ಹೊರಗೆ ವೀರಾವೇಶ, ಸದನಕ್ಕೆ ಗೈರು: ಬಿಜೆಪಿ ದ್ವಂದ್ವ ನೀತಿ
ಬೆಂಗಳೂರು, ಫೆಬ್ರವರಿ 22: ರಾಜ್ಯಪಾಲ ವಜುಭಾಯಿ ವಾಲಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಮಾಡಿದ್ದ ಭಾಷಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ರಾಜ್ಯದ ಬಿಜೆಪಿ ಸದಸ್ಯರು ಇಂದು ವಿಧಾನಸಭೆ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಬಗ್ಗೆ ಮಾತ್ರ ಅಸಡ್ಡೆ ತೋರಿದರು.
'ರಾಜ್ಯ ಸರ್ಕಾರವು ರಾಜ್ಯಪಾಲರ ಕೈಲಿ ಸುಳ್ಳು ಹೇಳಿಸಿದೆ' ಎಂದೆಲ್ಲಾ ವೀರಾವೇಶದಿಂದ ಮಾತನಾಡಿದ್ದ ಬಿಜೆಪಿ ಸದಸ್ಯರು ರಾಜ್ಯಪಾಲರ ಭಾಷಣದ ಬಗ್ಗೆ ಸಿದ್ದರಾಮಯ್ಯ ಅವರು ಉತ್ತರ ಹೇಳಬೇಕಾದರೆ ಮಾತ್ರ ಸದನದಿಂದ ಜಾಗ ಖಾಲಿ ಮಾಡಿ ಕ್ಯಾಂಟೀನ್‌ನಲ್ಲಿ ಹಾಜರಾದರು.
ವಜುಭಾಯಿವಾಲಾ ಅವರು ಫೆಬ್ರವರಿ 5ರಂದು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿ ರಾಜ್ಯ ಸರ್ಕಾರದ ಸಾಧನೆಗಳನ್ನು ಹೊಗಳಿದ್ದರು. ಆದರೆ ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತ್ತು. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಸಮಯ ಸಿದ್ದರಾಮಯ್ಯ ಉತ್ತರ ಹೇಳಲು ತಯಾರಾದಾಗ ಮಾತ್ರ ಬಿಜೆಪಿಯ ಬಹುತೇಕ ಸದಸ್ಯರು ಸದನದಿಂದ ಹೊರಗೆ ಹೋಗಿ ಬಿಟ್ಟಿದ್ದರು.

ರಾಜ್ಯಪಾಲರ ಭಾಷಣಕ್ಕೆ ಬಿಜೆಪಿಯ ವಿರೋಧವಿದ್ದ ಕಾರಣ ಚರ್ಚೆ ಕಾವೇರುವ ನಿರೀಕ್ಷೆ ಇತ್ತು ಆದರೆ ಬಿಜೆಪಿ ಸದಸ್ಯರ ದ್ವಂದ್ವ ನೀತಿಯಿಂದ ಇದು ಹುಸಿಯಾಯಿತು.
ಸಿದ್ದರಾಮಯ್ಯ ಅವರು ಉತ್ತರ ನೀಡುವ ವೇಳೆ ಬಿಜೆಪಿಯ ಸಿ.ಟಿ.ರವಿ, ಸುನೀಲ್ ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ, ಜೀವರಾಜ್, ದುರ್ಯೋಧನ ಐಹೊಳೆ, ಆನಂದ್ ಮಾಮನಿ, ಸಿ.ಪಿ.ಯೋಗೇಶ್ವರ್ ಮತ್ತಿತರ ಸದಸ್ಯರು ಕ್ಯಾಂಟೀನಿನಲ್ಲಿ ಕಾಲಕ್ಷೇಪ ಮಾಡುತ್ತಾ ಕಂಡುಬಂದರು.












Click it and Unblock the Notifications