BJP Manifesto: ಯುಗಾದಿ, ಗಣೇಶ ಹಬ್ಬ, ದೀಪಾವಳಿಗೆ ಗ್ಯಾಸ್ ಸಿಲಿಂಡರ್ ಉಚಿತ: ರಮ್ಜಾನ್, ಕ್ರಿಸ್ಮಸ್‌ಗೆ ಯಾಕೆ ಇಲ್ಲ?
ಬೆಂಗಳೂರು, ಮೇ 01: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಮುಂಬರುವ ಕರ್ನಾಟಕ ರಾಜ್ಯ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ಸೋಮವಾರ ಬಿಡುಗಡೆ ಮಾಡಿದರು. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಉಪಸ್ಥಿತರಿದ್ದರು. ವಿಪರ್ಯಾಸವೆಂದರೆ, ಉಚಿತ ಭರವಸೆಗಳ ವಿರುದ್ಧ ಮಾತನಾಡುತ್ತ ಬಂದಿರುವ ಬಿಜೆಪಿ ಸ್ವತಃ ಉಚಿತ ಭರವಸೆಗಳಿಗೆ ಮೊರೆ ಹೋಗಿದೆ.
ಬಡತನ ರೇಖೆಗಿಂತ ಕೆಳಗಿರುವ ಎಲ್ಲ ಕುಟುಂಬಗಳಿಗೆ ಯಾವುದೇ ಶುಲ್ಕವಿಲ್ಲದೆ ವರ್ಷಕ್ಕೆ ಮೂರು ಅಡುಗೆ ಅನಿಲ ಸಿಲಿಂಡರ್ ನೀಡುವುದಾಗಿಯೂ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ. ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿ ತಿಂಗಳುಗಳಲ್ಲಿ ಸಿಲಿಂಡರ್‌ಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಬಿಜೆಪಿ ಹೇಳಿದೆ.

ಉಚಿತ ಭರವಸೆಗಳಿಗೆ ಪ್ರಧಾನಿ ವಿರೋಧ
ಪ್ರತಿಪಕ್ಷಗಳ ಉಚಿತ ಭರವಸೆಗಳು ಮತ್ತು ತುಷ್ಟೀಕರಣ ರಾಜಕಾರಣವೇ ರಾಜ್ಯಗಳು ಸಾಲದ ಸುಳಿಯಲ್ಲಿ ಮುಳುಗಲು ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಕಾಂಗ್ರೆಸ್‌ನ ಗ್ಯಾರೆಂಟಿಗಳನ್ನು ತೀವ್ರವಾಗಿ ವಿರೋಧಿಸಿದ್ದಾರೆ. 'ಕಾಂಗ್ರೆಸ್ ಪಕ್ಷವೇ ಸುಳ್ಳು, ಭ್ರಷ್ಟಾಚಾರ, ಸ್ವಜನಪಕ್ಷಪಾತದ ಭರವಸೆಯಾಗಿದೆ. ಗ್ಯಾರಂಟಿಗಳನ್ನು ಮರೆತುಬಿಡಿ, ಅದರ ವಾರಂಟಿ ಬಹಳ ಹಿಂದೆಯೇ ಮುಗಿದಿದೆ' ಎಂದು ಅವರು ಹೇಳಿದ್ದಾರೆ.
ಉಚಿತ ಭರವಸೆ ಹಾಗೂ ತುಷ್ಟೀಕರಣದ ಬಗ್ಗೆ ಮಾತನಾಡಿರುವ ಮೋದಿ ಅಭಿಪ್ರಾಯಕ್ಕೆ ವಿರೋಧಭಾಸವಾಗಿ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
'ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿ ತಿಂಗಳುಗಳಲ್ಲಿ ಸಿಲಿಂಡರ್‌ಗಳನ್ನು ಉಚಿತವಾಗಿ ವಿತರಿಸಲಾಗುವುದು' ಎಂದು ಬಿಜೆಪಿ ಘೋಷಿಸಿದೆ. ಇದು ಉಚಿತ ಭರವಸೆ ಅಷ್ಟೇ ಅಲ್ಲದೇ ತುಷ್ಟೀಕರಣದ ನೆರಳನ್ನೂ ಹೊಂದಿದೆ ಎಂಬುದು ಮೇಲ್ನೋಟಕ್ಕೆ ಗೋಜರವಾಗುತ್ತಿದೆ.
ಯುಗಾದಿ, ಗಣೇಶ ಚತುರ್ಥಿ ಹಾಗೂ ದೀಪಾವಳಿಗಳು ಹಿಂದುಗಳ ಹಬ್ಬವಾಗಿವೆ. ಆ ಸಮಯದಲ್ಲಿ ಉಚಿತ ಸಿಲಿಂಡರ್ ನೀಡಲಾಗುವುದು ಎಂಬ ಬಿಜೆಪಿ ಘೋಷಣೆಯು ತುಷ್ಟೀಕರಣದ ಇನ್ನೊಂದು ಮುಖವಾಗಿದೆ ಎಂಬ ಮಾತುಗಳು ಕೇಳಿಬಂದಿವೆ.
ಯುಗಾದಿ, ಗಣೇಶ ಚತುರ್ಥಿ ಹಾಗೂ ದೀಪಾವಳಿಗಳಿಗೆ ಕೊಡುವ ಉಚಿತ ಸಿಲಿಂಡರ್‌ಗಳನ್ನು ರಮ್ಜಾನ್ ಹಾಗೂ ಕ್ರಿಸ್ಮಸ್‌ಗೆ ನೀಡುವ ಭವರಸೆಯನ್ನು ಏಕೆ ಕೊಟ್ಟಿಲ್ಲ ಎಂಬ ಪ್ರಶ್ನೆಯೂ ಎದ್ದಿದೆ. ರಮ್ಜಾನ್ ಮುಸ್ಲಿಮರಿಗೆ ಪವಿತ್ರ ಹಬ್ಬವಾದರೆ, ಕ್ರಿಶ್ಚಿಯನ್ನರಿಗೆ ಕ್ರಿಸ್ಮಸ್ ಪವಿತ್ರ ಹಬ್ಬವಾಗಿದೆ.
ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಪ್ರಧಾನಿ ಮೋದಿ ಅವರ ಹೇಳಿಕೆಗೆ ಬಿಜೆಪಿ ಪ್ರಣಾಳಿಕೆ ವಿರೋಧಭಾಸವನ್ನು ತೋರಿಸಿದೆ. ಹಿಂದುಗಳ ತುಷ್ಟಿಕರಣ ಹಾಗೂ ಉಚಿತ ಭರವಸೆಗಳಿಗೆ ಬಿಜೆಪಿ ಮೊರೆ ಹೋಗಿರುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಕೇಳಿಬಂದಿವೆ.
ಕಾಂಗ್ರೆಸ್ ಇದುವರೆಗೆ ಐದು ಚುನಾವಣಾ ಖಾತರಿಗಳನ್ನು ಘೋಷಿಸಿದೆ. ಎಲ್ಲಾ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ (ಗೃಹ ಜ್ಯೋತಿ), ಪ್ರತಿ ಕುಟುಂಬದ ಮಹಿಳೆಗೆ ಮಾಸಿಕ 2,000 ರೂ (ಗೃಹ ಲಕ್ಷ್ಮಿ), ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ಉಚಿತ ಬಿಪಿಎಲ್ ಕುಟುಂಬ (ಅನ್ನ ಭಾಗ್ಯ), ಮತ್ತು ಪದವೀಧರ ಯುವಕರಿಗೆ ಪ್ರತಿ ತಿಂಗಳು ರೂ 3,000 ಮತ್ತು ಡಿಪ್ಲೊಮಾ ಹೊಂದಿರುವವರಿಗೆ (ಇಬ್ಬರೂ 18-25 ವರ್ಷ ವಯಸ್ಸಿನವರು) ಎರಡು ವರ್ಷಗಳವರೆಗೆ (ಯುವನಿಧಿ) 1,500 ರೂ ಹಾಗೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಖಾತರಿಯನ್ನು ಕಾಂಗ್ರೆಸ್ ನೀಡಿದೆ.












Click it and Unblock the Notifications