ಲೋಕಸಭೆ ಚುನಾವಣೆ 2019: ಅನಂತ್‌ಕುಮಾರ್ ಹೆಗಡೆಗೆ ಟಿಕೆಟ್ ಇಲ್ಲ?
ಬೆಂಗಳೂರು, ಆಗಸ್ಟ್ 13: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಹೊಸ ಶಿಸ್ತು ನಿಯಮದ ಪ್ರಕಾರ ಬಿಜೆಪಿ ಕೇಂದ್ರ ಸಂಸದ ರಾಜ್ಯ ಬಿಜೆಪಿಯ ಫೈರ್‌ಬ್ರಾಂಡ್ ಅನಂತಕುಮಾರ್ ಹೆಗಡೆಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ.
ಪದೇ ಪದೇ ವಿವಾದಾತ್ಮಕ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಉಂಟುಮಾಡುತ್ತಿರುವ ಸಂಸದರಿಗೆ, ಕ್ಷೇತ್ರವನ್ನು ಕಡೆಗಣಿಸಿರುವವರಿಗೆ, ಪಕ್ಷದ ಆಜ್ಞೆಗಳನ್ನು ಉಲ್ಲಂಘಿಸಿರುವವರಿಗೆ ಈ ಬಾರಿ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.
ಅಷ್ಟೆ ಅಲ್ಲದೆ, ಕೆಲವು ಪ್ರಮುಖ ಬಿಜೆಪಿ ಮುಖಂಡರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಅದರಲ್ಲಿ ರಾಜ್ಯದ ಅನಂತ್‌ಕುಮಾರ್ ಹೆಗಡೆ ಸಹ ಸೇರಿದ್ದಾರೆ ಎನ್ನಲಾಗಿದೆ.

ಯಾರಿಗೆ ಎಚ್ಚರಿಕೆ?
ಕ್ಷೇತ್ರ ಕಡೆಗಣಿಸಿರುವ ಹೇಮಾಮಾಲಿನಿ, ವಿವಾದಿತ ಹೇಳಿಕೆ ನೀಡುತ್ತಾ ಬಂದಿರುವ ಆಂಧ್ರದ ರಾಜಾ ಸಿಂಗ್, ಉತ್ತರ ಪ್ರದೇಶದ ಸಂಗೀತ್ ಸೋಮ್, ಸುರೇಶ್ ರಾಣ, ಸಂಜೀವ್ ಬಲ್ಯಾನ್, ರಾಜೇಂದ್ರ ಅಗರ್‍ವಾಲ್ ಇವರ ಜೊತೆಗೆ ಮಂತ್ರಿ ಅನಂತ್‌ಕುಮಾರ್ ಹೆಗಡೆ ಅವರ ಹೆಸರೂ ಇದೆ.

ವಿವಾದಾತ್ಮಕ ಹೇಳಿಕೆ ನೀಡಿದ್ದ ಹೆಗಡೆ
ಬಿಜೆಪಿಯ ಫೈರ್‌ಬ್ರ್ಯಾಂಡ್ ಎಂದೇ ಖ್ಯಾತರಾಗಿರುವ ಅನಂತ್‌ಕುಮಾರ್ ಅವರು ಈ ಹಿಂದೆ, ಜಾತ್ಯಾತೀತರು ಅಪ್ಪ-ಅಮ್ಮ ಇಲ್ಲದವರು ಎಂಬರ್ಥದ ಮಾತುಗಳನ್ನಾಡಿದ್ದರು. ತಮ್ಮ ರಕ್ತದ ಪರಿಚಯ ಇಲ್ಲದವರು ಜಾತ್ಯಾತೀತರು ಎಂದಿದ್ದರು.

ಮೀಸಲಾತಿ ವಿರೋಧಿ ಹೇಳಿಕೆ
ಅನಂತ್‌ಕುಮಾರ್ ಅವರ ಅತ್ಯಂತ ವಿವಾದಾತ್ಮಕ ಮಾತೆಂದರೆ ಮೀಸಲಾತಿ ಕುರಿತಾದದ್ದು. ನಾವು (ಬಿಜೆಪಿ) ಅಧಿಕಾರಕ್ಕೆ ಬಂದಿರುವುದೇ ಮೀಸಲಾತಿಯನ್ನು ಅಂತ್ಯ ಮಾಡಲು ಎಂದು ಅನಂತ್ ಕುಮಾರ್ ಹೆಗಡೆ ಹೇಳಿದ್ದರು. ಅವರ ಈ ಹೇಳಿಕೆಗೆ ಭಾರಿ ಪ್ರತಿಭಟನೆ ವ್ಯಕ್ತವಾಗಿತ್ತು. ದಲಿತ ಸಂಘಟನೆಗಳು ಅವರ ರಾಜೀನಾಮೆಗೆ ಕೇಳಿದ್ದರು. ಸಂಸತ್‌ನಲ್ಲಿಯೂ ಇದು ಪ್ರತಿಧ್ವನಿಸಿತ್ತು.

ಅನಂತ್‌ಕುಮಾರ್ ಹೆಗಡೆಗೆ ಅಭಿಮಾನಿಗಳೂ ಹೆಚ್ಚು
ನಗುತ್ತಲೇ ಬೆಂಕಿ ಉಗುಳುವ ಮಾತುಗಾರ ಅನಂತ್‌ಕುಮಾರ್ ಹೆಗಡೆ ಅವರಿಗೆ ರಾಜ್ಯದಲ್ಲಿ ಅಭಿಮಾನಿಗಳೂ ಹೆಚ್ಚಿದ್ದಾರೆ. ಅವರ ಹಿಂದುತ್ವ ಪರ ಮಾತುಗಳು ಅವರಿಗೆ ರಾಜ್ಯ ಬಿಜೆಪಿಯಲ್ಲಿ ವಿಶೇಷ ಸ್ಥಾನ ನೀಡಿದೆ. ಅವರಿಗೆ ಟಿಕೆಟ್ ನೀಡುವಂತೆ ಪಕ್ಷದ ಕಾರ್ಯಕರ್ತರೇ ಒತ್ತಾಯಿಸಬಹುದು.

ಬಿಜೆಪಿ ಟಿಕೆಟ್ ಹಂಚಿಕೆ ಹೇಗೆ?
ಯಡಿಯೂರಪ್ಪ ಅವರ ಮುಖಂಡತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಲೋಕಸಭೆ ಚುನಾವಣೆ ಎದುರಿಸಲಿದ್ದು, ಅವರೇ ಟಿಕೆಟ್ ಹಂಚಿಕೆಯನ್ನೂ ಅಂತಿಮಗೊಳಿಸಲಿದ್ದಾರೆ. ಅಮಿತ್ ಶಾ ಸೂಚನೆಯಂತೆ ಆಂತರಿಕ ಸಮೀಕ್ಷೆ ನಡೆಸಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುತ್ತದೆ. ಅನಂತ್‌ಕುಮಾರ್ ಅವರ ಕ್ಷೇತ್ರದಲ್ಲಿ ಅಲ್ಲಿಯ ಜನರ ಅಭಿಪ್ರಾಯ ಪಡೆದು ಅಭ್ಯರ್ಥಿ ಹಾಕಲಾಗುತ್ತದೆ.












Click it and Unblock the Notifications