವೆ. ಜನರಿಗೆ ಭರವಸೆ ಈಡೇರಿಸುವುದುದು ಒಂದು ಕಡೆ, ರಾಜಕೀಯ ಮಾಡುವುದು ಮತ್ತೊಂದು ಕಡೆ. ಕಳೆದ ಬಾರಿ ಬಿಜೆಪಿ25 ಸ್ಥಾನ ಪಡೆದಿದ್ರು. ಈ ಬಾರಿ ನಾವು ಗುರಿ ಇಟ್ಟುಕೊಂಡಿದ್ದೇವೆ. ಆದರೆ, ಜನ ತೀರ್ಮಾನ ಮಾಡುತ್ತಾರೆ. ನನ್ನ ಬಳಿ ಶಾಸಕರು ಚರ್ಚೆ ಮಾಡಿದ್ದಾರೆ ಎಂದು ಹೇಳಿದರು.
ಕಂಟ್ರಾಕ್ಟರ್ ಜೊತೆ ಸಂಧಾನ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಪದ ಕುರಿತು ಮಾತನಾಡಿ, ಕುಮಾರಸ್ವಾಮಿಯವರು ವಿರೋಧ ಪಕ್ಷದಲ್ಲಿದ್ದಾರೆ. ಅವರು ಟೀಕೆ ಟಿಪ್ಪಣಿ ಮಾಡೋದಕ್ಕೆ ಅಭ್ಯಂತರ ಇಲ್ಲ, ಅವರಿಗೆ ಟೀಕೆ ಮಾಡುವ ಹಕ್ಕಿದೆ. ಆದರೆ, ಇಲ್ಲಸಲ್ಲದ ಆರೋಪ ಸರಿಯಲ್ಲ. ದಾಖಲೆ ಇಲ್ಲದೆ ಮಾತನಾಡುವುದು ಸರಿಯಲ್ಲ ಎಂದರು.
ಕುಮಾರಸ್ವಾಮಿ ಅವರು ಎರಡು ಬಾರಿ ಸಿಎಂ ಆದವರು. ಅವರು ಮಾತಾಡಿದ್ರೆ ಜನ ಗಮನಿಸುತ್ತಾರೆ. ಹೌದಪ್ಪ ಇವರು ಹೇಳುವುದರಲ್ಲಿ ಸತ್ಯ ಇದೆ ಎಂದು ನಂಬುತ್ತಾರೆ. ದಾಖಲೆ ಬಿಡುಗಡೆ ಮಾಡದೇ ಹೋದ್ರೆ ಗೌರವ ಸಿಗಲ್ಲ ಎಂದು ಕುಟುಕಿದರು.
ಇಷ್ಟು ಭ್ರಷ್ಟ ಸರ್ಕಾರ ನೋಡಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ಕುರಿತು ಮಾತನಾಡಿ, ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ, ನಾವು ಜನರಿಗೆ ಮಾತು ಕೊಟ್ಟಿದ್ದೇವೆ. ಒಳ್ಳೆ ಆಡಳಿತ ಕೊಡ್ತೇವೆ ಅಂತ ಹೇಳಿದ್ದೇವೆ. ಸಿಎಂ,ಸಚಿವರು ಅದರಂತೆ ಕೆಲಸ ಮಾಡುತ್ತಿದ್ದಾರೆ. ಆಪಾದನೆ ಮಾಡುವುದು ಆರೋಪ ಮಾಡುವುದು ಬೇಡ. ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.












Click it and Unblock the Notifications