ಕೇಂದ್ರದ ಅಕ್ಕಿಯಿಂದಲೇ 'ಅನ್ನರಾಮಯ್ಯ' ಆದ ನಿಮಲ್ಲಿ ಔದಾರ್ಯ ಇಲ್ಲ: ಸಿಎಂಗೆ ವಿಜಯೇಂದ್ರ ತಿರುಗೇಟು
ಬೆಂಗಳೂರು, ಜೂನ್ 14: ಮೊದಲು ಅಕ್ಕಿ ನೀಡುತ್ತೇನೆ ಎಂದಿದ್ದ ಕೇಂದ್ರ ಸರ್ಕಾರ, ಇದೀಗ ರಾಜ್ಯಕ್ಕೆ ಅಕ್ಕಿ ಪೂರೈಕೆಯಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಬಿವೈ ವಿಜಯೇಂದ್ರ ಅವರು, ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಬೇಡಿ ಎಂದು ತಿರುಗೇಟು ನೀಡಿದ್ದಾರೆ.
ಅಕ್ಕಿ ವಿತರಣೆ ಕುರಿತು ಟ್ವೀಟ್ ಮಾಡಿರುವ ಶಾಸಕ ಬಿವೈ ವಿಜಯೇಂದ್ರ ಅವರು, ರಾಜ್ಯದಲ್ಲಿ ಅಕ್ಕಿ ವಿತರಿಸಲು ಕೇಂದ್ರ ಸರ್ಕಾರ ಅಕ್ಕಿ ಒದಗಿಸುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ?. ಈ ಹಿಂದೆಯೂ ನಿಮ್ಮ (ಕಾಂಗ್ರೆಸ್) ಆಡಳಿತದಲ್ಲಿ ಕೇಂದ್ರದಿಂದ ಅಕ್ಕಿ ತರಿಸಿಕೊಂಡು 'ಅನ್ನರಾಮಯ್ಯ' ಎಂದು ಕರೆಸಿಕೊಂಡಿರಿ. ಅಪ್ಪಿ ತಪ್ಪಿಯೂ ಕೇಂದ್ರ ಸರ್ಕಾರದ ಕೊಡುಗೆ ಕುರಿತು ಎಲ್ಲೂ ಉಲ್ಲೇಖಿಸುವ ಔದಾರ್ಯವಿಲ್ಲ ನಿಮ್ಮಲ್ಲಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ಇದೀಗ ಕಾಂಗ್ರೆಸ್ ಸರ್ಕಾರ ಅಕ್ಕಿ ಯೋಜನೆ ಜಾರಿಗೆ ತರುವಲ್ಲಿ ಸಹಾಯಕ ಪರಿಸ್ಥಿತಿಯಲ್ಲಿದೆ. ನಿಮ್ಮ ಸರ್ಕಾರದ ವೈಫಲ್ಯ ಅನಾವರಣಗೊಳ್ಳುವ ಆತಂಕದಲ್ಲಿ ನೀವಿದ್ದು, ವಿನಾಃಕಾರಣ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದೀರಿ. ಈ ಮೂಲಕ ಜನರ ದಿಕ್ಕು ತಪ್ಪಿಸುವ ನಿಮ್ಮ ಅರಿಯದಷ್ಟು ಜನರೇನು ಮುಗ್ಧರಲ್ಲ ಎಂದು ಶಾಕಸರು ಕಾಂಗ್ರೆಸ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು.
ಇದು ಪರ್ಸಂಟೇಜ್ ಫಿಕ್ಸ್ ಮಾಡುವ ಸಭೆಯಾ?: ವಿಜಯೇಂದ್ರ
ಅದಷ್ಟೇ ಅಲ್ಲದೇ, ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ಬಿಬಿಎಂಪಿ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರು ಸಭೆ ನಡೆಸಿರುವುದು ಎಷ್ಟು ಸರಿ ಎಂದು ಬಿವೈ ವಿಜಯೇಂದ್ರ ಅವರು ಪ್ರಶ್ನಿಸಿದ್ದಾರೆ.
ಸರ್ಕಾರ ಹಾಗೂ ಬಿಬಿಎಂಪಿಯೊಂದಿಗೆ ಯಾವುದೇ ರೀತಿಯ ಸಂಬಂಧವಿರದ ವ್ಯಕ್ತಿ 'ಉನ್ನತ ಅಧಿಕಾರಿಗಳ ಸಭೆ ನಡೆಸುವುದು' ನಾಡಿನ ಮತದಾರರಿಗೆ ಮಾಡುತ್ತಿರುವ ಅಪಚಾರ. ನೆನ್ನೆ ನಡೆದ ಸಭೆ ಪರ್ಸಂಟೇಜ್ ಫಿಕ್ಸ್ ಮಾಡುತ್ತಿರುವ ಸಭೆಯೋ? ಅಥವಾ ನಿಮ್ಮ ಹೈಕಮಾಂಡ್ ನಾಯಕರಿಗೆ ರಾಜ್ಯವನ್ನು ATM ಮಾಡಿಕೊಡುವ ವ್ಯವಸ್ಥೆಯೋ? ಎಂದು ಹರಿಹಾಯ್ದಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನಾಡಿನ ಜನತೆಗೆ ಉತ್ತರಿಸಬೇಕು ಎಂದು ಆಗ್ರಹಿಸಿದರು.

ಅಕ್ಕಿ ವಿಚಾರದಲ್ಲಿ ಸಿದ್ದರಾಮಯ್ಯ ಹೇಳಿದ್ದೇನು?
ಕಾಂಗ್ರೆಸ್ ಸರ್ಕಾರ ಘೋಷಿಸಿದ 5 ಗ್ಯಾರೆಂಟಿಗಳನ್ನು ಈಗಾಗಲೇ ಜಾರಿ ಮಾಡಿದ್ದೇವೆ. ಮೊದಲ ಗ್ಯಾರೆಂಟಿ ಈಗಾಗಲೇ ಜಾರಿ ಆಗಿದೆ. ಅಂತ್ಯೋದಯ ಕಾರ್ಡ್ ದಾರರಿಗೆ ತಲಾ 10 ಕೇಜಿ ಅಕ್ಕಿ ವಿತರಿಸುತ್ತೇವೆ ಎಂದು ತಿಳಿಸಿದ್ದೇವೆ. ಸದ್ಯ ರಾಜ್ಯ ಸರ್ಕಾರ ಐದು ಕೇಜಿ ಅಕ್ಕಿ ಕೊಡುತ್ತಿದೆ. ಇನ್ನೂ ಐದು ಕೇಜಿ ಸೇರಿಸಿ ಒಟ್ಟು ಹತ್ತು ಕೇಜಿ ಅಕ್ಕಿ ಕೊಡಬೇಕಿದೆ. ಅದಕ್ಕಾಗಿ ಒಟ್ಟಾರೆ ಪ್ರತಿ ತಿಂಗಳಿಗೆ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಅಗತ್ಯವಿದೆ. ಆದರೆ ಈ ಸಂಬಂಧ ಅಕ್ಕಿ ನೀಡುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ ಇದೀಗ ರಾಜಕೀಯ ಮಾಡುತ್ತಿದೆ. ಇದು ಬಡವರ ಪರವಾದ ಸರ್ಕಾರವಲ್ಲ ಎಂದು ಜರಿದಿದ್ದರು. ಇದಕ್ಕೆ ಶಾಸಕ ವಿಜಯೇಂದ್ರ ಅವರು ತಿರುಗೇಟು ನೀಡಿದ್ದಾರೆ.












Click it and Unblock the Notifications