ಸಿಎಂ ಕಚೇರಿ ನವೀಕರಣಕ್ಕೆ ₹2.5 ಕೋಟಿ; ಒಳಗೆ ಏನೇನಿದೆ ಎಂದು ವಿವರಿಸಿದ ಯತ್ನಾಳ್
ಗ್ಯಾರಂಟಿ ಯೋಜನೆಗಳನ್ನು ನಡೆಸಲು ರಾಜ್ಯ ಕಾಂಗ್ರೆಸ್ ಸರ್ಕಾರದ ಬಳಿ ಹಣದ ಕೊರತೆ ಇದೆ ಎಂದು ವಿಪಕ್ಷಗಳು ಟೀಕೆ ಮಾಡುತ್ತಲೇ ಇವೆ. ಈ ಕಾರಣದಿಂದಲೇ ಶಾಸಕರಿಗೆ ಅನುದಾನ ಕೂಡ ನಿಲ್ಲಿಸಲಾಗಿದೆ ಎಂಬ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಈ ಹೊತ್ತಿನಲ್ಲೇ ವಿಧಾನಸೌಧದಲ್ಲಿರುವ ಸಿಎಂ ಕಚೇರಿಯ ನವೀಕರಣಕ್ಕೆ 2.5 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ಆಕ್ರೋಶ ಹೊರಹಾಕಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಧ್ಯಮ ವರದಿಗಳ ಪ್ರಕಾರ 2.5 ಕೋಟಿ ರೂಪಾಯಿ ವೆಚ್ಚದಲ್ಲಿ ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಗಳ ಕಚೇರಿ ನವೀಕರಣಕ್ಕೆ ಯೋಜನೆ ರೂಪಿಸುವಲ್ಲಿ ಲೋಕೋಪಯೋಗಿ ಅಧಿಕಾರಿಗಳು ನಿರತರಾಗಿದ್ದಾರೆ. ಹೊಸ ವಾಲ್ ಪೇಂಟಿಂಗ್, ಕೆಫೆಟೇರಿಯಾ ಮತ್ತು ರೆಸ್ಟ್ ರೂಂಗಳೊಂದಿಗೆ ಸಂಪೂರ್ಣ ವಿನ್ಯಾಸವನ್ನು ನವೀಕರಿಸಲಾಗುತ್ತಿದೆ. ಜೊತೆಗೆ ಟೈಲ್ಸ್ ಬದಲಾವಣೆ ಮತ್ತು ಗೋಡೆಗಳ ಮರುವಿನ್ಯಾಸಕ್ಕೆ ಮುಂದಾಗಿದೆ ಎಂದು ಪಟ್ಟಿ ಬಿಚ್ಚಿಟ್ಟಿದ್ದಾರೆ.

ಈ ನವೀಕರಣ, ಮರುವಿನ್ಯಾಸಕ್ಕಾಗಿ ಸಿಎಂ ಕಚೇರಿಯಿಂದ ಯಾವುದೇ ದಾಖಲಾತಿ ಅಥವಾ ಅನುಮೋದನೆ ಪಡೆದಿಲ್ಲ. ಆದರೂ ಈಗಾಗಲೇ ಕೆಲಸ ಪ್ರಾರಂಭವಾಗಿದೆ. ಸಾರ್ವಜನಿಕ ಸಂಗ್ರಹಣೆಯಲ್ಲಿ ಕರ್ನಾಟಕ ಪಾರದರ್ಶಕತೆ ಕಾಯಿದೆ (ಕೆಟಿಪಿಪಿ ಕಾಯಿದೆ) 4 (ಜಿ) ಅಡಿಯಲ್ಲಿ ಅನುಮೋದನೆಯನ್ನು ನಂತರ ಕೆಲಸ ಶುರು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
ಜನರ ಕಲ್ಯಾಣಕ್ಕಾಗಿ ಹಣ ಬಳಸುವ ಬದಲು, ಮಾನ್ಯ ಮುಖ್ಯಮಂತ್ರಿಗಳು ತಮ್ಮ ಕಚೇರಿಯನ್ನು ನವೀಕರಿಸಲು ಬಳಸುತ್ತಿದ್ದಾರೆ, ಅದು ಅಗತ್ಯವಲ್ಲ. ಇತ್ತೀಚೆಗಷ್ಟೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸರ್ಕಾರಿ ನಿವಾಸವನ್ನು 1.38 ಕೋಟಿ ವೆಚ್ಚದಲ್ಲಿ ನವೀಕರಿಸಲಾಗಿದೆ. ಇದಕ್ಕೆ ಕೂಡ ಕೆಟಿಪಿಪಿ ಕಾಯಿದೆಯ 4 (ಜಿ) ಅಡಿಯಲ್ಲಿ ವಿನಾಯಿತಿ ನೀಡಲಾಗಿದೆ ಎಂದು ಯತ್ನಾಳ್ ದೂರಿದ್ದಾರೆ.

ಡಿಕೆಶಿ ನಿವಾಸದಲ್ಲಿ ಕಿಚನ್ ಕ್ಯಾಬಿನೆಟ್, ವಾಲ್ ಪ್ಯಾನೆಲಿಂಗ್, ಪೇಂಟಿಂಗ್, ಡೋರ್ಸ್, ವಿಂಡೋಸ್, ಗ್ರಿಲ್ ಮತ್ತು ಕರ್ಟನ್ ರಾಡ್‌ಗಳನ್ನು ಬದಲಾಯಿಸಲಾಗಿದೆ. ಎಲ್‌ಇಡಿ ಫಿಟ್ಟಿಂಗ್‌ಗಳು, ಬೀದಿ ದೀಪಗಳು, ಲಾನ್ ಲೈಟ್‌ಗಳು, ಗಾರ್ಡನ್ ಲೈಟ್‌ಗಳು, ವಾಟರ್ ಹೀಟರ್‌ಗಳು, ಸೀಲಿಂಗ್ ಫ್ಯಾನ್‌ಗಳು ಮತ್ತು ಇತರ ವಿದ್ಯುತ್ ಉಪಕರಣಗಳನ್ನು 40 ಲಕ್ಷ ರೂಪಾಯಿ ವೆಚ್ಚದಲ್ಲಿ ಖರೀದಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸಿಎಂ ತಮ್ಮ ಕುಮಾರಕೃಪಾ ನಿವಾಸದಿಂದ ಕಾವೇರಿಗೆ ಸ್ಥಳಾಂತರಗೊಂಡಾಗ ಸಲಕರಣೆ ಖರೀದಿ ವೆಚ್ಚ ರೂ. 3 ಕೋಟಿ. ಇದು ಬೇಕಿತ್ತಾ? ಇದು ನೀವು ಹೇಳುತ್ತಿದ್ದ ಸಂಯಮವೇ? ಸರ್ಕಾರಿ ಶಾಲಾ ಕಟ್ಟಡಗಳು ಬೀಳುವ ಹಂತದಲ್ಲಿವೆ, ನವೀಕರಣ ಅಥವಾ ಹೊಸ ಕಟ್ಟಡಗಳನ್ನು ನಿರ್ಮಿಸಲು ಯಾವುದೇ ಕ್ರಮ ಕೈಗೊಂಡಿದ್ದೀರ ಸಿದ್ದರಾಮಯ್ಯ ಅವರೇ? ಎಂದು ಪ್ರಶ್ನಿಸಿದ್ದಾರೆ.

ಸರ್ಕಾರಿ ನಿರ್ವಹಣಾ ಹಾಸ್ಟೆಲ್‌ಗಳಲ್ಲಿನ ಸೌಲಭ್ಯಗಳು ತೀರಾ ಕಳಪೆಯಾಗಿವೆ, ಅವುಗಳನ್ನು ಸರಿಪಡಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೇ? ತೆರಿಗೆದಾರರ ಹಣದಿಂದ ನಿಮ್ಮ ಕಚೇರಿಯನ್ನು ನವೀಕರಿಸಲು ಕೋಟಿಗಟ್ಟಲೆ ಖರ್ಚು ಮಾಡುವುದೇಕೆ? ಎಂದು ಗುಡುಗಿದ್ದಾರೆ.
ದಯವಿಟ್ಟು ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸಿ. ತೆರಿಗೆ ಪಾವತಿದಾರರ ಹಣವನ್ನು ಉಳಿಸಿ. ತೆರಿಗೆ ಪಾವತಿದಾರರ ಹಣವು ಜನರ ಅಭಿವೃದ್ಧಿಗೆ ಮೀಸಲಾಗಿರುತ್ತದೆಯೇ ಹೊರತು ನಿಮ್ಮ ಸ್ವಂತಕ್ಕಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications