ವಕ್ಫ್ ಸ್ವತ್ತುಗಳನ್ನು ರಾಷ್ಟ್ರೀಕರಣ ಮಾಡುವಂತೆ ಮೋದಿಗೆ ಯತ್ನಾಳ್ ಪತ್ರ
ರಾಜ್ಯದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ವಕ್ಫ್ ಜಟಾಪಟಿ ಮುಂದುವರಿದಿದೆ. ರೈತರಿಗೆ ವಕ್ಫ್ ಮಂಡಳಿ ನೋಟಿಸ್ ನೀಡಿರುವ ವಿಚಾರವಾಗಿ ಕಳೆದೊಂದು ವಾರದಿಂದ ರಾಜ್ಯ ಸರ್ಕಾರ ಹಾಗೂ ಬಿಜೆಪಿ ನಾಯಕರು ಗುದ್ದಾಟ ಶುರುಮಾಡಿದ್ದಾರೆ. ಇದೀಗ ಬಿಜೆಪಿ ಶಾಸಕ ಬಸನಗೌಡ ವಕ್ಫ್ ಆಸ್ತಿಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದಿದ್ದಾರೆ.
ವಕ್ಫ್ ಸ್ವತ್ತುಗಳನ್ನು ರಾಷ್ಟ್ರೀಕರಣ ಮಾಡಬೇಕೆಂದು ನಾನು ಸನ್ಮಾನ್ಯ ಪ್ರಧಾನಿಗಳಾದ ನರೇಂದ್ರ ಮೋದಿ ಅವರಿಗೆ ಪತ್ರವನ್ನು ಬರೆದಿದ್ದೇನೆ. ದೇಶದ ಸಂಪನ್ಮೂಲ ಯಾವುದೇ ಸೀಮಿತ ಕೋಮಿಗೆ ಸೇರುವುದು ಜಾತ್ಯತೀತ ತತ್ವದ ವಿರುದ್ಧವಾದದ್ದು. ಆದ್ದರಿಂದ, ಅದನ್ನು ಸದ್ಬಳಕೆ ಮಾಡುವ ಸದುದ್ದೇಶದಿಂದ ಪ್ರಧಾನಿ ಮೋದಿ ಅವರಿಗೆ ಮನವಿ ಸಲ್ಲಿಸಿದ್ದೇನೆ ಎಂದು ಯತ್ನಾಳ್ ಹೇಳಿದ್ದಾರೆ.

ಇದೇ ವಿಚಾರವಾಗಿ ರಾಜ್ಯ ಸರ್ಕಾರವನ್ನು ವಿಪಕ್ಷ ನಾಯಕ ಆರ್.ಅಶೋಕ್ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ಸರ್ವ ಜನಾಂಗದ ಶಾಂತಿಯ ತೋಟವನ್ನ ಅಕ್ಷರಶಃ ರಣರಂಗ ಮಾಡಿದೆ. ವಕ್ಫ್ ಮಂಡಳಿ ಹೆಸರಿನಲ್ಲಿ ಲ್ಯಾಂಡ್ ಜಿಹಾದ್‌ಗೆ ಕುಮ್ಮಕ್ಕು ಕೊಟ್ಟು ಹಿಂದೂಗಳ ಆಸ್ತಿ ಕಬಳಿಸುವ ಮೂಲಕ ಸಮಾಜದಲ್ಲಿ ಅಸುರಕ್ಷತೆಯ ಭಾವನೆ ಮೂಡಿಸಿದೆ ಎಂದು ಕಿಡಿಕಾರಿದ್ದಾರೆ.
ಅಯೋಧ್ಯೆಯ ನೂತನ ರಾಮಮಂದಿರದ ಉದ್ಘಾಟನೆಯ ವೇಳೆ ಗಲಾಟೆ, ಗಣೇಶ ಹಬ್ಬದ ಸಂದರ್ಭದಲ್ಲಿ ಕೋಮುದಳ್ಳುರಿ, ದಸರಾ ಹಬ್ಬದಲ್ಲೂ ಕೋಮು ಗಲಭೆ, ಈಗ ವಕ್ಫ್ ಆಸ್ತಿಗಾಗಿ ಗಲಭೆ. ಒಟ್ಟಿನಲ್ಲಿ ಈ ನಾಡದ್ರೋಹಿ, ಧರ್ಮದ್ರೋಹಿ ಕಾಂಗ್ರೆಸ್ ಸರ್ಕಾರ ಇರುವವರೆಗೂ ಕನ್ನಡಿಗರಿಗೆ ನೆಮ್ಮದಿಯಿಲ್ಲ, ಕರ್ನಾಟಕದಲ್ಲಿ ಶಾಂತಿ ಇಲ್ಲ ಎಂದು ಅಶೋಕ್ ಹಿಡಿಶಾಪ ಹಾಕಿದ್ದಾರೆ.

ಜಮೀರ್ ಯೂಟರ್ನ್?: ವಕ್ಫ್ ವಿರುದ್ಧ ಭಾರಿ ಜಟಾಪಟಿ ನಡೆಯುತ್ತಿರುವ ನಡುವೆಯೇ ಸಚಿವ ಜಮೀರ್ ಅಹ್ಮದ್ ಖಾನ್ ಯೂಟರ್ನ್ ಹೊಡೆದಿದ್ದಾರೆ. ಇಂದು ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ರೈತರ ಜಮೀನನ್ನು ವಕ್ಫ್ ಆಸ್ತಿ ಎಂದು ಯಾರಿಂದಲೂ ಬದಲಾಯಿಸಲು ಆಗಲ್ಲ. ಸಚಿವರು ಹೇಳಿದರು ಎಂದು ಅಧಿಕಾರಿಗಳೂ ಅದನ್ನ ಮಾಡೋಕಾಗಲ್ಲ ಎಂದಿದ್ದಾರೆ.
ವಕ್ಫ್ ಆಸ್ತಿ ವಿಚಾರದಲ್ಲಿ ನೋಟಿಸ್ ನೀಡುವುದು ಈಗಿನ ಬೆಳವಣಿಗೆಯೇನಲ್ಲ. ಈ ಹಿಂದೆ ಬಿಜೆಪಿ ಅಧಿಕಾರದ ಅವಧಿಯಲ್ಲೇ ಸಾವಿರಾರು ನೋಟಿಸ್ ಕೊಡಲಾಗಿತ್ತು. ಈಗ ಅವರ ವಿಚಾರ ಹೇಳದರೆ, ರಾಜಕಾರಣ ಮಾಡುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ.
ಕೊನೆಗೆ ವಕ್ಫ್ ಮಂಡಳಿಯಿಂದ ರೈತರಿಗೆ ನೋಟಿಸ್ ನೀಡಿದ್ದರೆ, ಅದನ್ನು ತಕ್ಷಣ ವಾಪಸ್ ಪಡೆಯುತ್ತೇವೆ. ಯಾವ ರೈತರ ಜಮೀನನ್ನು ಕೂಡ ವಶಕ್ಕೆ ಪಡೆಯುವ ಚಿಂತನೆ ಇಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟನೆ ನೀಡಿದ್ದಾರೆ.

ಈ ಬಿಜೆಪಿಯವರು ವಕ್ಫ್ ವಿಚಾರವಾಗಿ ಅನಗತ್ಯವಾಗಿ ಗೊಂದಲ ಮೂಡಿಸುತ್ತಿದ್ದಾರೆ. ವಿಜಯಪುರದಲ್ಲಿ ಸಾವಿರಾರು ಎಕರೆ ಜಮೀನು ವಕ್ಫ್ ಬೋರ್ಡ್ ಪಾಲಾಗುತ್ತಿದೆ ಎಂದು ರೈತರ ದಿಕ್ಕುತಪ್ಪಿಸಿದರು. ಆದರೆ ನಿಜವಾಗಿ ಅಲ್ಲಿ ವಕ್ಫ್‌ಗೆ ಸೇರಿದ್ದು ಕೇವಲ 11 ಎಕರೆ ಅಷ್ಟೇ ಎಂದು ಜಮೀರ್ ಹೇಳಿದ್ದಾರೆ.
ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
ನಾಡಿನ ಜನರಿಗೆ ಅನ್ನ ಕೊಡುವ ರೈತರ ಜಮೀನು ಕಬಳಿಸುವುದಕ್ಕೆ ಸಚಿವ ಜಮೀರ್ ಅಹಮದ್ ಖಾನ್ ಹಾಗೂ ವಕ್ಫ್ ಬೋರ್ಡ್ ಸಂಚು ರೂಪಿಸಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ನಿನ್ನೆ ವಾಗ್ದಾಳಿ ನಡೆಸಿದರು. ಅಲ್ಲದೆ ಸಿಎಂ ಸಿದ್ದರಾಮಯ್ಯನವರಿಗೆ ಮುಸಲ್ಮಾನರ ಭೂತ ಹಿಡಿದಿದೆ. ಅನ್ನದಾತರ ಜಮೀನು ಕಸಿಯುತ್ತಿರುವ ಕಾಂಗ್ರೆಸ್ ಸರ್ಕಾರದ ಅನ್ಯಾಯದ ವಿರುದ್ಧ ನ.4ರಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಹೇಳಿದರು.
ರೈತರ ಭೂಮಿಗೆ ಕನ್ನ ಹಾಕಿದ್ದಾಯ್ತು, ದೇವಾಲಯಗಳ ಆಸ್ತಿ ಮೇಲೆ ದಬ್ಬಾಳಿಕೆ ಮಾಡಿದ್ದಾಯ್ತು, ಈಗ ವಕ್ಫ್ ಬೋರ್ಡ್ ಹೆಸರಿನಲ್ಲಿ ಹಿಂದೂಗಳ ಸ್ಮಶಾನವನ್ನೂ ಕಬಳಿಸಲು ಹೊರಟಿದೆ ಈ ಲಜ್ಜೆಗೆಟ್ಟ ಸರ್ಕಾರ ಎಂದು ಕಿಡಿಕಾರಿದರು.












Click it and Unblock the Notifications